ಭಾರತೀಯ ಚಿತ್ರರಂಗದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಇಂದು ನಟ ರಜನೀಕಾಂತ್‌ ಅವರಿಗೆ ಪ್ರದಾನ ಮಾಡಲಾಯಿತು. ತಮ್ಮ ಗುರು ಕೆ.ಬಾಲಚಂದರ್ ಅವರಿಗೆ ಈ ಗೌರವ ಅರ್ಪಿಸಿದ ರಜನೀಕಾಂತ್‌ ತಮ್ಮ ಸಿನಿಮಾ ಹಾದಿಯಲ್ಲಿ ನೆರವಾದ ಎಲ್ಲರನ್ನೂ ಸ್ಮರಿಸಿದ್ದಾರೆ.

“ಈ ಪ್ರಶಸ್ತಿಯನ್ನು ನನ್ನ ಗುರು, ಶ್ರೇ‍ಷ್ಠ ಚಿತ್ರನಿರ್ದೇಶಕ ಕೆ.ಬಾಲಚಂದರ್‌ ಅವರಿಗೆ ಅರ್ಪಿಸುತ್ತೇನೆ. ಈ ಸಂದರ್ಭದಲ್ಲಿ ನಾನು ಅವರನ್ನು ಅಪಾರ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ನನ್ನ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕ್‌ವಾಡ್‌ ಅವರನ್ನೂ ಸ್ಮರಿಸುತ್ತೇನೆ. ನನಗೆ ತಂದೆ ಸಮಾನರಾದ ಅವರು ನನ್ನಲ್ಲಿ ಉತ್ತಮ ಮೌಲ್ಯ ಹಾಗೂ ಆಧ್ಮಾತ್ಮಿಕ ಮನೋಧರ್ಮ ಬೆಳೆಸಿದರು” ಎಂದು ಭಾವುಕರಾಗಿ ಮಾತನಾಡಿದರು ನಟ ರಜನೀಕಾಂತ್‌. ದಿಲ್ಲಿಯ ವಿಜ್ಞಾನಭವನದಲ್ಲಿ ಇಂದು ನಡೆದ 67ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ ರಜನೀಕಾಂತ್‌ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ನೆರೆದಿದ್ದ ಎಲ್ಲರೂ ರಜನೀಕಾಂತ್‌ ಅವರಿಗೆ ‘ಸ್ಟ್ಯಾಂಡಿಂಗ್ ಓವಿಯೇಷನ್‌’ ಮೂಲಕ ಗೌರವ ಸೂಚಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದ ಮೇರು ನಟರಾದ ಅಮಿತಾಭ್ ಬಚ್ಚನ್‌, ಮೋಹನ್‌ಲಾಲ್ ಮತ್ತು ಸಂಗೀತ ಸಂಯೋಜಕ ಎ.ಆರ್.ರೆಹಮಾನ್‌ ಅವರು ರಜನೀಕಾಂತ್ ಕುರಿತು ಮಾತನಾಡಿದ ವೀಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು. ಸಿನಿಮಾ ಹಾದಿಯಲ್ಲಿ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ರಜನೀಕಾಂತ್ ಈ ಸಂದರ್ಭದಲ್ಲಿ ಸ್ಮರಿಸಿದರು. “ಕರ್ನಾಟಕದಲ್ಲಿ ನಾನು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಸ್ನೇಹಿತ, ಬಸ್‌ ಡ್ರೈವರ್ ರಾಜ್‌ ಬಹದ್ದೂರ್ ನನ್ನಲ್ಲಿನ ನಟನಾಪ್ರತಿಭೆ ಗುರುತಿಸಿ ಸಿನಿಮಾ ಪ್ರವೇಶಕ್ಕೆ ಕಾರಣರಾದರು. ಮುಂದೆ ಸಿನಿಮಾರಂಗದಲ್ಲಿ ಚಿತ್ರನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಹಕಲಾವಿದರು, ವಿತರಕರು, ಪ್ರದರ್ಶಕರು, ಮಾದ್ಯಮದವರು.. ಬಹುಮುಖ್ಯವಾಗಿ ತಮಿಳು ಜನತೆ ನನ್ನನ್ನು ಬೆಳೆಸಿದರು. ಅವರಿಲ್ಲದೆ ನಾನೇನೂ ಅಲ್ಲ” ಎಂದು ತಮ್ಮ ಭಾವನಾತ್ಮಕ ಭಾಷಣದಲ್ಲಿ ರಜನೀಕಾಂತ್‌ ಎಲ್ಲರನ್ನೂ ಸ್ಮರಿಸಿದರು.

LEAVE A REPLY

Connect with

Please enter your comment!
Please enter your name here