CCL ಕ್ರಿಕೆಟ್ ಲೀಗ್ ನಂತರ ಇದೀಗ ಡಾ ರಾಜ್ ಕಪ್ಗೆ ಚಾಲನೆ ಸಿಕ್ಕಿದೆ. ಜೂನ್ 17ರಂದು ದುಬೈನಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಅಕಾಲಿಕವಾಗಿ ಅಗಲಿದ ನಟ ಪುನೀತ್ ರಾಜಕುಮಾರ್ ಸ್ಮರಣಾರ್ಥ ನಡೆಯಲಿರುವ ಡಾ ರಾಜ್ ಕಪ್ನಲ್ಲಿ ಈ ಬಾರಿ 12 ತಂಡಗಳು ಇರಲಿವೆ. ರಾಜೇಶ್ ಬ್ರಹ್ಮವರ ನೇತೃತ್ವದಲ್ಲಿ ಪಂದ್ಯಾವಳಿ ನಡೆಯಲಿದ್ದು ಈ ಬಾರಿ ಆಟಗಾರರ ಬಿಡ್ಡಿಂಗ್ ದುಬೈನಲ್ಲಿ ನಡೆಯುತ್ತಿರುವುದು ವಿಶೇಷ. ಜೂನ್ 17ರಂದು ನಡೆಯಲಿರುವ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರಾಜೇಶ್ ಬ್ರಹ್ಮಾವರ್ ಅವರು ರಾಜ್ ಕಪ್ – ಸೀಸನ್ 6ರ ಕುರಿತು ಮಾಹಿತಿ ನೀಡುತ್ತಾ, ‘ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ. ಈ ಬಾರಿ ಆರು ದೇಶಗಳಲ್ಲಿ ಆಡುವ ಪ್ಲ್ಯಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿವೆ’ ಎನ್ನುತ್ತಾರೆ.
ನಟ ಅನಿರುದ್ಧ್ ತಂಡವೊಂದರ ಕ್ಯಾಪ್ಟನ್ ಆಗಿದ್ದು ಪಂದ್ಯಾವಳಿ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. ‘ಡಾ ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಅವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನು ಭಾಗಿಯಾಗುತ್ತಿರುವುದು ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ಕ್ರಿಕೆಟ್ ಅನ್ನೋದು ನಿಮಿತ್ತ ಅಷ್ಟೇ. ನಮ್ಮ ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಾಂಧವ್ಯ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ’ ಎನ್ನುತ್ತಾರೆ ಅನಿರುದ್ಧ್.
ಡಾ ರಾಜ್ ಕಪ್ ಸೀಸನ್ 6ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಮ್ಯಾಚ್ಗಳು ನಡೆಯಲಿವೆ. ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ, ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ಟೂರ್ನಿಯಲ್ಲಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರು ಹಾಗೂ ಮಾಧ್ಯಮದವರು ಭಾಗಿಯಾಗಲಿದ್ದಾರೆ.