ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕತೆಯನ್ನು ಆಧರಿಸಿ ತಯಾರಾಗಿರುವ ‘ಡೇರ್‌ ಡೆವಿಲ್‌ ಮುಸ್ತಾಫಾ’ ಸಿನಿಮಾಗೆ ಮುಖ್ಯಮಂತ್ರಿಗಳು ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ. ಮೊನ್ನೆ ಚಿತ್ರತಂಡ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಡೇರ್‌ ಡೆವಿಲ್‌ ಮುಸ್ತಾಫಾ’ ಸಿನಿಮಾಗೆ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ. ಇಂದು ಟ್ವಿಟರ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, ”ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಕನ್ನಡದ ಜನಪ್ರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ. ಇಂದಿನ ಕಾಲಘಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ಬುನಾದಿಯ ಮೇಲೆ ಸಮಾಜ ಕಟ್ಟುವ ಮನಸುಗಳು. ಇಂಥದ್ದೊಂದು ಕಾರ್ಯಕ್ಕೆ ಕೈಹಾಕಿದ ಚಿತ್ರತಂಡಕ್ಕೆ ಅಭಿನಂದನೆಗಳು. ದ್ವೇಷ ಅಳಿಸಿ, ಪ್ರೀತಿ ಹಂಚುವ ಜನರಿಗೆ ನಮ್ಮ, ನಿಮ್ಮೆಲ್ಲರ ಬೆಂಬಲ ಇರಲಿ” ಎಂದು ಬರೆದಿದ್ದಾರೆ. ಶಶಾಂಕ್‌ ಸೋಗಾಲ್‌ ನಿರ್ದೇಶನದ ಚಿತ್ರವನ್ನು ನಟ ಧನಂಜಯ್‌ ಪ್ರಸೆಂಟ್‌ ಮಾಡಿದ್ದು, KRG ಫಿಲ್ಮ್ಸ್‌ ರಾಜ್ಯಾದ್ಯಂತ ವಿತರಣೆ ಮಾಡಿದೆ.

‘ಮೊನ್ನೆ ನಾವು ನಿಯೋಗದೊಂದಿಗೆ ಹೋಗಿ ಮನವಿ ಸಲ್ಲಿಸಿದ್ದೆವು. ಸಿನಿಮಾ ಹೆಚ್ಚು ಜನರಿಗೆ ತಲುಪಬೇಕು ಎನ್ನುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಮುಖ್ಯಮಂತ್ರಿಗಳು ಚಿತ್ರದ ಆಶಯ ಅರಿತು ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಶಾಂಕ್‌ ಸೋಗಾಲ್‌. ಹಾಗೆ ನೋಡಿದರೆ ಚಿತ್ರತಂಡದವರೇ ಟಿಕೆಟ್‌ ದರವನ್ನು ಕಡಿತಗೊಳಿಸಿದ್ದರು. ಅಮೆರಿಕ, ಆಸ್ಪ್ರೇಲಿಯಾ ಸೇರಿದಂತೆ ವಿದೇಶಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಜನರು ನೋಡಿದ್ದಾರೆ. ‘ಈಗಾಗಲೇ ಸಿನಿಮಾ ತೆರೆಕಂಡು ಐದನೇ ವಾರ. ಎರಡನೇ ವಾರದಲ್ಲೇ ತೆರಿಗೆ ರಿಯಾಯ್ತಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೆವು. ಆಗಷ್ಟೇ ಸರ್ಕಾರ ಫಾರ್ಮ್‌ ಆಗಿದ್ದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಒಟ್ಟಾರೆ ಸಿನಿಮಾ ಬಗ್ಗೆ ಹೆಚ್ಚು ಜನರಿಗೆ ಗೊತ್ತಾಗುವಂತಾಗಿದೆ’ ಎನ್ನುತ್ತಾರವರು.

LEAVE A REPLY

Connect with

Please enter your comment!
Please enter your name here