ತೆಲುಗು ನಟ ನಾಗಶೌರ್ಯ ಒಡೆತನದ ಫಾರ್ಮ್‌ಹೌಸ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲಿ ಜೂಜಾಡುತ್ತಿದ್ದವರಿಂದ ಹಣ ವಶಪಡಿಸಿಕೊಂಡು ಜೂಜುಕೋರರನ್ನು ಬಂಧಿಸಿದ್ದಾರೆ.
ಜನಪ್ರಿಯ ತೆಲುಗು ನಾಯಕನಟ ನಾಗಶೌರ್ಯ ಅವರ ಹೈದರಾಬಾದ್ ಫಾರ್ಮ್‌ಹೌಸ್ ಮೇಲೆ ಪೊಲೀಸರು ನಿನ್ನೆ ದಾಳಿ ನಡೆಸಿದ್ದಾರೆ. ನಟನ ಒಡೆತನದ ಫಾರ್ಮ್‌ಹೌಸ್‌ನಲ್ಲಿ ಜೂಜುಗಾರರು ಪೋಕರ್, ಸ್ವೈಪ್ ಮಿಷಿನ್‌ನಲ್ಲಿ ಇಸ್ಪೀಟು ಆಟ ಆಡುತ್ತಿದ್ದರು ಎನ್ನಲಾಗಿದೆ. ಅಲ್ಲಿ ಜೂಜಾಡುತ್ತಿದ್ದ ಸುಮಾರು 20 ಜನರನ್ನು ಪೊಲೀಸರು ಬಂಧಿಸಿ, ಅವರಲ್ಲಿದ್ದ 25 ಲಕ್ಷ ರೂಪಾಯಿ ಹಣ ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರು ತಿಂಗಳ ಹಿಂದೆ ನಟ ನಾಗಶೌರ್ಯ ಅವರು ಐಎಎಸ್ ಅಧಿಕಾರಿಯೊಬ್ಬರಿಂದ ಈ ಫಾರ್ಮ್‌ಹೌಸ್ ಅನ್ನು ಲೀಸ್ ಪಡೆದಿದ್ದಾರೆ ಎನ್ನಲಾಗಿದೆ.
ಆಂಧ್ರದ ಎಲ್ಲೂರು ಮೂಲದ ನಾಗಶೌರ್ಯ ತೆಲುಗು ಚಿತ್ರರಂಗದ ನಟ, ನಿರ್ಮಾಪಕ ಮತ್ತು ಬರಹಗಾರನಾಗಿ ಗುರುತಿಸಿಕೊಂಡಿದ್ದಾರೆ. ‘ಕ್ರಿಕೆಟ್, ಗರ್ಲ್ಸ್ ಅಂಡ್ ಬೀರ್’ (2011) ತೆಲುಗು ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪರಿಚಯವಾದರು. ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರವಾದ ‘ಚಂದಮಾಮ ಕಥಾಲು’ (2014) ಆಂಥಾಲಜಿ ಚಿತ್ರದಲ್ಲಿ ಅವರು ನಟಿಸಿದ್ದರು. ‘ಊಹಾಲು ಗುಸಗುಸಾಲಾದೆ’, ‘ದಿಕ್ಕುಲು ಚೂಡಕು ರಾಮಯ್ಯ’, ‘ಕಲ್ಯಾಣ ವೈಭೋಗಮೆ’, ‘ಚಲೋ’, ಅಶ್ವತ್ಥಾಮ’ ಅವರ ಕೆಲವು ಪ್ರಮುಖ ತೆಲುಗು ಚಿತ್ರಗಳು. ಪೊಲೀಸರ ದಾಳಿ ಕುರಿತು ನಾಗಶೌರ್ಯ ಅವರಿಂದ ಸದ್ಯ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.










