ಗಾಯಕ, ಸಂಗೀತ ಸಂಯೋಜಕ, ನಟ ವಾಸುಕಿ ವೈಭವ್‌ ಮತ್ತು ಬೃಂದಾ ವಿಕ್ರಮ್‌ ಅವರ ವಿವಾಹ ಇಂದು (ನವೆಂಬರ್‌ 16) ನೆರವೇರಿದೆ. ರಂಗಭೂಮಿ ಹಿನ್ನೆಲೆಯ ಬೃಂದಾ ವಿಕ್ರಮ್‌ ಸಿನಿಮಾ ನಟಿಯೂ ಹೌದು. ನವಜೋಡಿಗೆ ಸ್ಯಾಂಡಲ್‌ವುಡ್‌ನ ಹಲವರು ಶುಭಕೋರಿದ್ದಾರೆ.

ಚಂದನವನದ ಬಹುಮುಖ ಪ್ರತಿಭೆ ವಾಸುಕಿ ವೈಭವ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬಹುಕಾಲದ ಗೆಳತಿ ಬೃಂದಾ ವಿಕ್ರಮ್‌ರೊಂದಿಗೆ ಅವರ ವಿವಾಹ ನೆರವೇರಿದೆ. ಕಳೆದ ಮೂರು ದಿನಗಳಿಂದ ಮದುವೆ ಶಾಸ್ತ್ರಗಳು ಆರಂಭವಾಗಿದ್ದು, ಇಂದು (ನವೆಂಬರ್‌ 16) ಸತಿಪತಿಯಾಗಿದ್ದಾರೆ. ಕುಟುಂಬದ ಸದಸ್ಯರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಶುಭಕಾರ್ಯ ನಡೆದಿದೆ. ವಾಸುಕಿ ವೈಭವ್‌ ಅವರು ತಮ್ಮ Instagram ಖಾತೆಯಲ್ಲಿ ಕುಟುಂಬದ ಸದಸ್ಯರೊಂದಿಗಿನ ಪೋಟೋ ಹಂಚಿಕೊಂಡು, ‘ಹೊಸದೊಂದು ಪ್ರಯಾಣ ಆರಂಭವಾಗಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದವಿರಲಿ’ ಎಂದಿದ್ದಾರೆ.

ಗಾಯಕ, ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್‌ ರಂಗಭೂಮಿ ಹಿನ್ನೆಲೆಯ ಪ್ರತಿಭೆ. ‘ಬಿಗ್‌ಬಾಸ್‌’ ಸ್ಪರ್ಧಿಯಾದ ನಂತರ ಅವರು ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಸಾಲು, ಸಾಲು ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿರುವ ವಾಸುಕಿ ನಟನಾಗಿಯೂ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಸಂಗೀತ ಸಂಯೋಜನೆಗೆ ಮಾತ್ರವಲ್ಲದೆ ಇತರೆ ಸಂಗೀತ ನಿರ್ದೇಶಕರಿಗೂ ಅವರು ಹಾಡುತ್ತಿದ್ದಾರೆ. ಇನ್ನು ಬೃಂದಾ ವಿಕ್ರಂ ಕೂಡ ಹವ್ಯಾಸಿ ರಂಗಭೂಮಿ ಕಲಾವಿದೆ. ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರನಿರ್ದೇಶಕ ಡಿ ಸತ್ಯಪ್ರಕಾಶ್‌ ಅವರ ನಿರ್ದೇಶನ ತಂಡದ ಬರವಣಿಗೆ ವಿಭಾಗದಲ್ಲೂ ಕೆಲಸ ಮಾಡಿದ್ದ ಅವರು ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ವಾಸುಕಿ – ಬೃಂದಾ ಜೋಡಿಗೆ ಚಿತ್ರರಂಗದ ಹಲವರು ಶುಭಾಶಯ ಕೋರಿದ್ದಾರೆ.

LEAVE A REPLY

Connect with

Please enter your comment!
Please enter your name here