ವರ್ಷದ ಕೊನೆಯಲ್ಲಿ ಒಟಿಟಿಯಲ್ಲಿ ತೆರೆಕಂಡ ತೆಲುಗು ಸಿನಿಮಾ ‘ಸೇನಾಪತಿ’. ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿದೆಲ ನಿರ್ಮಾಣದ ಕ್ರೈಂ ಥ್ರಿಲ್ಲರ್, ತೆಲುಗು ಕಂಟೆಂಟ್‌ಗೇ ಮೀಸಲಾದ ‘ಆಹಾ’ದಲ್ಲಿ ಸ್ಟ್ರೀಂ ಆಗುತ್ತಿದೆ.

ಪೊಲೀಸ್ ಅಧಿಕಾರಿಯ ಸರ್ವೀಸ್ ರಿವಾಲ್ವರ್ ಕಾಣೆಯಾದರೆ, ಅದರಲ್ಲಿ ಎಂಟು ಸಜೀವ ಗುಂಡುಗಳಿದ್ದರೆ ಏನಾಗಬಹುದು? ಎಂಟು ಎಪಿಸೋಡಿಗೆ ಆಗುವ ಒಂದು ವೆಬ್ ಸೀರೀಸ್ ಆಗಬಹುದು, ಅಲ್ಲವೇ? ಹಾಗೆ ವೆಬ್ ಸೀರಿಸ್‌ ಕೂಡ ಆಗಬಹುದಾದ ಕತೆಯನ್ನು ಹಿಡಿದು ಸಿನಿಮಾ ಮಾಡಿದ್ದಾರೆ ತೆಲುಗು ಚಿತ್ರ ನಿರ್ದೇಶಕ ಪ್ರಸಾದ್ ಸಾದಿನೇನಿ. ತೆಲುಗು ಒಟಿಟಿ ವೇದಿಕೆ ‘ಆಹಾ’ದಲ್ಲಿ ವರ್ಷದ ಕೊನೆಗೆ ಬಿಡುಗಡೆಯಾದ ‘ಸೇನಾಪತಿ’ಗೆ ಒಂದು ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್‌ನ ಅಷ್ಟೂ ಗುಣಗಳಿವೆ.

ನಾಯಕ ನಟನ ಪಟ್ಟದಲ್ಲಿ ನರೇಶ್ ಅಗಸ್ತ್ಯ ಇರುವ ‘ಸೇನಾಪತಿ’ಯ ಹೈಲೈಟ್ ಮಾತ್ರ ರಾಜೇಂದ್ರ ಪ್ರಸಾದ್. ಅಭಿಮಾನಿಗಳಿಂದ ‘ಹಾಸ್ಯ ಕಿರೀಟಿ’ ಎಂಬ ಬಿರುದು ಪಡೆದಿರುವ ರಾಜೇಂದ್ರ ಪ್ರಸಾದ್ ಪಾಲಿಗೆ ಇದೊಂದು ಸಂಪೂರ್ಣ ಭಿನ್ನ ಪಾತ್ರ. ದಾರವು ಹೂವಿನ ಮಾಲೆಯನ್ನು ಹಿಡಿದಿಡುವಂತೆ ಕೃಷ್ಣ ಮೂರ್ತಿ ಎಂಬ ಆ ಪಾತ್ರ ಸಂಪೂರ್ಣ ಚಿತ್ರವನ್ನು ಹಿಡಿದಿಟ್ಟಿದೆ. ಭಾವುಕತೆ, ಕ್ರೌರ್ಯ ಮತ್ತು ಅಸಹಾಯಕತೆ ಮಿಶ್ರಿತ ಕೃಷ್ಣಮೂರ್ತಿ ತುಂಬಾ ಗಂಭೀರವಾಗಿದ್ದುಕೊಂಡೇ ನಗಿಸಿಬಿಡುತ್ತಾನೆ. ಕತೆಯ ಮೂಲಧಾತು ಇರುವುದು 1949ರ ಅಕಿರಾ ಕುರಸೋವಾ ಸಿನಿಮಾ ‘ಸ್ಟ್ರೇ‌ ಡಾಗ್ಸ್’ನಲ್ಲಿ. ಆ ಕತೆಗೆ ಮಸಾಲೆ ಸೇರಿಸಿ ಮಾಡಲಾದ ಸಿನಿಮಾ ತಮಿಳಿನ ‘8 ತೊಟ್ಟಕ್ಕಲ್’. ಅಲ್ಲಿನ ಅನಗತ್ಯ ಮಸಾಲೆಯ ತೀವ್ರತೆಯನ್ನು ಕಡಿಮೆಗೊಳಿಸಿದ ಕಾರಣ ಒಟಿಟಿಯ ಪುಟ್ಟ ಪರದೆಗೆ ‘ಸೇನಾಪತಿ’ ಒಗ್ಗಿಕೊಂಡಿದೆ.

ಕೃಷ್ಣ (ನರೇಶ್ ಅಗಸ್ತ್ಯ) ಓರ್ವ ಬಾಲಾಪರಾಧಿ. ಭ್ರಷ್ಟ ಪೊಲೀಸ್ ಅಧಿಕಾರಿಯ ಕಾರಣದಿಂದ ರಿಮಾಂಡ್ ಹೋಮ್ ಸೇರುವ ಆತ ದೊಡ್ಡವನಾದ ಮೇಲೆ ಎಸ್‌ಐ ಆಗುತ್ತಾನೆ. ಪೊಲೀಸ್ ದೌರ್ಜನ್ಯಕ್ಕೆ ಇತರರು ಒಳಗಾಗಬಾರದು ಎಂಬ ಏಕೈಕ ಕಾರಣಕ್ಕೆ ಎಸ್‌ಐ ಆಗುವ ಆತ ಐಪಿಎಸ್ ಸಿದ್ಧತೆಯಲ್ಲಿರುತ್ತಾನೆ. ಹೀಗಿದ್ದಾಗಲೇ ಆತನ ಸರ್ವೀಸ್ ರಿವಾಲ್ವರ್ ಕಾಣೆಯಾಗುವುದು. ಈ ರೀತಿ ನೇರ ನಿರೂಪಣೆಯಲ್ಲಿ ಆರಂಭವಾಗುವ ಸಿನಿಮಾ ಮೊದಲ ಇಪ್ಪತ್ತು ನಿಮಿಷದಲ್ಲಿ ಪ್ರೇಕ್ಷಕನ್ನು ಮುಂದಿನ ಕತೆಗೆ ಸಿದ್ಧಗೊಳಿಸುತ್ತದೆ‌. ಹಾಗೆ ಸಿದ್ಧಗೊಂಡ ಪ್ರೇಕ್ಷಕನ ಊಹೆಗಳನ್ನೆಲ್ಲ ನಂತರದ ಹಂತದಲ್ಲಿ ಒಂದೊಂದಾಗಿ ಬುಡಮೇಲು ಮಾಡುವ ಕಾರಣ ಮುಂದಿನ ಎರಡು‌ ಗಂಟೆ ಕುತೂಹಲದಿಂದ ನೋಡಿಸಿಕೊಳ್ಳುತ್ತದೆ.

ಕತೆಯಲ್ಲಿ ಬರುವ ಎಲ್ಲಾ ಮುಖ್ಯ ಪಾತ್ರಗಳಿಗೂ ಹಿನ್ನೆಲೆ ಕತೆಯಿದೆ. ಇನ್ನು ಮುಂದಕ್ಕೆ ಆ ಕತೆಯ ಕಡೆಗೆ ಸಿನಿಮಾ ಸಾಗಲಿದೆ ಎಂದಾಗಲೇ ಆ ಪಾತ್ರದ ಅಂತ್ಯ ಕಾಣುವುದು ಕ್ರೈಂ ಥ್ರಿಲ್ಲರ್‌ಗೆ ಹೇಳಿ ಮಾಡಿಸಿದ ರೆಸಿಪಿ. ಜತೆಗೆ ಒಟಿಟಿಯನ್ನೇ ಗಮನದಲ್ಲಿಟ್ಟು ಮಾಡಲಾದ ಕ್ಯಾಮರಾ ಕುಸುರಿ ಹೈದರಾಬಾದನ್ನು ತೋರಿಸಿದ ರೀತಿ ಚೆನ್ನಾಗಿದೆ. ಜತೆಗೆ ಹಿನ್ನೆಲೆ ಸಂಗೀತ ದೃಶ್ಯಗಳ ತೀವ್ರತೆಯನ್ನು ಗಟ್ಟಿಗೊಳಿಸುತ್ತದೆ.

ಹಾಗೆಂದ ಮಾತ್ರಕ್ಕೆ ಕತೆಯಲ್ಲಿ ಕೊರತೆಗಳಿಲ್ಲ ಎಂದಲ್ಲ. ಎಸ್‌ಐ ಕೃಷ್ಣನಿಗೂ ಪತ್ರಕರ್ತೆಗೂ ನಡುವಿನ ಸಂಬಂಧ ನಿರ್ದೇಶಕರ ಹಿಡಿತ ತಪ್ಪಿದೆ. ಅವರಿಬ್ಬರ ನಡುವಿನ ಪ್ರೀತಿ ಅದೆಲ್ಲಿ ಶುರುವಾಯಿತು ಎಂದೇ ತಿಳಿಯುವುದಿಲ್ಲ. ಆದರೂ ಆ ತಪ್ಪು ಶ್ಲಾಘನೀಯವೇ. ಏಕೆಂದರೆ ಬಂದೂಕಿನ ಹುಡುಕಾಟದ ಕತೆಯ ನಡುವೆ ಪ್ರೇಮಕತೆಯೊಂದನ್ನು ನೋಡಲು ನಮ್ಮ ಮನಸ್ಸು ಸಿದ್ಧವಿರುವುದಿಲ್ಲ.

ಹೆಚ್ಚಿನೆಲ್ಲಾ ತೆಲುಗು ಸಿನಿಮಾಗಳಲ್ಲಿ ಸಹಜ ಅಭಿನಯಕ್ಕಿಂತ ನಾಟಕೀಯ ಅಭಿನಯಕ್ಕೇ ಒತ್ತು ಕೊಡುವುದು‌ ಹಿಂದಿನಿಂದ ನಡೆದುಬಂದ ಪರಿಪಾಠ. ಅದೇ‌ ಗುಣ ‘ಸೇನಾಪತಿ’ಯಲ್ಲೂ ಇದೆ. ಸದಾ ಏನಾದರೂ ತಿನ್ನುತ್ತಲೇ ಇರುವ ಇನ್ಸ್ಪೆಕ್ಟರ್ ಪಾತ್ರದಲ್ಲಿ ಸತ್ಯ ಪ್ರಕಾಶ್ ಅಭಿನಯದ ಹೊರತು‌ ಬೇರೆಲ್ಲಾ ಪೊಲೀಸರದ್ದು ಓವರ್ ಆ್ಯಕ್ಟಿಂಗ್.

ಥಿಯೇಟರಲ್ಲಿ ಸಿನಿಮಾ ನೋಡುವುದು ಸಾಮೂಹಿಕ ಅನುಭವ. ಹಾಗಾಗಿ ಅಲ್ಲಿ‌ ಶಿಳ್ಳೆ ಹೊಡೆಸಿಕೊಳ್ಳುವ ಸ್ಲೋ ಮೋಶನ್ ಸನ್ನಿವೇಶಗಳು ಅರ್ಥಗರ್ಭಿತ. ಜತೆಗೆ ನಗುವೂ ಸಾಂಕ್ರಾಮಿಕ. ಎರಡು ಸಾಲಿನ ಆಚೆ ಕೂತವನಿಗೆ ನಗು ಬರಿಸಿದರೆ ನಾವೂ ನಕ್ಕುಬಿಡೋಣ ಅನಿಸುತ್ತದೆ. ಆದರೆ ಒಬ್ಬೊಬ್ಬರೇ ಕೂತು ನೋಡುವ ಒಟಿಟಿಗೆ ಅಂಥವು ಅನಗತ್ಯವೆಂಬ ಅಂಶ ನಿರ್ದೇಶಕರಿಗೆ ಗೋಚರವಾದಂತಿಲ್ಲ. ದೃಶ್ಯ ಜೋಡಣೆಯ ಮೂಲಕ ಪರಿಣಾಮಕಾರಿಯಾಗಿ ಕತೆ‌ ಹೇಳುವ ನಿರ್ದೇಶಕ ಕೊನೆಕೊನೆಗೆ ಚಿತ್ರಕತೆಗಿಂತ ಹೆಚ್ಚು ಕತೆ ಹೇಳುವ ಧಾವಂತಕ್ಕೆ ಬಿದ್ದಿದ್ದಾರೆ. ಹಾಗಾಗಿ ಹೆಚ್ಚು ವಾಚ್ಯವೆನಿಸುವ ದೃಶ್ಯಗಳು ನೋಡಿಸಿಕೊಂಡು‌ ಹೋಗುವ ಗುಣಕ್ಕೆ ತೊಡಕು ನೀಡಿವೆ.

ಸಿನಿಮಾ: ಸೇನಾಪತಿ | ನಿರ್ದೇಶನ: ಪ್ರಸಾದ್ ಸಾದಿನೇನಿ | ನಿರ್ಮಾಣ : ಸುಶ್ಮಿತಾ ಕೊನಿದೆಲ, ವಿಷ್ಣು ಪ್ರಸಾದ್ | ತಾರಾಬಳಗ : ರಾಜೇಂದ್ರ ಪ್ರಸಾದ್, ನರೇಶ್ ಅಗಸ್ತ್ಯ, ಸತ್ಯ ಪ್ರಕಾಶ್

LEAVE A REPLY

Connect with

Please enter your comment!
Please enter your name here