ಖ್ಯಾತ ತುಳು ಸಿನಿಮಾ ನಟ ಮತ್ತು ನಿರ್ದೇಶಕ ದೇವದಾಸ್ ಕಾಪ್ಪಿಕಾಡ್ ನಿರ್ದೇಶನದ ಚೊಚ್ಚಲ ಕನ್ನಡ ಸಿನಿಮಾ ‘ಪುರುಷೋತ್ತಮನ ಪ್ರಸಂಗ’ ತೆರೆಗೆ ಸಿದ್ಧವಾಗಿದೆ. ಅಜಯ್ ಮತ್ತು ರಿಷಿಕಾ ನಾಯ್ಕ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನೈಜ ಘಟನೆ ಆಧರಿಸಿದ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.
ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ದೇವದಾಸ್ ಕಾಪ್ಪಿಕಾಡ್ ನಿರ್ದೇಶನದ ‘ಪುರುಷೋತ್ತಮನ ಪ್ರಸಂಗ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದು ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಕುರಿತು ಮಾತನಾಡಿದ ನಿರ್ದೇಶಕರು, ‘ತುಳುವಿನಲ್ಲಿ ಒಂಬತ್ತು ಸಿನಿಮಾಗಳನ್ನು ನಿರ್ದೇಶಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಕೌಟುಂಬಿಕ ಕಥಾಹಂದರ ಹೊಂದಿರುವ ನೈಜಘಟನೆ ಆಧಾರಿತ ಚಿತ್ರ. ಪುರುಷೋತ್ತಮನ ಪಾತ್ರದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಅಭಿನಯಿಸಿದ್ದಾರೆ. ಈ ಪಾತ್ರಕ್ಕೆ ಹೇಳಿಮಾಡಿಸಿದ ನಟ ಅಜಯ್’ ಎಂದರು. ಹೀರೋ ಅಜಯ್ ಹೊರದೇಶದಲ್ಲಿ ಸಿನಿಮಾ ಕುರಿತು ಅಧ್ಯಯನ ಮಾಡಿ ಬಂದಿದ್ದಾರೆ.
ರಿಷಿಕಾ ನಾಯ್ಕ್ ಈ ಚಿತ್ರದ ನಾಯಕಿ. ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಕಲಾವಿದರು ಹಾಗೂ ನಿರ್ದೇಶಕ ದೇವದಾಸ್ ಕಾಪ್ಪಿಕಾಡ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಪುತ್ರ ಅರ್ಜುನ್ ಸಹನಿರ್ದೇಶನ ಚಿತ್ರಕ್ಕಿದೆ. ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನದಲ್ಲಿ ನಾಲ್ಕು ಹಾಡುಗಳು ಮೂಡಿಬಂದಿದೆ. ಜಯಂತ ಕಾಯ್ಕಿಣಿ, ದೊಡ್ಡರಂಗೇಗೌಡ, ವಿ ನಾಗೇಂದ್ರ ಪ್ರಸಾದ್ ಮತ್ತು ದೇವದಾಸ್ ಚಿತ್ರಕ್ಕೆ ಹಾಡುಗಳನ್ನು ರಚಿಸಿದ್ದಾರೆ. ವಿಷ್ಣು ಚಿತ್ರದ ಛಾಯಾಗ್ರಾಹಕರು. ಮಂಗಳೂರು ಹಾಗೂ ದುಬೈನಲ್ಲಿ ಚಿತ್ರೀಕರಣ ನಡೆದಿದ್ದು, ಫೆಬ್ರವರಿ ಮಧ್ಯದಲ್ಲಿ ಚಿತ್ರವನ್ನು ತೆರೆಗೆ ತರುವುದು ನಿರ್ಮಾಪಕರ ಯೋಜನೆ. ‘ನಾನು ಈ ಹಿಂದೆ ‘ಕಿಸ್’, ‘ಮೆಹಬೂಬ’, ‘ನಾಟ್ ಔಟ್’ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು’ ಎಂದರು ಅಜಯ್. ಚಿತ್ರವನ್ನು Rashtrakuta Pictures ಬ್ಯಾನರ್ ಅಡಿಯಲ್ಲಿ ವಿ ರವಿ ಕುಮಾರ್ ನಿರ್ಮಿಸುತ್ತಿದ್ದಾರೆ.