ರಿಷಿ, ಪ್ರಣೀತಾ ಸುಭಾಷ್ ಮತ್ತು ಶುಭ್ರ ಅಯ್ಯಪ್ಪ ನಟಿಸಿರುವ ‘ರಾಮನ ಅವತಾರ’ ಸಿನಿಮಾದ ಟ್ರೇಲರ್ ಬಡುಗಡೆಯಾಗಿದೆ. ವಿಕಾಸ್ ಪಂಪಾಪತಿ ಚೊಚ್ಚಲ ನಿರ್ದೇಶನದ ಚಿತ್ರವಿದು. ಕಾಮಿಡಿ, ಪಂಚಿಂಗ್ ಡೈಲಾಗ್ಸ್, ಸಿನಿಮಾದ ಕಥೆ ಬಗ್ಗೆ ಕುತೂಹಲ ಹೆಚ್ಚಿಸುವ ಟ್ರೇಲರ್ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸುತ್ತಿದೆ.
ರಾಮನ ಅವತಾರ ಸಿನಿಮಾದಲ್ಲಿ ನಿರ್ದೇಶಕ ಹೇಳೋಕೆ ಹೊರಟಿರೋದು ಮನೆಗಳಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ನಿತ್ಯ ನಡೆಯುವ ರಾಮಾಯಣವನ್ನೇ. ಟೀಸರ್, ಹಾಡು ಹಾಗೂ ವಿಭಿನ್ನ ಪ್ರಮೋಷನ್ ವಿಡಿಯೋಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ರಾಮನ ಅವತಾರ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಪ್ರತಿ ಡೈಲಾಗ್‌ನಲ್ಲೂ ಕಾಮಿಡಿ, ಪಂಚಿಂಗ್ ಡೈಲಾಗ್ಸ್, ಸಿನಿಮಾದ ಕಥೆ ಬಗ್ಗೆ ಕುತೂಹಲ ಹೆಚ್ಚಿಸುವ ಟ್ರೇಲರ್ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸುತ್ತಿದೆ. ಈ ಟ್ರೇಲರ್‌ನಲ್ಲಿ ನಗು, ಅಳು, ಪ್ರೀತಿ-ಪ್ರೇಮ ಎಲ್ಲವೂ ಇದೆ. ವಿಭಿನ್ನ ರೀತಿಯ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ರಿಷಿ, ಇತ್ತೀಚೆಗೆ ವೆಬ್ ಸೀರಿಸ್ ಮೂಲಕವೂ ಮೋಡಿ ಮಾಡಿದ್ದರು. ‘ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ನಟ ಅರುಣ್ ಸಾಗರ್ ಖಳನಟನ ಪಾತ್ರದಲ್ಲಿದ್ದಾರೆ.
ನಟ ರಿಷಿ ಮಾತನಾಡಿ, ”ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ‘ಆಪರೇಷನ್ ಅಲಮೇಲಮ್ಮ’. ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಅದೇ ರೀತಿ ಹಾಸ್ಯಭರಿತ ಚಿತ್ರ ಮಾಡಿ ಎನ್ನುತ್ತಿದ್ದರು. ನನಗೆ ‘ಆಪರೇಷನ್ ಅಲಮೇಲಮ್ಮ’ ಅನ್ನೋದು ಒಂದು ಮ್ಯಾಜಿಕ್. ಅದನ್ನು ರಿಪೀಟ್ ಮಾಡುವ ಹಾಗಿಲ್ಲ. ನೋಡೋಣಾ ಅದು ಸರಳ ಜಾನರ್ ಅಲ್ಲ. ಆ ಸಮಯದಲ್ಲಿ ಪಂಪಾಪತಿ ಸಿಕ್ಕಿದ್ದರು. ಅವರ ಹಾಸ್ಯ ನನಗೆ ಇಷ್ಟವಾಯ್ತು. ರಾಮಾಯಣ ಇಟ್ಟುಕೊಂಡು ಸಿನಿಮಾ ಮಾಡುವ ಕತೆ ತಂದರು. ಈ ಚಿತ್ರ ನನಗೆ ಖುಷಿ ಕೊಟ್ಟಿದೆ. ಇದು ಖುಷಿ ಕೊಡುವ ಸಿನಿಮಾ. ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಸಿನಿಮಾ ಮೇ10ರಂದು ರಿಲೀಸ್ ಆಗುತ್ತಿದೆ. ಹಾಡುಗಳು ನನಗೆ ತುಂಬಾ ಇಷ್ಟ” ಎಂದರು.
ನಿರ್ದೇಶಕ ವಿಕಾಸ್ ಪಂಪಾಪತಿ ಮಾತನಾಡಿ, ‘ಈ ಸಿನಿಮಾ ಮೂಲಕ ಕ್ಯಾರೆಕ್ಟರ್ ಜರ್ನಿ ಹೇಳುತ್ತಿದ್ದೇವೆ. ರಾಮನ ಪಾತ್ರಧಾರಿ ಅವನಿಗೆ ಅವನೇ ಜೆಂಟಲ್ ಮ್ಯಾನ್ ಎಂದು ಹೇಳಿಕೊಂಡು ಓಡಾಡುತ್ತಾ ಇರುತ್ತಾನೆ. ಅವನು ಹೇಗೆ ಜೆಂಟಲ್ ಮ್ಯಾನ್ ಆಗುತ್ತಾನೆ? ಅವನ ಜೀವನದಲ್ಲಿ ನಡೆದ ಘಟನೆಗಳೇನು? ಅವು ಅವನನ್ನು ಹೇಗೆ ಬದಲಾಯಿಸುತ್ತದೆ? ‘ರಾಮನ ಅವತಾರ’ ಎಂದು ಏಕೆ ಹೆಸರಿಟ್ಟಿದ್ದೇವೆ ಎಂದರೆ ಎಲ್ಲರ ಲೈಫ್‌ನಲ್ಲಿಯೂ ಒಂದಲ್ಲ ಒಂದು ರಾಮಾಯಣ ನಡೆಯುತ್ತದೆ. ಸೀತೆ ತರ ಹೆಂಡತಿ, ಲಕ್ಷ್ಮಣನಂತೆ ತಮ್ಮ, ರಾವಣನಿಂದ ಆಗುವ ಸಮಸ್ಯೆ… ಈ ರೀತಿ ಸಮಸ್ಯೆಗಳು ಎಲ್ಲರ ಜೀವನದಲ್ಲೂ ನಡೆಯುತ್ತವೆ. ಆ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎಂದು ಹೇಳಿದರು.
ನಟಿ ಪ್ರಣೀತಾ ಸುಭಾಷ್ ಮಾತನಾಡಿ, ‘ರಾಮನ ಅವತಾರ ತುಂಬಾ ವಿಶೇಷವಾದ ಸಿನಿಮಾ. ರಾಮಾಯಣ ಎಲ್ಲರಿಗೂ ಗೊತ್ತಿದೆ. ಇದು ರಾಮಾಯಣ ಮಾರ್ಡನ್ ವರ್ಷನ್. ನಾನು ಈ ರೀತಿ ಪ್ರಾಜೆಕ್ಟ್ ಭಾಗವಾಗಿದ್ದು, ಖುಷಿ ಕೊಟ್ಟಿದೆ. ರಾಮಾಯಣ ಬಗ್ಗೆ ಅಂದ ತಕ್ಷಣ ಸಿನಿಮಾ ಒಪ್ಪಿಕೊಂಡೆ. ರಿಷಿ ಬೇರೆ ಅವರ ಚಿತ್ರಗಳನ್ನು ನೋಡಿದ್ದೇನೆ. ಶೂಟಿಂಗ್ ಜರ್ನಿ ತುಂಬಾ ಚೆನ್ನಾಗಿತ್ತು’ ಎಂದು ಸಂತಸ ಪಟ್ಟಿದ್ದಾರೆ. ‘ನಿರ್ದೇಶಕರು ನನ್ನ ಪಾತ್ರದ ಹೇಳಿದಾಗ ನಾನು ಎಕ್ಸೈಟ್ ಆದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ನನ್ನನ್ನು ನಾನು ನೋಡಲು ಕಾತುರಳಾಗಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ’ ಎಂದು ಅನುಭವ ಹಂಚಿಕೊಂಡಿದ್ದಾರೆ ಶುಭ್ರ ಅಯ್ಯಪ್ಪ.
‘ರಾಮನ ಅವತಾರ’ ಸಿನಿಮಾಗೆ ವಿಕಾಸ್ ಪಂಪಾಪತಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಇದು ಅವರ ಮೊದಲ ಅನುಭವ. ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಅವರು ‘ಸ್ಟಾರ್ ಫ್ಯಾಬ್ ಪ್ರೊಡಕ್ಷನ್’ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಛಾಯಾಗ್ರಾಹಣ ಮಾಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಮರನಾಥ್ ಸಂಕಲನ ಚಿತ್ರಕ್ಕಿದೆ. ಮೇ 10ಕ್ಕೆ ‘ರಾಮನ ಅವತಾರ’ ರಾಜ್ಯಾದ್ಯಂತ ತೆರೆಗೆ ಬರ್ತಿದೆ.