‘ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜ್ಜಾನ್ ಗಾಡಿಗಳು ಸೌಂಡ್‌ ಮಾಡ್ತವೆ…. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದನ್ನೇ.. ಬುಲೆಟ್. ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು’ ಎನ್ನುವ ಡೈಲಾಗ್‌ನೊಂದಿಗೆ ರಕ್ಷಕ್‌ ಬುಲೆಟ್‌ ಹೊಸ ಸಿನಿಮಾ ಘೋಷಿಸಿದ್ದಾರೆ.

ಪಂಚಿಂಗ್‌ ಡೈಲಾಗ್ಸ್‌…. ಹಾವ…ಭಾವಗಳಿಂದ ಸುದ್ದಿಯಲ್ಲಿರುತ್ತಿದ್ದ ಕನ್ನಡ ಬಿಗ್‌ಬಾಸ್‌ 10ನೇ ಸೀಸನ್‌ ಸ್ಪರ್ಧಿ ರಕ್ಷಕ್‌ ಬುಲೆಟ್‌ ತನ್ನ ಅಪ್ಪನ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಿಸಿದ್ದಾರೆ. ನಿನ್ನೆ (ಏಪ್ರಿಲ್‌ 2) ದಿವಂಗತ ಬುಲೆಟ್‌ ಪ್ರಕಾಶ್‌ ಅವರ 47ನೇ ಹುಟ್ಟುಹಬ್ಬ. ಈ ವಿಶೇಷ ದಿನದಂದೇ ರಕ್ಷಕ್‌ ಬುಲೆಟ್‌ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ. ತಾವು ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಡಲಿರುವ ಚಿತ್ರದ ಬಗ್ಗೆ ರಕ್ಷಕ್‌ ಮಾಹಿತಿ ಹಂಚಿಕೊಂಡಿದ್ದಾರೆ.

‘ಗುರು ಶಿಷ್ಯರು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ರಕ್ಷಕ್‌ ಈಗ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಇನ್ನು ಸಿನಿಮಾಗಿಂತ ಹೆಚ್ಚಾಗಿ ಮಾಸ್‌ ಡೈಲಾಗ್‌ಗಳಿಂದ ಸದಾ ಸುದ್ದಿಯಲ್ಲಿರುವವರು ರಕ್ಷಕ್‌. ಬಿಗ್‌ಬಾಸ್‌ ಸೀಸನ್‌ 10ಕ್ಕೆ ಸ್ಪರ್ಧಿಯಾಗಿ ಹೋದ ನಂತರ ಜನಪ್ರಿಯತೆ ಹೆಚ್ಚಿತು. ವೈರಲ್‌ ವಿಡಿಯೋ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಿದ್ದ ರಕ್ಷಕ್‌ ಈಗ ತಮ್ಮ ಚೊಚ್ಚಲ ಸಿನಿಮಾದ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ.

ರಕ್ಷಕ್‌ ಬುಲೆಟ್‌ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾಗೆ ಸದ್ಯಕ್ಕೆ ‘RB 01’ ಎಂದು ನಾಮಕರಣ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಸಿನಿಮಾದ ಟೈಟಲ್‌ ನಡುವೆ ಲಾಂಗ್‌ ಚಿತ್ರವಿದೆ. ಅಷ್ಟೆಅಲ್ಲ, ಪೋಸ್ಟರ್‌ನಲ್ಲಿ ಪಂಚಿಂಗ್‌ ಡೈಲಾಗ್ಸ್‌ ಸಹ ಇವೆ. ‘ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜ್ಜಾನ್ ಗಾಡಿಗಳು ಸೌಂಡ್‌ ಮಾಡ್ತವೆ…. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದನ್ನೇ.. ಬುಲೆಟ್! ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು’ ಅನ್ನೋ ಡೈಲಾಗ್‌ ಇದೆ. ಈ ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡುತ್ತಿದ್ದು, ಶ್ರೀಹರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶ್ರೀಧರ್ ಕಶ್ಯಪ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here