42ನೇ ವಸಂತಕ್ಕೆ ಕಾಲಿಟ್ಟಿರುವ ಅಲ್ಲು ಅರ್ಜುನ್‌ಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಇದರ ನಡುವೆಯೇ ‘ಪುಷ್ಪ 2’ ಚಿತ್ರತಂಡ ಪವರ್‌ ಪ್ಯಾಕ್‌ ಟೀಸರ್‌ ರಿಲೀಸ್‌ ಮಾಡಿದ್ದು, ಪುಷ್ಪರಾಜನ ಹೊಸ ಅವತಾರಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ‘ಪುಷ್ಪ 2’ ಮಾಸ್‌ ಜಾತ್ರೆ ಎಂದು ಆಚರಿಸುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್‌ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಚಿತ್ರತಂಡ ‘ಪುಷ್ಪ 2’ ಟೀಸರ್‌ ರಿಲೀಸ್‌ ಮಾಡಿದೆ. ಟೀಸರ್‌ ರಿಲೀಸ್‌ಗೂ ಮುನ್ನ ಕೆಲ ದಿನಗಳಿಂದ ಚಿತ್ರತಂಡ ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಾ ಕುತೂಹಲ ಕೆರಳಿಸುತ್ತಾ ಬಂದಿತ್ತು. ಈಗ ಆ ಕೂತೂಹಲ ಮತ್ತಷ್ಟು ಹೆಚ್ಚಾಗಿದೆ. ಕೊನೆಗೂ ಒಂದು ನಿಮಿಷ 8 ಸೆಕೆಂಡ್‌ನ ಟೀಸರ್‌ ಬಿಡುಗಡೆಯಾಗಿದ್ದು, ಪುಷ್ಪರಾಜನ ಹೊಸ ಅವತಾರಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

ಸೀರೆಯುಟ್ಟ ಪುಷ್ಪರಾಜ್‌, ಹಣೆ ತುಂಬಾ ಕುಂಕುಮ, ಮುಖಕ್ಕೆ ಮೇಕಪ್‌ ಮಾಡಿಕೊಂಡು ಕಾಲಿಗೆ ಗೆಜ್ಜೆ, ಕೈಗೆ ಬಳೆ, ಮೈ ತುಂಬಾ ಆಭರಣ ಧರಿಸಿ ಕೈಯಲ್ಲಿ ತ್ರಿಶೂಲ ತಿರುಗಿಸುತ್ತಾ ಫೈಟ್‌ ಮಾಡುವ ದೃಶ್ಯ ಅಭಿಮಾನಿಗಳಿಗೆ ಇಷ್ಟವಾಗಿದೆ. ಟೀಸರ್‌ ನೋಡಿದರೆ, ‘ಪುಷ್ಪ 2’ ಚಿತ್ರ ಸಖತ್‌ ಆಕ್ಷನ್‌ ಸೀಕ್ವೆನ್ಸ್‌ಗಳ ರಸದೌತಣ ಬಡಿಸಲಿದೆ ಅನ್ನೋದು ಖಚಿತವಾಗಿದೆ. ಇನ್ನು ಟೀಸರ್‌ನಲ್ಲೂ ಸಹ ಜಾತ್ರೆಯ ಸಮಯದಲ್ಲಿ ನಡೆಯುವ ಸಾಹಸ ದೃಶ್ಯವನ್ನೇ ತೋರಿಸಲಾಗಿದೆ. ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಕನ್ನಡದ ಧನಂಜಯ್ ‘ಪುಷ್ಪ 2’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಟೀಸರ್‌ ನೋಡಿದ ಮೇಲೆ ಸಿನಿಮಾ ಬಗ್ಗೆ ಇರೋ ನಿರೀಕ್ಷೆ ಬೆಟ್ಟದಷ್ಟಾಗಿದೆ. ಈ ಪ್ಯಾನ್‌ ಇಂಡಿಯಾ ಸಿನಿಮಾ ಇದೇ ಆಗಸ್ಟ್ 15ರಂದು ರಿಲೀಸ್ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here