ಏಪ್ರಿಲ್ 24, ಡಾ ರಾಜಕುಮಾರ್ ಅವರ ಜನ್ಮದಿನ. ಅಭಿಮಾನಿಗಳ ಪಾಲಿಗೆ ಅದು ದೊಡ್ಡ ಹಬ್ಬ. ಪ್ರತಿ ಸಲದಂತೆ ಈ ವರ್ಷವೂ ವಿವೇಕಾನಂದ ಟ್ರಸ್ಟ್ ಹಾಗೂ ಟೀಮ್ ಆತ್ರೇಯ ವತಿಯಿಂದ ‘ಮೈ ನೇಮ್ ಇಸ್ ರಾಜ್’ ಭಾಗ 3 ಕಾರ್ಯಕ್ರಮ ಆಯೋಜಿಸಲಾಗಿದೆ.
ಏಪ್ರಿಲ್ 24ರಂದು ವರನಟ ಡಾ ರಾಜಕುಮಾರ್ ಹುಟ್ಟುಹಬ್ಬದ ಸಂಭ್ರಮ. ಅಣ್ಣಾವ್ರ ಜನ್ಮದಿನವನ್ನು ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿರುತ್ತಾರೆ. ರಾಜಕುಮಾರ್ ಅವರ ಹೆಸರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ಸಲದಂತೆ ಈ ವರ್ಷವೂ ವಿವೇಕಾನಂದ ಟ್ರಸ್ಟ್ ಹಾಗೂ ಟೀಮ್ ಆತ್ರೇಯ ವತಿಯಿಂದ ʼಮೈ ನೇಮ್ ಇಸ್ ರಾಜ್ʼ ಭಾಗ 3 ಕಾರ್ಯಕ್ರಮ ಆಯೋಜಿಸಲಾಗಿದೆ. ಏಪ್ರಿಲ್ 24ರಂದು ಸಂಜೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ರಾಜ್ ಗೀತ ನಮನ ಹೆಸರಿನಲ್ಲಿ ಖ್ಯಾತ ಗಾಯಕ ಮನೋಜವಂ ಆತ್ರೇಯ ಅವರ ಸಾರಥ್ಯದಲ್ಲಿ ಸಂಗೀತ ಸಂಜೆ ನಡೆಯಲಿದೆ.
ಕಾರ್ಯಕ್ರಮದ ಆಯೋಜಕರಾದ ಮನೋಜವಂ ಆತ್ರೇಯ ಮಾತನಾಡಿ, ”ನಾನು ಹಾಗೂ ನನ್ನ ಕುಟುಂಬದವರು ಡಾ ರಾಜಕುಮಾರ್ ಅವರ ಅಭಿಮಾನಿಗಳು. ಅವರ ಹುಟ್ಟುಹಬ್ಬದ ದಿನ ಏನಾದರೂ ವಿಶೇಷ ಕಾರ್ಯಕ್ರಮ ಮಾಡಬೇಕೆಂದು ಟೀಮ್ ಆತ್ರೇಯ ಕಡೆಯಿಂದ ಪ್ರತಿವರ್ಷ ‘ಮೈ ನೇಮ್ ಇಸ್ ರಾಜ್’ ಎಂಬ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ಇದರ ಜೊತೆಗೆ ಸಾಮಾಜಿಕ ಕಾರ್ಯಗಳನ್ನೂ ಮಾಡಿದ್ದೇವೆ. ಈ ಸಲ ನಮ್ಮೊಂದಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಕೂಡ ಜೊತೆಯಾಗಿದೆ. ಏಪ್ರಿಲ್ 24ರಂದು ಸಂಜೆ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಖ್ಯಾತಿಯ ಚನ್ನಪ್ಪ ಹುದ್ದರ್, ಪೃಥ್ವಿ ಭಟ್, ಮೈತ್ರಿ ಅಯ್ಯರ್ ಸೇರಿದಂತೆ ಹೆಸರಾಂತ ಗಾಯಕರು ಹಾಡಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹನ್ನೆರಡಕ್ಕೂ ಅಧಿಕ ವಾದ್ಯ ಕಲಾವಿದರು ಈ ಕಾರ್ಯಕ್ರಮದಲ್ಲಿರುತ್ತಾರೆ. ಈ ಬಾರಿ ‘ಡಾ ರಾಜ್ ಗೀತ ನಮನ’ ಎಂಬ ಹೆಸರಲ್ಲಿ ರಾಜಕುಮಾರ್ ಅವರು ಹಾಡಿರುವ ಹಾಡುಗಳನ್ನು ಪ್ರಸ್ತುತ ಪಡಿಸುತ್ತಾ ಅಣ್ಣಾವ್ರಲ್ಲಿದ್ದ ಒಬ್ಬ ಶ್ರೇಷ್ಠ ಸಂಗೀತಗಾರನನ್ನು ಗೌರವಿಸಿ ಈ ಕಾರ್ಯಕ್ರಮವನ್ನು ಸಮರ್ಪಿಸುತ್ತಿದ್ದೇವೆ. ಹೆಚ್ಚಿನ ಜನರು ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಸ್ವಾಮಿ ವಿವೇಕಾನಂದ ಟ್ರಸ್ಟ್ ನ ಪಾಟೀಲ್ ಮಾತನಾಡಿ, ”ನಾನು ಸಹ ʼಮೈ ನೇಮ್ ಇಸ್ ರಾಜ್ʼ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ. ಈ ಬಾರಿ ನಾವು ಮನೋಜವಂ ಅವರ ಜೊತೆ ಸೇರಿಕೊಂಡಿದ್ದೇವೆ. ರಾಜಕುಮಾರ್ ಅವರ ಕುಟುಂಬದ ಸದಸ್ಯರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಸಾಕಷ್ಟು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋ ನಲ್ಲಿ ಲಭ್ಯವಿದೆ. ನಮ್ಮ ಸಮಾರಂಭಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದರು.










