ಪ್ಲಾಸ್ಟಿಕ್‌ ಸರ್ಜರಿ ವಿಷಯವಾಗಿ ಟ್ರೋಲ್‌ ಹಾಗೂ ಟೀಕೆಗೆ ಒಳಗಾಗಿದ್ದ ನಟ ರಾಜ್‌ಕುಮಾರ್‌ ರಾವ್‌ ಈಗ ಮೌನ ಮುರಿದಿದ್ದಾರೆ. ‘ನಾನು ಈಗ ಮೊದಲಿಗಿಂತ ಚೆನ್ನಾಗಿ ಕಾಣುತ್ತೇನೆ. ತುಂಬಾ ಆತ್ಮವಿಶ್ವಾಸದೊಂದಿಗೆ ನಟಿಸುತ್ತಿದ್ದೇನೆ. ಹತ್ತು ವರ್ಷಗಳ ಹಿಂದಿನ ಸಿನಿಮಾಗಳಲ್ಲಿ ಕಾಣಸಿಗುವ ನನ್ನನ್ನು ಈಗಿನ ಸಿನಿಮಾಗಳಲ್ಲಿರುವ ನನಗೆ ಹೋಲಿಕೆ ಮಾಡಿದರೆ ವ್ಯತ್ಯಾಸ ತಿಳಿಯುತ್ತೆ’ ಎಂದಿದ್ದಾರೆ.

ಬಾಲಿವುಡ್‌ನ ಪ್ರತಿಭಾನ್ವಿತ ನಟ ರಾಜ್‌ಕುಮಾರ್‌ ರಾವ್‌ ಅವರ ಇತ್ತೀಚೆಗಿನ ಒಂದು ಫೋಟೋ ಸಖತ್‌ ವೈರಲ್‌ ಆಗುತ್ತಿದೆ. ಅದರಲ್ಲೂ ನಟ ತಮ್ಮ ಲುಕ್‌ ಬದಲಿಸಿಕೊಳ್ಳಲು ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ ಅನ್ನೋ ಅನುಮಾನ ಸಹ ವ್ಯಕ್ತವಾಗುತ್ತಿದೆ. ನಟನಿಗೆ ಗದ್ದದ ಸರ್ಜರಿ ಆಗಿದೆ ಎಂದಿ ಟ್ರೋಲ್‌ ಮಾಡುತ್ತಿರುವವರು ಅವರ ಹಳೇ ಹಾಗೂ ಹೊಸ ಲುಕ್‌ನ ಫೋಟೋಗಳನ್ನ ಅಕ್ಕಪಕ್ಕ ಇಟ್ಟು ಟೀಕಿಸುತ್ತಿದ್ದಾರೆ. ಈ ವಿಷಯವಾಗಿ ಇಲ್ಲಿಯವರೆಗೆ ಪ್ರತ್ರಿಕ್ರಿಯಿಸದ ರಾಜ್‌ಕುಮಾರ್‌ ರಾವ್‌ ಈಗ ಮೌನ ಮುರಿದಿದ್ದಾರೆ.

ರಾಜ್‌ಕುಮಾರ್‌ ರಾವ್‌ ಸದ್ಯ ತಮ್ಮ ಬಹುನಿರೀಕ್ಷಿತ ‘ಶ್ರೀಕಾಂತ್‌’ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನೀಡಿರುವ ಸಂದರ್ಶನವೊಂದರಲ್ಲಿ ಪ್ಲಾಸ್ಟಿಕ್‌ ಸರ್ಜರಿ ವಿಷಯವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ”ನಾನು ನನ್ನ ಮುಖದ ತೂಕವನ್ನು ಕಡಿಮೆ ಮಾಡಿಕೊಂಡಿದ್ದೇನೆ. ಕಾರ್ಡಿಯೋ ವ್ಯಾಯಾಮವನ್ನು ತಪ್ಪದೇ ಮಾಡುತ್ತೇನೆ. ಅದರಲ್ಲೂ ಸ್ಕಿಪ್ಪಿಂಗ್‌ ಹಾಗೂ ರನ್ನಿಂಗ್‌ ವಿಷಯ ಬಂದರಂತೂ ಅಂದುಕೊಂಡಂತೆ ಮಾಡದೆ ಇರೋದೇ ಇಲ್ಲ. ‘ಎಲ್‌ಎಸ್‌ಡಿ’ ಸಿನಿಮಾಗಾಗಿ ನಾನು ಆಡಿಷನ್‌ ಕೊಟ್ಟಿದ್ದೆ. ಅಂದು ಚಿತ್ರತಂಡದ ಕಡೆಯಿಂದ ಕರೆ ಬಂದಿತ್ತು. ಆಗ ಅವರು ಹೇಳಿದ್ದು, ನಿನ್ನ ಟೆಸ್ಟ್‌ ಇಷ್ಟ ಆಯಿತು. ಆದರೆ, ನಿನ್ನ ಮುಖ ಸ್ವಲ್ಪ ದಪ್ಪಗಿದೆ. ಅದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು. ಹೀಗಾಗಿ ಕಳೆದ 15 ವರ್ಷಗಳಿಂದ ನಾನು ನಿತ್ಯ ರನ್ನಿಂಗ್‌ ಮಾಡುತ್ತಲೇ ಇದ್ದೇನೆ” ಎಂದಿದ್ದಾರೆ.

‘ನೀವು ಯಾವ ಫೋಟೋ ನೋಡುತ್ತಿದ್ದಿರೋ ಅದು ನಿಜವಾದ ಚಿತ್ರವಲ್ಲ. ನಾನು ಆ ಫೋಟೋದಲ್ಲಿರುವಷ್ಟು ಚೆನ್ನಾಗಿಲ್ಲ. ಯಾರೋ ಎಡಿಟ್‌ ಮಾಡಿ ಹರಿಬಿಟ್ಟಿದ್ದಾರೆ. ಇನ್ನು ಬಹಳ ಹಿಂದೆ ಚರ್ಮ ವೈದ್ಯರೊಬ್ಬರ ಸಲಹೆ ಮೇರೆಗೆ ಗಲ್ಲಕ್ಕೆ ಚಿಕ್ಕದೊಂದು ಫಿಲ್ಲಿಂಗ್‌ ಮಾಡಿಸಿಕೊಂಡಿದ್ದೆ. ಆಗ ನನ್ನ ಮುಖದಲ್ಲಿ ಸಮತೋಲನೆ ಇರಲಿಲ್ಲ. ಹಾಗಾಗಿ ಫಿಲ್ಲಿಂಗ್‌ ಮೊರೆ ಹೋಗಿದ್ದು ನಿಜ. ಅದನ್ನ ಬಿಟ್ಟರೆ, ಯಾವ ಪ್ಲಾಸ್ಟಿಕ್‌ ಸರ್ಜರಿನೂ ಮಾಡಿಸಿಕೊಂಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Connect with

Please enter your comment!
Please enter your name here