ಖ್ಯಾತಿ ಕಾದಂಬರಿಕಾರ ಕುಂ ವೀರಭದ್ರಪ್ಪ ಅವರ ಕೃತಿಯನ್ನು ಆಧರಿಸಿದ ‘ಕುಬುಸ’ ಇಂದು (ಜುಲೈ 26) ತೆರೆಕಂಡಿದೆ. ರಘುರಾಮ ಚರಣ್ ನಿರ್ದೇಶನದ ಚಿತ್ರದಲ್ಲಿ ‘ರಾಮಾ ರಾಮಾ ರೇ’ ಸಿನಿಮಾ ಖ್ಯಾತಿಯ ನಟರಾಜ್, ಮಂಜು ಆರ್ಯ ಮೈಸೂರು, ಹನುಮಕ್ಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಗತಿ ಮಂಜಮ್ಮ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ನಮ್ಮ ಪುಟ್ಟ ಕನಸು ದೊಡ್ಡದಾಗುತ್ತಾ ಬಂತು. ಅದು ಈಗ ಸಿನಿಮಾ ರೂಪದಲ್ಲಿ ಮೂಡಿದೆ. ಇದು ಯಾವ ಜಾನರ್ ಎಂದು ಹೇಳಲು ಆಗುವುದಿಲ್ಲ. ಕಥೆ ಬರೆಯುವಾಗ ಏನು ವಿಶ್ಯುಯಲ್ಸ್ ಬಂತು ಅದನ್ನು ಶೂಟ್ ಮಾಡಿದ್ದೇವೆ. 1960ರ ಕಾಲಘಟ್ಟದ ಕತೆ’ ಎಂದು ತಮ್ಮ ‘ಕುಬುಸ’ ಸಿನಿಮಾ ಕುರಿತು ಮಾತನಾಡುತ್ತಾರೆ ಚಿತ್ರದ ನಿರ್ದೇಶಕ ರಘುರಾಮ ಚರಣ್. ಇಂದು (ಜುಲೈ 26) ಅವರ ಸಿನಿಮಾ ತೆರೆಕಂಡಿದೆ. ‘ರಾಮಾ ರಾಮಾ ರೇ’ ಸಿನಿಮಾ ಖ್ಯಾತಿಯ ನಟರಾಜ್, ಮಂಜು ಆರ್ಯ ಮೈಸೂರು, ಹನುಮಕ್ಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಗತಿ ಮಂಜಮ್ಮ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೊನ್ನೆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ನಾಯಕನಟ ನಟರಜಾ ಮಾತನಾಡಿ, ‘ಪಕ್ಕಾ ನೇಟಿವಿಟಿ ಕಾನ್ಸೆಪ್ಟ್ ಇದು. ಇಂತಹ ಚಲನಚಿತ್ರ ನಿರ್ಮಾಣ ಮಾಡಿರುವ ವಿ ಶೋಭಾ ಆದಿ ನಾರಾಯಣ ಅಭಿನಂದನಾರ್ಹರು. ಈ ರೀತಿಯ ಚಿತ್ರಗಳು ಗೆಲ್ಲಬೇಕು. ಆಗ ನಿರ್ಮಪಾಕರು ಇಂತಹ ಮತ್ತಷ್ಟು ಸಿನಿಮಾಗಳನ್ನು ಮಾಡಲು ಮುಂದಾಗುತ್ತಾರೆ’ ಎಂದರು.
‘ಕುಬುಸ ಚಲನಚಿತ್ರ ಹಳ್ಳಿ ಸೊಗಡಿನ ಚಿತ್ರಕಥೆ. ಚಿತ್ರದಲ್ಲಿ ನನಗೆ ತುಂಬಾ ಅನುಭವವಾಗಿದ್ದು, ಜನರ ಮನಸ್ಸಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುತ್ತೇನೆ’ ಎನ್ನುವುದು ನಿರ್ಮಾಪಕಿ ಶೋಭಾ ಅವರ ಮಾತು. ಚಿತ್ರನಿರ್ದೇಶಕರಾದ ಟಿ ಎಸ್ ನಾಗಾಭರಣ, ಪ್ರೇಮ್, ಸತ್ಯಪ್ರಕಾಶ್ ಅವರೊಂದಿಗೆ ಕೆಲಸ ಮಾಡಿರುವ ರಘುರಾಮ ಚರಣ್ ಅವರಿಗೆ ಇದು ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ. ಚಿತ್ರದ ಎರಡನೇ ನಾಯಕನಾಗಿ ‘ಒಂದು ಸರಳ ಪ್ರೇಮಕಥೆ’, ‘ಪಟಾಕಿ’ ಸಿನಿಮಾಗಳ ನಟ ಮಂಜು ಆರ್ಯ ಇದ್ದಾರೆ. ಅನಿಕಾ ರಮ್ಯ, ಮಹಾಲಕ್ಷ್ಮಿ ಇತರೆ ಪ್ರಮುಖ ಪಾತ್ರಧಾರಿಗಳು. ಬಳ್ಳಾರಿ ಭಾಷೆಯ ಸೊಗಡಿನ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಪ್ರದೀಪ್ ಚಂದ್ರ ಸಂಗೀತ, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮ ಎ ಕ್ಯಾಮರಾ ಚಿತ್ರಕ್ಕಿದೆ.