ರಾಜನ್‌ ನಿರ್ಮಿಸಿ, ನಿರ್ದೇಶಿಸಿರುವ ‘ಇಮೇಲ್‌’ ಸಿನಿಮಾ ಫೆಬ್ರವರಿ 9ರಂದು ತೆರೆಕಾಣುತ್ತಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಮುರುಗ ಅಶೋಕ್‌ ಚಿತ್ರದ ಹೀರೋ.

ರಾಗಿಣಿ ದ್ವಿವೇದಿ ಅಭಿನಯದ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಇಮೇಲ್’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಪ್ರಭುದೇವ ಅವರು ಚಿತ್ರದ ಟ್ರೇಲರ್ ವೀಕ್ಷಿಸಿ, ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ. ‘ಇದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಆನ್‌ಲೈನ್‌ ಗೇಮ್‌ನಿಂದಾಗುವ ಪರಿಣಾಮಗಳನ್ನು ನಿರ್ದೇಶಕರು ಚಿತ್ರದಲ್ಲಿ ತೋರಿಸಿದ್ದಾರೆ. ಎಸ್ ಆರ್ ರಾಜನ್ ಅವರೇ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇದೇ ಫೆಬ್ರವರಿ 9ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹ ನೀಡಿ’ ಎಂದರು ರಾಗಿಣಿ ದ್ವಿವೇದಿ.

ಚಿತ್ರದ ಹೀರೋ ಮುರುಗ ಅಶೋಕ್‌ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ‘ನಾನು ತಮಿಳಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ನನ್ನ ಸಂಬಂಧಿಕರು ಕರ್ನಾಟಕದಲ್ಲಿದ್ದಾರೆ. ಹಾಗಾಗಿ ನನಗೂ ಸ್ವಲ್ಪ ಕನ್ನಡ ಮಾತಾಡಲು ಬರುತ್ತದೆ’ ಎನ್ನುವುದು ಮುರುಗ ಅವರ ಮಾತು. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ‘ಜೈಲರ್’ ಸಿನಿಮಾ ಖ್ಯಾತಿಯ ಬಿಲ್ಲಿ, ‘ಲೊಳ್ಳುಸಭಾ’ ಖ್ಯಾತಿಯ ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ಸುನಿಲ್ ಸಫಿ, ರಾಮ್ ಸನ್ನಿ, ಅಜಿತ್ ಕುಮಾರ್, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಜನ್‌ ಅವರು ಹಲವು ತಮಿಳು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ‘ಇಮೇಲ್‌’ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ‘ರಾಗಿಣಿ, ಅಶೋಕ್ ಸೇರಿದಂತೆ ಇಡೀ ತಂಡಕ್ಕೆ, ಟೀಸರ್ ಬಿಡುಗಡೆ ಮಾಡಿಕೊಟ್ಟ ನಟ ಶಿವರಾಜಕುಮಾರ್ ಹಾಗೂ ಟ್ರೇಲರ್ ನೋಡಿ ಮೆಚ್ಚುಗೆ ಮಾತುಗಳನ್ನಾಡಿದ ಪ್ರಭುದೇವ ಅವರಿಗೆ ಧನ್ಯವಾದ’ ಎಂದಿದ್ದಾರೆ ರಾಜನ್‌. S R Films Factory ಬ್ಯಾನರ್‌ ಅಡಿಯಲ್ಲಿ ಎಸ್ ಆರ್ ರಾಜನ್ ಅವರು ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಗೋವಾ ಹಾಗೂ ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.

LEAVE A REPLY

Connect with

Please enter your comment!
Please enter your name here