ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ನಿರ್ದೇಶನದ ಮಾರ್ಷಿಯಲ್ ಆರ್ಟ್ಸ್ ಹಿಂದಿ ಸಿನಿಮಾ ‘ಲಡ್ಕೀ’ ಟ್ರೈಲರ್ ಬಿಡುಗಡೆಯಾಗಿದೆ. ಪೂಜಾ ಭಲೇಕರ್ ನಟಿಸಿರುವ ಈ ಸಿನಿಮಾ ‘ಡ್ರ್ಯಾಗನ್ ಗರ್ಲ್’ ಶೀರ್ಷಿಕೆಯಡಿ ಚೈನೀಸ್ ಭಾಷೆಯಲ್ಲೂ ತಯಾರಾಗಿದೆ. ಜಗತ್ತಿನಾದ್ಯಂತ ಡಿಸೆಂಬರ್ 10ರಂದು ಸಿನಿಮಾ ಬಿಡುಗಡೆ ಮಾಡುವುದು ವರ್ಮಾ ಯೋಜನೆ.
ತೊಂಬತ್ತರ ದಶಕದಲ್ಲಿ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಆರ್ಜಿವಿ ಭರ್ಜರಿ ಚಿತ್ರದೊಂದಿಗೆ ಮರಳಿದ್ದಾರೆ. ಅವರ ನಿರ್ದೇಶನದ ‘ಲಡ್ಕೀ’ ಮಾರ್ಷಿಯಲ್ ಆರ್ಟ್ಸ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ‘ಇದು ಭಾರತದ ಮೊದಲ ಮಾರ್ಷಿಯಲ್ ಆರ್ಟ್ಸ್ ಸಿನಿಮಾ’ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಮಾರ್ಷಿಯಲ್ ಆರ್ಟ್ಸ್ ಎಕ್ಸ್’ಪರ್ಟ್ ಪುಣೆಯ ಪೂಜಾ ಭಲೇಕರ್ ಚಿತ್ರದ ನಾಯಕಿ. ಈ ಚಿತ್ರದ ಮೂಲಕ ಅವರು ‘ಭಾರತದ ಮೊದಲ ಮಾರ್ಷಿಯಲ್ ಆರ್ಟ್ಸ್ ಹಿರೋಯಿನ್’ ಎಂದು ಕರೆಸಿಕೊಳ್ಳುತ್ತಿದ್ದಾರೆ. ಟ್ರೈಲರ್ನಲ್ಲಿನ ಪೂಜಾ ಆಕ್ಷನ್ ಸನ್ನಿವೇಶಗಳ ತುಣುಕುಗಳು ಆಕರ್ಷಕವಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ. ಇಲ್ಲಿ ಮಾರ್ಷಿಯಲ್ ಆರ್ಟ್ಸ್ ಹಿನ್ನೆಲೆಯಲ್ಲಿ ಆರ್ಜಿವಿ ಪ್ರೇಮಕತೆಯೊಂದನ್ನು ಹೇಳಿರುವಂತಿದೆ. ಇಲ್ಲಿಯವರೆಗಿನ ಆರ್ಜಿವಿ ನಿರ್ದೇಶನದ ಚಿತ್ರಗಳ ಪೈಕಿ ಇದೇ ದುಬಾರಿ ಬಜೆಟ್ ಸಿನಿಮಾ ಎನ್ನಲಾಗಿದೆ.
‘ಲಡ್ಕೀ’ ಚೈನಿಸ್ ವರ್ಷನ್ ‘ಡ್ರ್ಯಾಗನ್ ಗರ್ಲ್’ ಶೀರ್ಷಿಕೆಯಡಿ ತಯಾರಾಗಿದೆ. ಚೀನಾದ ಬಿಗ್ ಪೀಪಲ್ ಸಂಸ್ಥೆ ಈ ಚಿತ್ರ ನಿರ್ಮಿಸಿದ್ದು, ಅಲ್ಲಿನ ದೊಡ್ಡ ಸಿನಿಮಾ ವಿತರಕ ಸಂಸ್ಥೆ ಚೈನಾ ಫಿಲ್ಮ್ ಗ್ರೂಪ್ ಕಾರ್ಪೋರೇಷನ್ ಈ ಚಿತ್ರದ ವಿತರಣೆ ಹೊಣೆ ಹೊತ್ತಿದೆ. ‘ಲಡ್ಕೀ’ ಮತ್ತು ‘ಡ್ರ್ಯಾಗನ್ ಗರ್ಲ್’ ಡಿಸೆಂಬರ್ 10ರಂದು ವಿಶ್ವದಾದ್ಯಂತ ತೆರೆಕಾಣಲಿವೆ. ಚೀನಾದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆಯಂತೆ. ಖ್ಯಾತ ಮಾರ್ಷಿಯಲ್ ಆರ್ಟ್ಸ್ ಪಟು ಬ್ರೂಸ್ ಲೀ ಅವರ ಅಪ್ಪಟ ಅಭಿಮಾನಿ ನಿರ್ದೇಶಕ ಆರ್ಜಿವಿ. ಹಾಗಾಗಿ ಈ ಚಿತ್ರವನ್ನು ಅವರು ಬ್ರೂಸ್ ಲೀಗೆ ಅರ್ಪಿಸಿದ್ದಾರೆ. ನವೆಂಬರ್ 27ರ ಬ್ರೂಸ್ಲೀ ಹುಟ್ಟುಹಬ್ಬದಂದು ದುಬೈನಲ್ಲಿ ಚಿತ್ರದ ದೊಡ್ಡ ಪ್ರೊಮೋಷನ್ ಇವೆಂಟ್ ನಡೆಯಲಿದೆ. ಅಂದು ಶುರುವಾಗಲಿರುವ ಫೋಷನ್ ಕುಂಗ್ ಫು ಫಿಲ್ಮ್ ಫೆಸ್ಟಿವಲ್ನಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ.