ರಾಮತೇಜ್‌ ನಿರ್ದೇಶನದ ‘ಭೈರವ’ ಸಿನಿಮಾಗೆ ಮುಂಬಯಿಯಲ್ಲಿ ಚಾಲನೆ ಸಿಕ್ಕಿದೆ. ಈ ಥ್ರಿಲ್ಲರ್‌ ಕಥಾನಕದಲ್ಲಿ ನಾಗಸಾಧುಗಳು ಅಭಿನಯಿಸಲಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಲಿರುವ ಚಿತ್ರಕ್ಕೆ ಹರಿದ್ವಾರ, ಕಾಶಿ, ಋಷಿಕೇಶದಲ್ಲಿ ಬಹುಪಾಲ ಚಿತ್ರೀಕರಣ ನಡೆಯಲಿದೆ.

“ನಮ್ಮ ಚಿತ್ರದಲ್ಲಿ ನಾಗಸಾಧುಗಳ ಕುರಿತ ಚಿತ್ರಣವಿರುತ್ತದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾಧ್ಯವಾಗಿರದ ಉತ್ತರ ಭಾರತದ ಅಪರೂಪದ ಜಾಗಗಳಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. ಇದು ಪ್ರಚಾರಕ್ಕಾಗಿ ಘೋಷಿಸುತ್ತಿರುವುದಲ್ಲ. ಥ್ರಿಲ್ಲರ್‌ ಕತೆಗೆ ಪೂರಕವಾದ ಲೊಕೇಶನ್‌ಗಳನ್ನು ಹುಡುಕಿದ್ದು, ಸಿನಿಮಾ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡಲಿದೆ” ಎಂದು ತಮ್ಮ ನೂತನ ಸಿನಿಮಾ ಕುರಿತು ಭರವಸೆ ನೀಡುತ್ತಾರೆ ನಿರ್ದೇಶಕ ರಾಮತೇಜ್‌. ಅವರು ತಮ್ಮ ‘ಭೈರವ’ ಚಿತ್ರಕ್ಕೆ ಮುಂಬಯಿಯಲ್ಲಿ ಚಾಲನೆ ನೀಡಿದ್ದಾರೆ. ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ತಯಾರಾಗಲಿರುವ ಚಿತ್ರವಾದ್ದರಿಂದ ಈ ಪ್ರಾಜೆಕ್ಟ್‌ಗೆ ಬಾಲಿವುಡ್‌ ತಂತ್ರಜ್ಞರೂ ಕೆಲಸ ಮಾಡುತ್ತಿದ್ದಾರೆ. ವಿಸಿಕಾ ಫಿಲ್ಮ್ಸ್ ಪ್ರೊಡಕ್ಷನ್ ಸಹಯೋಗದೊಂದಿಗೆ ಹನಿ ಚೌಧರಿ, ವೈಭವ್ ಬಜಾಜ್, ಶ್ರೀನಿವಾಸ ಸಿ.ವಿ.ಗೌಡ ಸಿನಿಮಾ ನಿರ್ಮಿಸುತ್ತಿದ್ದಾರೆ.

ಕನ್ನಡ ಚಿತ್ರನಿರ್ದೇಶಕ ಪಿ.ಎನ್.ಸತ್ಯ ಅವರಿಗೆ ಹಲವು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ರಾಮತೇಜ್‌ ಅವರದ್ದು. ಕನ್ನಡದ ಆರಂಭದ ವೆಬ್‌ ಸರಣಿಗಳಾದ ‘ಸೈಕೋ’, ‘ಸಾಲ್ಟ್ & ಪೆಪ್ಪರ್’ಗೆ ಅವರು ಕಾರ್ಯನಿರ್ವಹಿಸಿದ್ದಾರೆ. ‘ಕಮರೊಟ್ಟು ಚೆಕ್‌ಪೋಸ್ಟ್‌’ ಖ್ಯಾತಿಯ ಸನತ್ ನಾಯಕನಾಗಿ ಮತ್ತು ಉಮೇಶ ಸಕ್ಕರೆನಾಡು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ಸುವರ್ಣ ಅವರು ಕತೆ ಬರೆದಿದ್ದರೆ, ನಿರ್ದೇಶಕ ರಾಮತೇಜ್ ಅವರೇ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಚಿತ್ರದ ಹಿಂದಿ ಅವತರಣಿಕೆಯಲ್ಲಿ ರಾಮತೇಜ್‌ ಅವರೊಂದಿಗೆ ಕಪಿಲ್‌ ದೀಕ್ಷಿತ್‌ ನೆರವಾಗಲಿದ್ದಾರೆ. ಬಾಲಿವುಡ್‌ನ ಅಮಿತ್ ದೀಕ್ಷಿತ್ ಸಂಗೀತ ಸಂಯೋಜನೆ, ಬಿ. ಧನಂಜಯ ನೃತ್ಯ ಸಂಯೋಜನೆ, ಟಿ.ನರಸಿಂಹ ಸಾಹಸ ಚಿತ್ರಿಕ್ಕಿದೆ. ಉತ್ತರ ಪ್ರದೇಶ, ಹರಿದ್ವಾರ, ಮೀರತ್, ಕಾಶಿ, ಋಷಿಕೇಶ, ಗಾಜಿಯಾಬಾದ್ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

LEAVE A REPLY

Connect with

Please enter your comment!
Please enter your name here