ಪುಟಾಣಿಯಾಗಿದ್ದಾಗಲೇ ಬೆಳ್ಳಿತೆರೆಗೆ ಪರಿಚಯವಾದವರು ಪುನೀತ್. ಆಗ ಅವರನ್ನು ಎತ್ತಿ ಆಡಿಸಿದ್ದು, ನಟನೆಯ ಪಾಠ ಹೇಳಿಕೊಟ್ಟಿದ್ದು ನಟ ಹೊನ್ನವಳ್ಳಿ ಕೃಷ್ಣ. ತಮ್ಮ ಪ್ರೀತಿಪಾತ್ರ ಅಪ್ಪುನನ್ನು ಕಳೆದುಕೊಂಡ ಅವರು ಪುನೀತ್ ಜೊತೆಗಿನ ಬಾಲ್ಯದ ನೆನಪುಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.
ಮೊದಲ ಬಾರಿಗೆ ಕ್ಯಾಮೆರಾ ಬೆಳಕು ಬಿದ್ದಾಗ ಪುನೀತ್ 6 ತಿಂಗಳ ಹಸುಗೂಸು. ಡಾ.ರಾಜ್‍ರ `ಪ್ರೇಮದ ಕಾಣಿಕೆ’ (1976) ಚಿತ್ರದಲ್ಲಿ ಪುಟಾಣಿ ಲೋಹಿತ್ (ಪುನೀತ್ ಜನ್ಮನಾಮ) ತೊಟ್ಟಿಲಲ್ಲಿ ನಗುತ್ತಿದ್ದ. ‘ಸನಾದಿ ಅಪ್ಪಣ್ಣ’ (1977) ಚಿತ್ರದ ಹೊತ್ತಿಗೆ ಈ ಹುಡುಗನಿಗೆ ಒಂದೂವರೆ ವರ್ಷ. `ವಸಂತ ಗೀತ’ (1980) ಚಿತ್ರದಲ್ಲಿ ಕಾಣಿಸಿದಾಗ ಮಾಸ್ಟರ್ ಪುನೀತ್‍ಗೆ ನಾಲ್ಕು. ಕುತೂಹಲದಿಂದ ಎಲ್ಲವನ್ನೂ ಪ್ರಶ್ನಿಸುತ್ತಿದ್ದ. ಡಾ.ರಾಜ್‍ರೊಂದಿಗೆ ಸೆಟ್‍ಗೆ ಬಂದುಹೋಗುತ್ತಿದ್ದ ಹುಡುಗನಿಗೆ ಪಿಕ್‍ನಿಕ್ ಅನುಭವ.
ಆ ವಯಸ್ಸಿನಲ್ಲಿ ಮಕ್ಕಳಿಗಿರುವ ಸಹಜ ಕುತೂಹಲ ಪುನೀತ್‍ಗೂ ಇತ್ತು. ಕ್ಯಾಮೆರಾ ಎದುರು ಏಕೆ ಅಳಬೇಕು, ನಗಬೇಕೆ ಎಂದು ಪ್ರಶ್ನಿಸುತ್ತಿದ್ದ. ನಾನು ಕಥೆ ಕಟ್ಟಿ ಸನ್ನಿವೇಶ ವಿವರಿಸುತ್ತಿದ್ದೆ. ಮನಸ್ಸಿಟ್ಟು ಕೇಳುತ್ತಿದ್ದ ಅವನು, ಅದರಂತೆ ಭಾವನೆ ಹೊರಹಾಕುತ್ತಿದ್ದ. ಅವನ ಪ್ರೀತಿ ಗಳಿಸಬೇಕೆಂದರೆ ಹೊಸ ಗೊಂಬೆಗಳನ್ನು ಕೊಡಿಸಬೇಕಿತ್ತು. ನಾನು ಗಮನಿಸಿದಂತೆ ಆತ ನಾನು ಹೇಳಿದ್ದನ್ನು ಬಹುಬೇಗ ಗ್ರಹಿಸುತ್ತಿದ್ದ. ಮುಂದೆ `ಭಾಗ್ಯವಂತ’ (1981), `ಹೊಸಬೆಳಕು’, `ಚಲಿಸುವ ಮೋಡಗಳು’ (1982) ಚಿತ್ರಗಳಲ್ಲಿ ನಟನೆ ಜೊತೆಗೆ ಪುನೀತ್ ಹಾಡಲು ಶುರುಮಾಡಿದ. ಆ ವೇಳೆಗಾಗಲೇ ನಟನೆಯ ಪಾಠಗಳನ್ನು ಅವನು ಕಲಿತಿದ್ದ.
`ಭಕ್ತ ಪ್ರಹ್ಲಾದ’ (1983) ಶೂಟಿಂಗ್ ಸಂದರ್ಭವೊಂದು ನನಗೀಗಲೂ ಕಣ್ಣಿಗೆ ಕಟ್ಟಿದಂತಿದೆ. ಹಿರಣ್ಯಕಶಿಪು ಪಾತ್ರದಲ್ಲಿ ಡಾ.ರಾಜ್‍ರನ್ನು ನೋಡಿ ಪುನೀತ್ ಭಯಪಡುತ್ತಿದ್ದ! `ದೊಡ್ಡದಾಗಿ ಕಣ್ಣು ಬಿಡಬೇಡಿ ಅಪ್ಪಾಜಿ, ಹೆದರಿಕೆ ಆಗುತ್ತೆ’ ಎಂದು ಗೋಗರೆದಿದ್ದ. `ಭಯ – ಭಕ್ತಿ ಇರಬೇಕು. ಅಲ್ಲಿಯವರೆಗೂ ಜಯ ನಮ್ಮೊಂದಿಗಿರುತ್ತದೆ’ ಎಂದು ರಾಜ್ ಆಗ ಪ್ರೀತಿಯಿಂದ ಪುತ್ರನ ತಲೆ ನೇವರಿಸಿದ್ದರು. ಪುಟ್ಟ ಹುಡುಗನಿಗೆ ಆಗ ಖಂಡಿತ ಈ ಮಾತು ಅರ್ಥವಾಗಿರಲಾರದು. ಆದರೆ ಮುಂದೆ ದೊಡ್ಡ ನಟನಾಗಿ ಬೆಳೆದ ಮೇಲೆ ತಂದೆ ರಾಜಕುಮಾರ್ ಅವರು ಹೇಳಿದಂತೆ ನಯ-ವಿನಯದಿಂದ ನಡೆದುಕೊಳ್ಳತೊಡಗಿದ್ದ. ಈಗ ಅಪ್ಪು ನಮ್ಮೊಂದಿಗಿಲ್ಲ ಎನ್ನುವುದನ್ನು ನಂಬಲು ನನಗೆ ಕಷ್ಟವಾಗುತ್ತಿದೆ. ಬಾಲ್ಯದಲ್ಲಿ ಅವನನ್ನು ಎತ್ತಿಕೊಂಡು ಆಡಿಸುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡರೆ ಕಣ್ಣಿಗೆ ಕತ್ತಲೆ ಬಂದಂತಾಗುತ್ತದೆ.