ಹಾಸ್ಯಪಾತ್ರಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಹಿರಿಯ ನಟ ಶಂಕರ್‌ರಾವ್ ಇಂದು ಅಗಲಿದ್ದಾರೆ. ಮೂಲತಃ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದ ಅವರು ನೂರಕ್ಕೂ ಹೆಚ್ಚು ಸಿನಿಮಾಗಳು, ಹತ್ತಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಹಿರಿಯ ನಟ ಶಂಕರರಾವ್ (83 ವರ್ಷ) ಇಂದು ಬೆಳಗ್ಗೆ ಅಗಲಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರು ಅರಕೆರೆಯಲ್ಲಿನ ಸ್ವಗೃಹದಲ್ಲಿ ಇಂದು ಇಹಲೋಕ ತ್ಯಜಿಸಿದರು. ಮೂಲತಃ ಹವ್ಯಾಸಿ ರಂಗಭೂಮಿ ಕಲಾವಿದರಾದ ಶಂಕರ್ ರಾವ್‌ ನೂರಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಹತ್ತಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 1972ರಿಂದ ಇತ್ತೀಚಿನವರೆಗೂ ಅವರು ‘ನಟರಂಗ’ ರಂಗತಂಡದ ಸಕ್ರಿಯ ಕಲಾವಿದರಾಗಿದ್ದರು.

ಶಾಲಾ ದಿನಗಳಲ್ಲೇ ನಾಟಕಗಳತ್ತ ಆಕರ್ಷಿತರಾದ ಶಂಕರ ರಾವ್‌ ತಮ್ಮದೇ ‘ಗೆಳೆಯರ ಬಳಗ’ ರಂಗತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸಿಮ್ಸನ್ ಅಂಡ್ ಸಿಮ್ಸನ್‌ ಕಂಪನಿಯಲ್ಲಿ ನೌಕರಿ ಮಾಡುತ್ತಲೇ ‘ಕಲಾಕುಂಜ’, ‘ನಟರಂಗ’ ರಂಗತಂಡಗಳ ಹಲವು ನಾಟಕಗಳಲ್ಲಿ ನಟಿಸುತ್ತಾ ಬಂದರು. ‘ನಟರಂಗ’ದ ಬಹುತೇಕ ಎಲ್ಲಾ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಕನಕೋಟೆ, ತೊಘಲಕ್‌, ಮೃಚ್ಛಕಟಿಕ ಪೋಲಿ ಕಿಟ್ಟಿ.. ಅವರ ಕೆಲವು ಪ್ರಮುಖ ನಾಟಕಗಳು. ಎಂ.ಆರ್.ವಿಠಲ್ ನಿರ್ದೇಶನದ ‘ಯಾರ ಸಾಕ್ಷಿ?’ (1972) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಶಂಕರರಾವ್‌ ಕಾಕನಕೋಟೆ, ಸಿಂಹಾಸನ, ಪುಟಾಣಿ ಏಜೆಂಟ್‌ 123, ಮೂಗನಸೇಡು, ಕಲ್ಯಾಣ ಮಂಟಪ.. ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸೆಕೆಂಡ್‌ ಹ್ಯಾಂಡ್ ಸದಾಶಿವ, ಪಲ್ಲವಿ, ಫೊಟೋಗ್ರಾಫರ್ ಪರಮೇಶಿ, ಯಾಕಿಂಗಾಡ್ತಾರೋ, ಪಾಪ ಪಾಂಡು, ಸಿಲ್ಲಿಲಲ್ಲಿ.. ಅವರು ಅಭಿನಯಿಸಿರುವ ಕೆಲವು ಪ್ರಮುಖ ಧಾರಾವಾಹಿಗಳು. ಶಂಕರ ರಾವ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಉಮಾ ಕಳೆದ ವರ್ಷ ನಿಧನರಾಗಿದ್ದರು. “ರಂಗದ ಮೇಲಷ್ಟೇ ಅಲ್ಲ, ರಂಗದ ಹೊರಗೂ ಶಂಕರರಾವ್ ಅವರದ್ದು ಲವಲವಿಕೆಯ ವ್ಯಕ್ತಿತ್ವ. ಹಾಸ್ಯಪ್ರವೃತ್ತಿಯ ಶಂಕರ್‌ ಇದ್ದಲ್ಲೆಲ್ಲಾ ನಗು ಇರುತ್ತಿತ್ತು. ತೆರೆಯ ಮೇಲಂತೂ ತಮ್ಮ ಹಾಸ್ಯ ಪಾತ್ರಗಳ ಮೂಲಕ ಅವರು ಪ್ರೇಕ್ಷಕರಿಗೆ ರಿಲೀಫ್ ಕೊಡುತ್ತಿದ್ದರು. ಸಿಹಿ ತಿಂಡಿಗಳನ್ನು ತುಂಬಾ ಇಷ್ಟಪಡುತ್ತಿದ್ದರು. ನಾವು ನಾಟಕಗಳಿಗೆಂದು ಹೊರ ಊರಿಗಳಿಗೆ ಹೋಗಿದ್ದಾಗೆಲ್ಲಾ ಅವರು ಅಲ್ಲಿನ ವಿಶೇಷ ಸಿಹಿತಿಂಡಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. ಅದರಲ್ಲೂ ಹಾಲಿನಿಂದ ತಯಾರಿಸಿದ ಸಿಹಿತಿನಿಸುಗಳು ಎಂದರೆ ಅವರಿಗೆ ತುಂಬಾ ಇಷ್ಟವಾಗುತ್ತಿದ್ದವು. ನಟರಂಗದ ಅತ್ಯುತ್ತಮ ಕಲಾವಿದ ಶಂಕರ್‌ರಾವ್‌” ಎಂದು ಹಿರಿಯ ರಂಗಕರ್ಮಿ ಕಪ್ಪಣ್ಣ ಅವರು ಅಗಲಿದ ತಮ್ಮ ಸ್ನೇಹಿತನನ್ನು ಸ್ಮರಿಸುತ್ತಾರೆ.

LEAVE A REPLY

Connect with

Please enter your comment!
Please enter your name here