ನಟ ಸುದೀಪ್‌ ಮತ್ತು ಚಿತ್ರನಿರ್ಮಾಪಕ ಎನ್‌ ಕುಮಾರ್‌ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ. ಚಿತ್ರನಿರ್ಮಾಪಕ ಎನ್‌ ಕುಮಾರ್‌ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ನ್ಯಾಯಕ್ಕಾಗಿ ಧರಣಿ ಕೂತಿದ್ದಾರೆ. ಮತ್ತೊಂದೆಡೆ ನಟ ಸುದೀಪ್‌ ಸಮಸ್ಯೆ ಕಾನೂನು ರೀತ್ಯ ಇತ್ಯರ್ಥವಾಗಲಿ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಮೊನ್ನೆ ಶನಿವಾರ ನಟ ಸುದೀಪ್‌ ಅವರು ಚಿತ್ರನಿರ್ಮಾಪಕ ಎನ್‌ ಕುಮಾರ್‌ ಅವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರು. ಇಂದು ಎನ್‌ ಕುಮಾರ್‌ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಧರಣಿ ಕುಳಿತಿದ್ದಾರೆ. ನಿರ್ಮಾಪಕರ ಸಂಘ ಅವರ ಬೆನ್ನಿಗೆ ನಿಂತಿದೆ. ಕುಮಾರ್‌ ಅವರೊಂದಿಗೆ ಕೆಲ ನಿರ್ಮಾಪಕರು ಧರಣಿಗೆ ಜೊತೆಯಾಗಿದ್ದು ಈಗ ವಿವಾದ ದೊಡ್ಡದಾಗಿದೆ. ತಾವು ನ್ಯಾಯಾಲಕ್ಕೆ ಹೋಗಲು ಸಿದ್ಧರಿಲ್ಲ, ವಾಣಿಜ್ಯ ಮಂಡಳಿಯಲ್ಲೇ ಸಮಸ್ಯೆ ಇತ್ಯರ್ಥವಾಗಬೇಕು ಎಂದು ನಿರ್ಮಾಪಕ ಎನ್‌ ಕುಮಾರ್‌ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾತನಾಡುವ ಕುಮಾರ್‌, ‘ಸಾಕಷ್ಟು ದಿನಗಳು ಕಳೆದರೂ ಸುದೀಪ್‌ ಅವರಿಂದ ನಮ್ಮ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ವಾಣಿಜ್ಯ ಮಂಡಳಿ ಎದುರು ನಾನು ಎಲ್ಲಾ ದಾಖಲೆ ಇಡಲು ಸಿದ್ಧನಿದ್ದೇನೆ. ಅವರು ಬರದೇ ಇದ್ದರೆ ನಾವೇನು ಮಾಡಲು ಸಾಧ್ಯ? ಈಗಲೂ ಕಾಲ ಮಿಂಚಿಲ್ಲ. ಅವರು ವಾಣಿಜ್ಯ ಮಂಡಳಿಯಲ್ಲಿ ನೇರವಾಗಿ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಲಿ’ ಎನ್ನುತ್ತಾರೆ.

ಸಿನಿಮಾಗೆ ಸಂಬಂಧಿಸಿದ ಸಮಸ್ಯೆಗಳು ಮಾತೃಸಂಸ್ಥೆ ವಾಣಿಜ್ಯ ಮಂಡಳಿಯಲ್ಲೇ ಬಗೆಹರಿಯಬೇಕು ಎನ್ನುವುದು ಕುಮಾರ್‌ ಅವರ ವಾದ. ಕೆಲವು ದಾಖಲೆಗಳನ್ನು ಎಲ್ಲರ ಮುಂದೆ ತಂದಿಡಲು ಸಾಧ್ಯವಿಲ್ಲ. ಅದು ಔಚಿತ್ಯವೂ ಅಲ್ಲ. ಇದರಿಂದ ಇತರರ ಘನತೆಗೆ ದಕ್ಕೆಯುಂಟಾಗುತ್ತದೆ. ಇದರ ಬದಲು ಹಿರಿಯರ ಸಮ್ಮುಖದಲ್ಲಿ ವಾಣಿಜ್ಯ ಮಂಡಳಿಯಲ್ಲೇ ಮಾತುಕತೆ ಆಗಲಿ ಎನ್ನುತ್ತಾರವರು. ಸುದೀಪ್‌ ಅವರಿಂದ ಬಂದಿರುವ ಕೋರ್ಟ್‌ ನೋಟೀಸ್‌ಗೆ ಎನ್‌ ಕುಮಾರ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆಯೇ? ‘ಹೌದು ನನಗೆ ನೋಟೀಸ್‌ ಬಂದಿತ್ತು. ಇಂಗ್ಲಿಷ್‌ನಲ್ಲಿದ್ದ ಅದರ ಒಕ್ಕಣಿ ನನಗೆ ಅರ್ಥವಾಗಿಲ್ಲ. ಕನ್ನಡದಲ್ಲಿ ನೋಟೀಸ್‌ ಕೊಡಿ ಎಂದು ನಾವು ಮನವಿ ಮಾಡಿದ್ದೇನೆ’ ಎನ್ನುವ ಅವರು ವಾಣಿಜ್ಯ ಮಂಡಳಿಯಲ್ಲೇ ಸಮಸ್ಯೆ ಇತ್ಯರ್ಥವಾಗಲಿ ಎಂದು ಆಶಿಸುತ್ತಾರೆ. ‘ಈ ಹಿಂದೆಯೂ ಇಂತಹ ಹಲವಾರು ಸಮಸ್ಯೆಗಳು ವಾಣಿಜ್ಯ ಮಂಡಳಿಯಲ್ಲೇ ಬಗೆಹರಿದಿವೆ. ನಾನು ಸುದೀಪ್‌ ಅವರಿಂದ ಸಹಾಯ ಕೇಳುತ್ತಿಲ್ಲ. ನಮಗಾಗಿರುವ ತೊಂದರೆ ಸರಿಪಡಿಸಿ ಎಂದಿದ್ದೇನೆ. ಸಿನಿಮಾರಂಗದಲ್ಲಿ ಪ್ರೀತಿಯಿಂದ ನಡೆದರಷ್ಟೇ ವ್ಯವಹಾರ’ ಎನ್ನುತ್ತಾರೆ ಕುಮಾರ್‌.

ನಿರ್ಮಾಪಕರ ಸಂಘದ ಬೆಂಬಲ | ನಿರ್ಮಾಪಕ ಎನ್‌ ಕುಮಾರ್‌ ಅವರ ಹೋರಾಟಕ್ಕೆ ಚಿತ್ರನಿರ್ಮಾಪಕ ಸಂಘ ಬೆಂಬಲ ಸೂಚಿಸಿದೆ. ಇಂದು ನಡೆದ ಧರಣಿಯಲ್ಲಿ ಟೇಶಿ ವೆಂಕಟೇಶ್‌, ಜೆ ಜಿ ಕೃಷ್ಣ ಸೇರಿದಂತೆ ಹಲವು ನಿರ್ಮಾಪಕರು ಕುಮಾರ್‌ ಅವರ ಬೆಂಬಲಕ್ಕೆ ನಿಂತಿದ್ದರು. ನಿರ್ಮಾಪಕ ಟೇಶಿ ವೆಂಕಟೇಶ್‌ ಅವರು ಮಾತನಾಡಿ, ‘ಏಳೆಂಟು ದಶಕಗಳ ವಾಣಿಜ್ಯ ಮಂಡಳಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿತ್ರನಿರ್ಮಾಪಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ. ಸಿನಿಮಾ ಉದ್ಯಮ ಬೇರೆಲ್ಲಾ ಉದ್ಯಮದಂತಲ್ಲ. ಏನೇ ವಿವಾದಗಳಿದ್ದರೂ ವಾಣಿಜ್ಯ ಮಂಡಳಿಯಲ್ಲೇ ಅವು ತೀರ್ಮಾನವಾಗಬೇಕು. ಈ ವಿವಾದ ಶುರುವಾದಾಗಲೇ ನಾನು ಜಾಕ್‌ ಮಂಜು ಅವರ ಮುಖಾಂತರ ಸುದೀಪ್‌ರಿಗೆ ಸಮಸ್ಯೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದೆ. ಆದರೆ ನಮ್ಮ ಮನವಿ ಮೀರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮೂಲಕ ಚಿತ್ರರಂಗದ ಶಿಸ್ತನ್ನು ಬುಡಮೇಲು ಮಾಡುವ ಪ್ರಯತ್ನಕ್ಕೆ ಹೋಗಿದ್ದಾರೆ. ದಯವಿಟ್ಟು ಈ ನಡೆ ಬೇಡ. ವಾಣಿಜ್ಯ ಮಂಡಳಿಗೆ ಬನ್ನಿ. ವಿವಿಧ ವಿಭಾಗಗಳ ಹಿರಿಯರು ಇಲ್ಲಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಸಮಸ್ಯೆ ಇತ್ಯರ್ಥವಾಗಲಿ’ ಎನ್ನುತ್ತಾರೆ.

ಹಿರಿಯ ಚಿತ್ರನಿರ್ಮಾಪಕ ಜೆ ಜಿ ಕೃಷ್ಣ ಅವರು ಎನ್‌ ಕುಮಾರ್‌ ಪರ ಮಾತನಾಡಿ, ‘ಮಾಧ್ಯಮದ ಎದುರು ಹೋಗುವ ಮುನ್ನ ನಿರ್ಮಾಪಕ ಕುಮಾರ್‌ ಹಲವಾರು ಬಾರಿ ಸುದೀಪ್‌ರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ನಿರ್ಮಾಪಕ ಸಂಘದ ಅ‍ಧ್ಯಕ್ಷರೂ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಯಾವುದಕ್ಕೂ ಸ್ಪಂದನೆ ಸಿಗದೇ ಇದ್ದಾಗ ಕುಮಾರ್‌ ಮಾಧ್ಯಮದ ಮುಂದೆ ಬರಬೇಕಾಯ್ತು. ಹಾಗೆ ನೋಡಿದರೆ ಕುಮಾರ್‌ ಅವರೇ ಮೊದಲು ಕೋರ್ಟ್‌ಗೆ ಹೋಗಬೇಕಿತ್ತು. ಸಿನಿಮಾ ಉದ್ಯಮದಲ್ಲಿ ಒಳ ವ್ಯವಹಾರಗಳೇ ಜಾಸ್ತಿ. ಇವೆಲ್ಲಾ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗಳು. ಹೀಗೆ ಕೋರ್ಟ್‌, ಕಚೇರಿ ಅಂತ ಹೋದರೆ ಚಿತ್ರರಂಗ ಹಾಳಾಗುತ್ತದೆ’ ಎನ್ನುತ್ತಾರೆ. ಇನ್ನೂ ಕೆಲವು ನಿರ್ಮಾಪಕರು ಕೂಡಲೇ ಚಿತ್ರರಂಗದ ಹಿರಿಯರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ನಟರಾದ ಶಿವರಾಜಕುಮಾರ್‌, ರವಿಚಂದ್ರನ್‌ ಅವರ ಮಧ್ಯಸ್ಥಿಕೆಯಲ್ಲಿ ವಿವಾದ ತಿಳಿಯಾಬೇಕು ಎಂದು ಹಿತೈಷಿಗಳು ಆಶಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here