ತಮಿಳು ಸಿನಿಮಾ | ಅಣ್ಣಾತ್ತೆ

‘ಅಣ್ಣಾತ್ತೆ’ ಅಣ್ಣ – ತಂಗಿ ಸೆಂಟಿಮೆಂಟ್‌ನ ಫಾರ್ಮುಲಾ ಸಿನಿಮಾ ಎಂದು ಸುಲಭವಾಗಿ ಹೇಳಿ ಬಿಡಬಹುದಾದ ಪ್ರಯೋಗವಲ್ಲ. ಹಾಗೆ ಹೇಳಿದರೆ ಅದು ಸಿನಿಮಾ ಮಾದ್ಯಮಕ್ಕೆ ಮೋಸ ಮಾಡಿದಂತೆ. ನಮ್ಮ ಕನ್ನಡದಲ್ಲೇ ನಿರ್ದೇಶಕರಾದ ವಿ.ಸೋಮಶೇಖರ್‌, ಡಿ.ರಾಜೇಂದ್ರಬಾಬು, ಭಾರ್ಗವ, ತಮಿಳಿನ ನಿರ್ದೇಶಕರ ಪೈಕಿ ರವಿಕುಮಾರ್‌, ಸುರೇಶ್ ಕೃಷ್ಣ ಮುಂತಾದವರು.. ಫಾರ್ಮುಲಾ ಸಿನಿಮಾಗಳನ್ನು ಅಚ್ಚುಕಟ್ಟಾಗಿ, ಆಪ್ತವಾಗಿ ತೆರೆಗೆ ಅಳವಡಿಸಿದವರು. ‘ಅಣ್ಣಾತ್ತೆ’ ನಿರ್ದೇಶಕ ಸಿವಾ ಇದಕ್ಕೆ ಅಪವಾದ. ಹಾಗೆ ನೋಡಿದರೆ ಆರಂಭದಿಂದಲೂ ಅವರು ಒಳ್ಳೆಯ ಚಿತ್ರಗಳನ್ನೇನೂ ಕೊಟ್ಟವರಲ್ಲ. ಬೇರೆ ಬೇರೆ ಕಾರಣಕ್ಕಾಗಿ ಅವರಿಗೆ ಕಮರ್ಷಿಯಲ್ ಆಗಿ ಯಶಸ್ಸು ಸಿಕ್ಕಿತಷ್ಟೆ. ಆ ನಿಟ್ಟಿನಲ್ಲಿ ಅವರು ಅದೃಷ್ಟವಂತ ನಿರ್ದೇಶಕ. ಅವರಿಂದ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳುವುದೇ ತಪ್ಪು. ‘ಅಣ್ಣಾತ್ತೆ’ಯಂತೂ ತೀವ್ರ ನಿರಾಸೆ ಉಂಟುಮಾಡಿದೆ. ನಾಲ್ಕು ದಶಕಗಳ ಸಿನಿಮಾ ಅನುಭವವಿರುವ ರಜನೀಕಾಂತ್‌ ಅವರು ಸಿವಾರನ್ನು ನಂಬಿ ಮೋಸ ಹೋಗಿದ್ದಾರೆ.

ಅಣ್ಣ – ತಂಗಿ ಕತೆ ಎಂದು ಸಿನಿಮಾ ಆರಂಭವಾಗುತ್ತದೆ. ಯುವಕನೊಬ್ಬನಲ್ಲಿ ಅನುರಕ್ತಳಾಗುವ ತಂಗಿ (ಕೀರ್ತಿ ಸುರೇಶ್‌) ಅಣ್ಣನಿಗೆ (ರಜನೀಕಾಂತ್‌) ಹೇಳಿಕೊಳ್ಳಲಾಗದೆ ತೊಳಲಾಡುತ್ತಾಳೆ. ಅಲ್ಲಿಂದ ಕತೆ ಕೊಲ್ಕೊತ್ತಾಗೆ ಶಿಫ್ಟ್ ಆಗುತ್ತದೆ. ಅಲ್ಲಿ ಅಣ್ಣಾತ್ತೆ ಏಕಾಂಗಿಯಾಗಿ ನೂರಾರು  ಜನರನ್ನು ಬಡಿದು ಹಾಕುತ್ತಾನೆ. ಕಾನೂನು, ಪೊಲೀಸ್, ನ್ಯಾಯಾಲಯ.. ಇಲ್ಲಿ ಯಾವುದಕ್ಕೂ ಬೆಲೆ ಇಲ್ಲ. ನಿರ್ದೇಶಕರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮದೇ ಆದೊಂದು ಕಲ್ಪಿತ ರಾಜ್ಯ ಸೃಷ್ಟಿಸಿಕೊಂಡಿದ್ದಾರೆ. ಲಾಜಿಕ್‌ ಅಂತೂ ಇಲ್ಲವೇ ಇಲ್ಲ. ಚಿತ್ರ ಯಾವ ಹಂತದಲ್ಲೂ ಪ್ರೇಕ್ಷಕರಿಗೆ ಕನೆಕ್ಟ್ ಆಗುವುದಿಲ್ಲ. ಆರಂಭದಿಂದ ಕೊನೆಯವರೆಗೂ ನಿರ್ದೇಶಕರು ಪ್ರೇಕ್ಷಕನನ್ನು ‘ಟೇಕ್‌ ಇಟ್ ಫಾರ್ ಗ್ರಾಂಟೆಂಡ್’ ಎಂದು ಭಾವಿಸಿರುವಂತಿದೆ. ನಾಲ್ಕು  ವರ್ಷಗಳ ಹಿಂದೆ ತೆರೆಕಂಡ ಸಿವಾ ನಿರ್ದೇಶನದ ‘ವಿವೇಗನ್‌’ ಒಂದು ಸ್ಪೂಫ್ ಕಾಮಿಡಿ – ಆಕ್ಷನ್ ಆಗಿಯಾದರೂ ಖುಷಿ ಕೊಟ್ಟಿತ್ತು. ‘ಅಣ್ಣಾತ್ತೆ’ ಅಂಥದ್ದೊಂದು ಜಾನರ್‌ಗೂ ಒಗ್ಗುವ ಚಿತ್ರವಾಗಿಲ್ಲ.

ಚಿತ್ರದ ನಟ – ನಟಿಯರ ಅಭಿನಯವೂ ನಾಟಕೀಯ ಎನಿಸುತ್ತದೆ. ಚಿತ್ರದುದ್ದಕ್ಕೂ ಸನಾತನ ಧರ್ಮ, ಸನಾತನ ಸಂಸ್ಕೃತಿ, ಪುರುಷಪ್ರಧಾನ ಸಮಾಜದ ವೈಭವೀಕರಣ ಕಾಣಿಸುತ್ತದೆ. ಹೆಣ್ಣಿಗೆ ಮದುವೆಯೇ ಸರ್ವಸ್ವ, ಸಂಸಾರದ ಗೌರವವೆಲ್ಲಾ ಆಕೆಯ ನಡೆ- ನುಡಿಯಲ್ಲೇ ಅಡಿದೆ ಎನ್ನುವಂತಹ ನಾಲ್ಕು ದಶಕಗಳ ಹಿಂದಿನ ಸಿನಿಮಾ ಮಾಡಿದ್ದಾರೆ ಸಿವಾ. ಇತ್ತೀಚೆಗೆ ತೆರೆಕಂಡ ಸೂರ್ಯ ನಿರ್ಮಿಸಿ, ನಟಿಸಿರುವ ‘ಜೈ ಭೀಮ್‌’ ತಮಿಳು ಚಿತ್ರವನ್ನು ಜನರು ಹೊಗಳುತ್ತಿದ್ದಾರೆ. ಮತ್ತೊಂದೆಡೆ ನಿರ್ದೇಶಕ ಸಿವಾ ಮತ್ತು ಅವರ ತಂಡ ತಮಿಳು ಸಿನಿಮಾದ ಗೌರವವನ್ನು ಕಡಿಮೆ ಮಾಡಲೆಂದೇ ‘ಅಣ್ಣಾತ್ತೆ’ ಸಿನಿಮಾ ಮಾಡಿರುದಂತಿದೆ. ನಟ ರಜನೀಕಾಂತ್‌ ತಮ್ಮನ್ನು ಚೇಂಜ್ ಮಾಡಿಕೊಳ್ಳಬೇಕು ಎಂದು ಪ್ರತೀ ಸಲವೂ ಪ್ರಯತ್ನಿಸುತ್ತಾರೆ. ಆದರೆ ಈ ಹಾದಿಯಲ್ಲಿ ಅವರು ಎಡವಿದ್ದೇ ಹೆಚ್ಚು. ನಿರ್ದೇಶಕರಾದ ರವಿಕುಮಾರ್, ಸುರೇಶ್ ಕೃಷ್ಣ ಅವರಿಂದ ಬಿಡುಗಡೆ ಪಡೆದು ಶಂಕರ್ ಕೈಗೆ ಒಪ್ಪಿಸಿಕೊಂಡರು. ಅಲ್ಲಿ ಅವರಿಗೆ ಮಿಶ್ರಫಲ. ಮುಂದೆ ಪಾ.ರಂಜಿತ್, ಕಾರ್ತೀಕ್ ಸುಬ್ಬರಾಜ್‌ ಸರದಿ. ಇವರೆಲ್ಲಾ ರಜನೀಕಾಂತ್‌ ಅವರನ್ನು ಬಳಸಿಕೊಂಡರೇ ವಿನಃ, ರಜನೀಕಾತ್ ಅವರಿಗೆ ಇವರಿಂದ ಅಂತಹ ಉಪಕಾರವೇನೂ ಆಗಲಿಲ್ಲ.

ರಜನೀಕಾಂತ್‌ ಅವರನ್ನು ಸೋಲಿನ ಪರ್ವ ಕಾಡುತ್ತಲೇ ಇದೆ. ಕೊಚಾಡಿಯನ್, ಲಿಂಗ, ಕಬಾಲಿ, ಕಾಲ, ಎಂಧಿರನ್‌ 2, ಪೆಟ್ಟಾ, ದರ್ಬಾರ್ ಮತ್ತು ಈಗ ಅಣ್ಣಾತ್ತೆ. ‘ಕಾಲ’, ‘ಕಬಾಲಿ’ ಕಥಾವಸ್ತುವಿನ ದೃಷ್ಟಿಯಿಂದ ಬೇರೆ ಎನಿಸಿದರೂ ಪೂರ್ಣ ಚಿತ್ರವಾಗಿ ಕಮರ್ಷಿಯಲ್ ಆಗಿ ಸೋತ ಚಿತ್ರಗಳೇ. 2010ರ ‘ಎಂಧಿರನ್‌’ ಯಶಸ್ಸಿನ ನಂತರ ಯಾಕೋ ರಜನಿಗೆ ಮತ್ತೊಂದು ದೊಡ್ಡ ಗೆಲುವು ಸಿಗಲೇ ಇಲ್ಲ. ‘ಅಣ್ಣಾತ್ತೆ’ಯಲ್ಲಿ ರಜನೀಕಾಂತ್‌ ಅವರ ನಿಶ್ಯಕ್ತಿ ಢಾಳಾಗಿ ಕಾಣಿಸುತ್ತದೆ. ಇದನ್ನು ತಪ್ಪಿಸಲು ರಜನೀ ಇರುವ ಬಹುಪಾಲು ಸನ್ನಿವೇಶಗಳನ್ನು ಲಾಂಗ್ ಶಾಟ್‌ಗಳಲ್ಲಿ ಚಿತ್ರಿಸಲಾಗಿದೆ. ರಜನೀಕಾಂತ್‌ ಕಪ್ಪು ಗ್ಲಾಸ್ ಹಾಕುವುದು ಅನಿವಾರ್ಯ ಎನಿಸಿದೆ. ಇನ್ನಾದರೂ ರಜನೀಕಾಂತ್‌ ತಮ್ಮ ವಯಸ್ಸಿಗೆ ಹೊಂದುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಆಲೋಚಿಸಬೇಕು.

ನಿರ್ಮಾಪಕರು : ಕಲಾನಿಧಿ ಮಾರನ್‌ | ನಿರ್ದೇಶಕ : ಸಿವಾ | ಛಾಯಾಗ್ರಹಣ : ವೆಟ್ರಿ | ಸಂಗೀತ : ಡಿ.ಇಮಾನ್‌ | ತಾರಾಬಳಗ : ರಜನೀಕಾಂತ್, ಮೀನಾ, ಖುಷ್ಬೂ, ಕೀರ್ತಿ ಸುರೇಶ್‌, ನಯನತಾರಾ, ಜಗಪತಿ ಬಾಬು, ಅಭಿಮನ್ಯು ಸಿಂಗ್‌, ಪ್ರಕಾಶ್ ರೈ ಮತ್ತಿತರರು.

LEAVE A REPLY

Connect with

Please enter your comment!
Please enter your name here