ಕಾಲಿವುಡ್‌ನಲ್ಲಿ ನಟ ವಿಜಯ್‌ ಅವರಿಗೆ ಬಹುದೊಡ್ಡ ಫ್ಯಾನ್‌ ಫಾಲೋಯಿಂಗ್‌ ಇದೆ. ಅವರ ಸಿನಿಮಾದ ಪ್ರತೀ ಅಪ್‌ಡೇಟ್ಸ್‌ಗಳಿಗೆ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇಂದು ವಿಜಯ್‌ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದು, ಅವರ ನೂತನ ಸಿನಿಮಾ ‘ಲಿಯೋ’ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಸಂಜೆ ಚಿತ್ರದ ಹಾಡು ಬಿಡುಗಡೆಯಾಗಲಿದೆ.

‘ಲಿಯೋ’ ಸಿನಿಮಾ ತಂಡ ಮೊನ್ನೆ ಹಾಡಿನ ಪ್ರೋಮೋ ರಿಲೀಸ್‌ ಮಾಡಿ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟುಹಾಕಿತ್ತು. ಇಂದು ಹೀರೋ ವಿಜಯ್‌ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ವಿಜಯ್, ‘ಲಿಯೋ’ದಲ್ಲಿ ಮತ್ತೆ ಜೊತೆಯಾಗಿದ್ದಾರೆ. ತಿಂಗಳುಗಳ ಹಿಂದೆ ಚೆನ್ನೈನಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಇದುವರೆಗೂ ಚಿತ್ರದಲ್ಲಿ ವಿಜಯ್ ಪಾತ್ರವೇನು? ಅವರ ಲುಕ್‌ ಹೇಗಿರುತ್ತದೆ? ಎನ್ನುವ ಸಂಗತಿಗಳನ್ನು ಗೋಪ್ಯವಾಗಿಡಲಾಗಿತ್ತು. ಇಂದು ಚಿತ್ರದ ಫಸ್ಟ್‌ಲುಕ್‌ನಲ್ಲಿ ವಿಜಯ್‌ ಪಾತ್ರದ ಸ್ಥೂಲ ಪರಿಚಯ ಸಿಕ್ಕಿದೆ. ಇದೊಂದು ಭರ್ಜರಿ ಆಕ್ಷನ್‌, ರೀವೇಂಜ್‌ ಸ್ಟೋರಿ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಮೊನ್ನೆ ಹೀರೋ ವಿಜಯ್‌ ಅವರೇ ಹಾಡಿದ್ದ ‘ನಾ ರೆಡಿ’ ಲಿರಿಕಲ್‌ ವೀಡಿಯೋ ಸಾಂಗ್‌ನ ಪ್ರೋಮೋ ಬಿಡುಗಡೆ ಮಾಡಿತ್ತು ಚಿತ್ರತಂಡ. ಅನಿರುದ್ಧ ಸಂಗೀತ ಸಂಯೋಜನೆಯ ಸಾಂಗ್‌ ಇಂದು ಸಂಜೆ ರಿಲೀಸ್‌ ಆಗಲಿದೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಲಲಿತ್ ಕುಮಾರ್ ನಿರ್ಮಿಸುತ್ತಿರುವ ‘ಲಿಯೋ’ ಚಿತ್ರಕ್ಕೆ ಲೋಕೇಶ್ ಕನಕರಾಜ್ ಕತೆ, ಚಿತ್ರಕಥೆ ಮತ್ತು ನಿರ್ದೇಶನವಿದೆ. ತ್ರಿಷಾ ಕೃಷ್ಣನ್ ಹಿರೋಯಿನ್‌. ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ‘ಲಿಯೋ’ ಅಕ್ಟೋಬರ್ 19ರಂದು ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here