ರಾಘು ಶಿವಮೊಗ್ಗ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ನೂತನ ಸಿನಿಮಾದ ಶೀರ್ಷಿಕೆಯನ್ನು ನಟ ದುನಿಯಾ ವಿಜಯ್‌ ಲಾಂಚ್‌ ಮಾಡಿದ್ದಾರೆ. ‘ತುಕ್ರ – ತನಿಯ’ ಎನ್ನುವ ವಿಶಿಷ್ಟ ಶೀರ್ಷಿಕೆ ಈ ಚಿತ್ರದ್ದು.

ರಂಗಭೂಮಿ ಹಿನ್ನೆಲೆಯ ರಾಘು ಶಿವಮೊಗ್ಗ ಚಿತ್ರನಿರ್ದೇಶಕ, ನಟರಾಗಿ ಗುರುತಿಸಿಕೊಂಡವರು. ಅವರ ನಿರ್ದೇಶನದ ‘ಚೂರಿ ಕಟ್ಟೆ’, ‘ಪೆಂಟಗನ್‌’ ಚಿತ್ರಗಳು ಮೇಕಿಂಗ್‌ನಿಂದಾಗಿ ಗಮನ ಸೆಳೆದ ಪ್ರಯೋಗಗಳು. ಇದೀಗ ರಾಘು ನಿರ್ದೇಶನದ ಮೂರನೇ ಸಿನಿಮಾ ಘೋಷಣೆಯಾಗಿದೆ. ನಟ ದುನಿಯಾ ವಿಜಯ್‌ ಅವರು ಚಿತ್ರದ ಶೀರ್ಷಿಕೆ ಲಾಂಚ್‌ ಮಾಡಿದ್ದಾರೆ. ‘ತುಕ್ರ – ತನಿಯ’ ಎನ್ನುವ ವಿಶಿಷ್ಟ ಶೀರ್ಷಿಕೆ ಚಿತ್ರದ್ದು! ‘ತುಕ್ರ ಅಂದರೆ ಶುಕ್ರವಾರ ಹುಟ್ಟಿದವನು. ತನಿಯ ಅಂದರೆ ಶನಿವಾರ ಹುಟ್ಟಿದವನು. ಶುಕ್ರವಾರ – ಶನಿವಾರ ಹುಟ್ಟಿದ ಇಬ್ಬರ ನಡುವಿನ ಕಥಾಹಂದರ ಇದಾಗಿದೆ’ ಎನ್ನುತ್ತಾರೆ ನಿರ್ದೇಶಕ ರಾಘು. ಪ್ರವೀಣ್ ತೇಜ್ ಹಾಗೂ ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರವನ್ನು ಪದ್ಮಾ ಪಿಕ್ಚರ್ಸ್ ಹಾಗೂ ಗೌರಿ ಟಾಕೀಸ್‌ನಡಿ ನಿರ್ಮಾಣ ಮಾಡಲಾಗುತ್ತಿದೆ.

ಡಿಸೆಂಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಚಿತ್ರೀಕರಣ ನಡೆಸುವುದು ಚಿತ್ರತಂಡದ ಯೋಜನೆ. ಶಾಂತಿ ಸಾಗರ್ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ, ಪ್ರಕಾಶ್ ಕಾರಿಂಜ ಸಂಕಲನ ಚಿತ್ರಕ್ಕೆ ಇರಲಿದೆ. ನಿರ್ದೇಶನದ ಕನಸಿನೊಂದಿಗೆ ಚಿತ್ರರಂಗಕ್ಕೆ ಬಂದಿದ್ದ ರಾಘು, ಮೊದಲು ‘ಚೌಕಬಾರ’ ಕಿರುಚಿತ್ರ ಮಾಡಿದರು. ಆ ಸಿನಿಮಾವನ್ನು ಥಿಯೇಟರ್‌ಗೆ ರಿಲೀಸ್ ಮಾಡಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆನಂತರ ‘ಚೂರಿಕಟ್ಟೆ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು. ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯ್ತು. ಅವರಿಗೂ ಒಳ್ಳೆಯ ಹೆಸರು ಬಂತು. ನಂತರ ‘ಆಕ್ಟ್ 1978’ ಸಿನಿಮಾಗೆ ನಟರಾಗಿ ಪ್ರವೇಶ ಮಾಡಿದರು. ಈ ಸಿನಿಮಾದಲ್ಲಿನ ಪಾತ್ರ ಅವರನ್ನು ಬ್ಯುಸಿ ನಟನನ್ನಾಗಿ ಮಾಡಿತು. ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿ ಅಭಿನಯಿಸಿದ ಅವರೀಗ ನಿರ್ದೇಶನಕ್ಕೆ ಮರಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here