ಅರವಿಂದ ಕುಪ್ಳೀಕರ್ ನಿರ್ದೇಶನದ ʼಪುಕ್ಸಟ್ಟೆ ಲೈಫುʼ ಇತ್ತೀಚಿನ ದಿನಗಳಲ್ಲಿ ತೆರೆಕಂಡ ಕನ್ನಡದ ಉತ್ತಮ ಚಿತ್ರಗಳಲ್ಲೊಂದು. ಥಿಯೇಟರ್‌ನಲ್ಲಿ ತೆರೆಕಂಡ ಸಂದರ್ಭದಲ್ಲಿ ಈ ಸಿನಿಮಾ ಕುರಿತು ಹೆಚ್ಚು ಚರ್ಚೆ ಆಗದಿದ್ದುದು ವಿಪರ್ಯಾಸ – ಬಾಲು ವಿ.ಎಲ್. ಅವರ ವಿಶ್ಲೇಷಣೆ
ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಪುಕ್ಸಟ್ಟೆ ಲೈಫುʼ ಒಂದು ಸರಳ, ನೇರ ನಿರೂಪಣೆಯ ಸಿನಿಮಾ. ಈ ಚಿತ್ರದಲ್ಲಿ ಒಂದು ಪಾತ್ರದಲ್ಲೂ ನಟಿಸಿರುವ ಚಿತ್ರದ ನಿರ್ದೇಶಕ ಅರವಿಂದ ಕುಪ್ಳೀಕರ್ ಎಲ್ಲೂ ಬೋರಾಗದಂತೆ ಚಿತ್ರವನ್ನು ಮಾಡಿದ್ದಾರೆ. ನಿಜವಾಗ್ಯೂ ಒಂದು ಉತ್ತಮ ಪ್ರಯತ್ನ ಎಂದು ಹೇಳಬಹುದು. ಈ ಚಿತ್ರದ ರೈಟಿಂಗ್, ಅಭಿನಯ, ಎಗ್ಸಿಗ್ಯೂಷನ್, ಎಲ್ಲೂ ಕ್ಲೀಷೆಗಳಿಲ್ಲದೆ, ಪ್ರೇಕ್ಷಕರನ್ನು ಗೊಂದಲಕ್ಕೀಡುಮಾಡದೆ, ಮೆಸೇಜ್ ಇಲ್ಲವೇ ಮಲ್ಟಿಲೇಯರ್ ಎಂದು ಓವರ್ ಲೋಡ್ ಮಾಡದೆ, ಭಾವನೆಗಳನ್ನು ಕೆರಳಿಸದೆ ನಿರ್ದೇಶಕರು ಸಿನಿಮಾ ನಿರೂಪಿಸಿದ್ದಾರೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಾಗ ಯಶಸ್ವಿಯಾಗಬೇಕಾಗಿತ್ತು. ರಿಲೀಸ್ ಸಂದರ್ಭದಲ್ಲಿ ಈ ಸಿನಿಮಾ ಕುರಿತು ಹೆಚ್ಚು ಚರ್ಚೆ ಆಗದಿದ್ದುದು ವಿಪರ್ಯಾಸ.
ಒಂದು ಸಣ್ಣ ಎಳೆಯ ಸುತ್ತ ಕತೆ ಹೆಣೆದಿದ್ದಾರೆ. ಒಬ್ಬ ಬೀಗ ರಿಪೇರಿ ಮಾಡುವವನ ಬುದುಕು, ಪೊಲೀಸ್ ವ್ಯವಸ್ಥೆಯ ದುರಾಸೆ, ಮತ್ತೆ ಈ ವ್ಯವಸ್ಥೆಯೂ ಸಹ ಸಮಾಜದ ಒಂದು ಭಾಗ, ಅಲ್ಲಿನ ಆರ್ಥಿಕ ಅಸಮಾನತೆಗಳು, ಇಲಾಖೆಯ ಮಿತಿಗಳನ್ನು ಸಶಕ್ತವಾಗಿ ಕಟ್ಟಿಕೊಡದಿದ್ದರೂ, ಸರಳವಾಗಿ ಸಾಮಾನ್ಯ ಮನುಷ್ಯನಿಗೆ ತಲುಪುವ ಹಾಗೆ ಹೇಳಿದ್ದಾರೆ ನಿರ್ದೇಶಕರು. ನಿರ್ದೇಶಕರು ತಮ್ಮ ಮುಂದಿನ ಚಿತ್ರದಲ್ಲಿ ಎಂತಹ ವಸ್ತು ಆಯ್ಕೆ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ಕುತೂಹಲವಂತೂ ಇದೆ. ಖಂಡಿತಾ ಅವರ ಮುಂದಿನ ಸಬ್ಜೆಕ್ಟ್‌ಗಳನ್ನು ಗಮನಿಸಬೇಕು.
ಸಂಚಾರಿ ವಿಜಯ್, ರಂಗಾಯಣ ರಘು, ಅಚ್ಯುತ್ ಕುಮಾರ್ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಕೆಲವೇ ನಿಮಿಷ ಬಂದು ಹೋಗುವ ತಾಯಿ ಪಾತ್ರವನ್ನೂ ಮನಮುಟ್ಟುವಂತೆ ಕಟ್ಟಿದ್ದಾರೆ. ಎಲ್ಲೂ ಓವರ್ ಡ್ರಾಮಾ, ಓವರ್ ಆಕ್ಟಿಂಗ್ ಇಲ್ಲ. ಸಂಚಾರಿ ವಿಜಯ್ ಅವರ ಉತ್ತಮ ಅಭಿನಯಕ್ಕಾಗಿಯಾದರೂ ಈ ಸಿನಿಮಾವನ್ನು ನೋಡಬೇಕು. ಚಿತ್ರದಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಸಾಮಾನ್ಯವಾಗಿ ನಮ್ಮ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಧಾರಿಗಳಲ್ಲಿ ನಟರೇ ಹೆಚ್ಚಾಗಿ ಕಾಣಿಸಿಕೊಳ್ಳುವುದಿದೆ. ಈ ಚಿತ್ರದಲ್ಲಿ ಲೇಡಿ ಪೊಲೀಸರಿದ್ದಾರೆ. ಅವರೂ ಸಹ ಪೊಲೀಸ್ ವ್ಯವಸ್ಥೆಯ ದುರುಳುತನ ಮೈಗೂಡಿಸಿಕೊಂಡಂತೆ ಕಾಣಿಸುತ್ತಾರೆ. ಅವರದ್ದೂ ಉತ್ತಮ ಅಭಿನಯ. ಈ ಪಾತ್ರಗಳ ಪ್ಲೇಸ್‌ಮೆಂಟ್, ಕ್ರಾಫ್ಟ್ ಸಹಜತೆಗೆ ಹತ್ತಿರವಾಗಿದೆ. ಭಾವನೆಗಳನ್ನು ಬಡಿದೆಬ್ಬಿಸದ ಸರಳ ಸಿನಿಮಾ. ನಿರ್ದೇಶಕರು ಒಂದೊಳ್ಳೆಯ ಸಂದೇಶವನ್ನೂ ದಾಟಿಸಲು ಪ್ರಯತ್ನಿಸಿದ್ದಾರೆ. ಕುಟುಂಬಸಮೇತರಾಗಿ ನೋಡಬಹುದಾದ ಸಿನಿಮಾ ʼಪುಕ್ಸಟ್ಟೆ ಲೈಫುʼ.