ದಕ್ಷಿಣ ಭಾರತದ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ನಟ, ನಿರ್ದೇಶಕ ಪ್ರತಾಪ್‌ ಪೋತನ್‌ ಚೆನ್ನೈನಲ್ಲಿ ಇಂದು ಅಗಲಿದ್ದಾರೆ. ಪೋತನ್‌ ಚೊಚ್ಚಲ ನಿರ್ದೇಶನದ ‘ಮೀಂದಮ್‌ ಒರು ಕಾದಲ್‌ ಕಥೈ’ ತಮಿಳು ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸಂದಿದೆ.

ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳ ನಟ, ನಿರ್ದೇಶಕ ಪ್ರತಾಪ್‌ ಪೋತನ್‌ (70 ವರ್ಷ) ಇಂದು ಚೆನ್ನೈನಲ್ಲಿ ಅಗಲಿದ್ದಾರೆ. ಕೆಲವು ತಿಂಗಳ ಹಿಂದೆ ತೆರೆಕಂಡಿದ್ದ ಮುಮ್ಮೂಟಿ ಅವರ ಮಲಯಾಳಂ ಸಿನಿಮಾ ‘CBI5 The Brain’, ಅವರು ತೆರೆಯ ಮೇಲೆ ಕಾಣಿಸಿಕೊಂಡಿದ್ದ ಕೊನೆಯ ಸಿನಿಮಾ. ‘ಥಕರಾ’, ‘ಚಾಮರಂ’, ’22 ಫೀಮೇಲ್‌ ಕೊಟ್ಟಾಯಂ’ ಅವರ ಅತ್ಯಂತ ಜನಪ್ರಿಯ ಚಿತ್ರಗಳು. ಸದ್ಯ ಪೋತನ್‌ ಅವರು ಮೋಹನ್‌ಲಾಲ್‌ರ ‘ಬಾರೋಜ್‌: ನಿಧಿ ಕಾಕ್ಕಂ ಭೂತಂ’ ಸಿನಿಮಾದಲ್ಲಿ ನಟಿಸುತ್ತಿದ್ದರು. ಶಿವಾಜಿ ಗಣೇಶನ್‌ ಮತ್ತು ಮೋಹನ್‌ಲಾಲ್‌ ಅಭಿನಯದ ‘ಒರು ಯಾತ್ರಾಮೋಳಿ’ (1997) ಪೋತನ್‌ ನಿರ್ದೇಶಿಸಿದ್ದ ಕೊನೆಯ ಸಿನಿಮಾ.

ಪ್ರಮುಖವಾಗಿ ಮಲಯಾಳಂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಪ್ರತಾಪ್‌ ಪೋತನ್‌ ತಮಿಳು ಮತ್ತು ತೆಲುಗು ಸಿನಿಮಾರಂಗಗಳಲ್ಲೂ ಹೆಸರು ಮಾಡಿದವರು. 1985ರಲ್ಲಿ ತೆರೆಕಂಡ ಅವರ ಚೊಚ್ಚಲ ನಿರ್ದೇಶನದ ‘ಮೀಂದಮ್‌ ಒರು ಕಾದಲ್‌ ಕಥೈ’ ತಮಿಳು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಂದಿದೆ. 1985ರಲ್ಲಿ ನಟಿ ರಾಧಿಕಾ ಅವರನ್ನು ಪ್ರತಾಪ್‌ ವರಿಸಿದ್ದರು. ಮರುವರ್ಷ 1986ರಲ್ಲಿ ಅವರು ಪ್ರತ್ಯೇಕವಾಗಿದ್ದರು. ನಂತರ ಅಮಲಾ ಸತ್ಯನಾಥ್‌ರನ್ನು ಪ್ರತಾಪ್‌ ವರಿಸಿದ್ದರು. 2012ರಲ್ಲಿ ಈ ದಾಂಪತ್ಯವೂ ಕೊನೆಗೊಂಡಿತ್ತು. ಪ್ರತಾಪ್‌ ಪೋತನ್‌ ನಿಧನಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

LEAVE A REPLY

Connect with

Please enter your comment!
Please enter your name here