ರಾಧಿಕಾ ಕುಮಾರಸ್ವಾಮಿ ಅಭಿನಯದ ಸೈಕಲಾಜಿಕಲ್‌ ಕ್ರೈಂ – ಥ್ರಿಲ್ಲರ್‌ ‘ಅಜಾಗ್ರತ’ ಸಿನಿಮಾಗೆ ಚಾಲನೆ ಸಿಕ್ಕಿದೆ. ಎಂ ಶಶಿಧರ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದ ಹೀರೋ ಆಗಿ ಬಾಲಿವುಡ್‌ ನಟ ಶ್ರೇಯಸ್‌ ತಲ್ಪಾಡೆ ನಟಿಸುತ್ತಿದ್ದಾರೆ. ಚಿತ್ರಕ್ಕೆ ಏಳು ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಸಲಾಗುತ್ತಿದೆ ಎನ್ನುವುದು ವಿಶೇಷ.

ಕೆಲ ವರ್ಷಗಳ ಬ್ರೇಕ್‌ನ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಮರಳಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ಅಜಾಗ್ರತ’ ಚಿತ್ರದ ಮುಹೂರ್ತ ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋದಲ್ಲಿ ನೆರವೇರಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ ಎಂ ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರೆ, ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಈ ಚಿತ್ರದ ಹೀರೋ. ಇದೊಂದು ಸೈಕಲಾಜಿಕಲ್‌ ಕ್ರೈಂ – ಥ್ರಿಲ್ಲರ್‌ ಕಥಾವಸ್ತು ಆಗಿದ್ದು, ತಮ್ಮ ವೃತ್ತಿ ಬದುಕಿಗೆ ತಿರುವಾಗಲಿದೆ ಎನ್ನುತ್ತಾರೆ ನಟಿ ರಾಧಿಕಾ ಕುಮಾರಸ್ವಾಮಿ.

ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಡಬ್‌ ಮಾಡದೆ ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರ ರವಿರಾಜ್‌. ರಾವ್ ರಮೇಶ್‌, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಇರಲಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ಇನ್ನು ರಾಧಿಕಾ ಅವರ ‘ಭೈರಾದೇವಿ’ ಸಿನಿಮಾ ತೆರೆಗೆ ಸಿದ್ಧವಾಗಿದೆ. ‘RX Soori’ ಸಿನಿಮಾ ಖ್ಯಾತಿಯ ಶ್ರೀಜೈ ನಿರ್ದೇಶನದ ಚಿತ್ರವಿದು. 2002ರಲ್ಲಿ ‘ನೀಲ ಮೇಘ ಶ್ಯಾಮ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ರಾಧಿಕಾ ಅವರ ವೃತ್ತಿ ಬದುಕಿಗೀಗ ಎರಡು ದಶಕಗಳು.

LEAVE A REPLY

Connect with

Please enter your comment!
Please enter your name here