ನಿರ್ದೇಶಕರ ಆಶಯವೇನೋ ಒಳ್ಳೆಯದೆ, ಆದರೆ ಇದನ್ನು ಪ್ರೇಕ್ಷಕರಿಗೆ ದಾಟಿಸಲು ಅವರು ಹುಡುಕಿಕೊಂಡಿರುವ ಮಾರ್ಗದ ಬಗ್ಗೆ ಸಹಜವಾಗಿಯೇ ತಕರಾರು ಏಳುತ್ತವೆ. ‘ತೋತಾಪುರಿ’ ಭಾಗ 2ರಲ್ಲಿ ನಿರ್ದೇಶಕರು ಇದಕ್ಕೇನಾದರೂ ಪರಿಹಾರ ಕಂಡುಕೊಂಡಿದ್ದಾರೆಯೇ ಎಂದು ನೋಡಬೇಕು.

‘ಸಿದ್ಲುಂಗು’, ‘ನೀರ್‌ದೋಸೆ’ ಸಿನಿಮಾಗಳ ಮೂಲಕ ತಮ್ಮದೇ ಒಂದು ಹಾದಿ ಕಂಡುಕೊಂಡವರು ನಿರ್ದೇಶಕ ವಿಜಯಪ್ರಸಾದ್‌. ಈಗ ಅವರ ‘ತೋತಾಪುರಿ’ ತೆರೆಗೆ ಬಂದಿದೆ. ವಿಶೇಷವೆಂದರೆ ಈ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ತಯಾರಾಗಿದೆ ಅನ್ನೋದು. ‘ತೋತಾಪುರಿ’ ಭಾಗ 1ರಲ್ಲಿ ವಿಜಯಪ್ರಸಾದ್‌ ಮೂವರು ನಿರೂಪಕರೊಂದಿಗೆ ಕತೆ ಹೇಳುತ್ತಾರೆ. ಈ ಮೂವರು ಮೂರು ಧರ್ಮೀಯರು. ಹಿಂದೂ, ಮುಸಲ್ಮಾನ ಮತ್ತು ಕ್ರಿಶ್ಚಿಯನ್‌. ‘ಜಾತಿ – ಧರ್ಮಗಳನ್ನು ಮೀರಿ ಎಲ್ಲರೂ ಸಾಮರಸ್ಯದಿಂದ ಬದುಕೋಣ’ ಎನ್ನುವುದು ಚಿತ್ರದ ಒಟ್ಟಾರೆ ಆಶಯ. ಈ ನಿಟ್ಟಿನಲ್ಲಿ ನಿರ್ದೇಶಕರು ಮೂರು ಧರ್ಮೀಯರನ್ನು ನಿರೂಪಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದೊಂದು ಹೊಸ ರೀತಿಯ ಪ್ರಯೋಗ.

ಸಿನಿಮಾದಲ್ಲಿ ಭಿನ್ನ ವ್ಯಕ್ತಿತ್ವದ ಪಾತ್ರಗಳಿವೆ. ಕ್ಯಾರಕ್ಟರ್‌ಗಳನ್ನು ಪರಿಚಯಿಸುವುದರಲ್ಲೇ ಸಿನಿಮಾದ ಮೊದಲಾರ್ಧ ಮುಗಿಯುತ್ತದೆ! ಈರೇಗೌಡ, ಶಕೀಲಾ ಬಾನು, ದೊನ್ನೆ ರಂಗಮ್ಮ, ನಂಜಮ್ಮ, ವಿಕ್ಟೋರಿಯಾ ಚಿತ್ರದ ಪ್ರಮುಖ ಪಾತ್ರಗಳು. ಉಳಿದಂತೆ ಆರೇಳು ಸಪೋರ್ಟಿಂಗ್‌ ಪಾತ್ರಗಳಿವೆ. ಈರೇಗೌಡ, ಶಕೀಲಾ ಬಾನು ಮತ್ತು ವಿಕ್ಟೋರಿಯಾ ಒಬ್ಬರಿಗೊಬ್ಬರು ಪರಿಚಯ ಆಗೋದು ರಾಯರ ಮಠದಲ್ಲಿ ಎನ್ನುವುದು ವಿಶೇಷ. ಮಠದಲ್ಲಿ ಶಕೀಲಾ ಬಾನು ವೀಣೆ, ದೊನ್ನೆ ರಂಗಮ್ಮನ ಹಾಡು ತುಂಬಾ ಜನಪ್ರಿಯ.

ಈ ಹಿಂದಿನ ಸಿನಿಮಾಗಳಂತೆ ವಿಜಯಪ್ರಸಾದ್‌ ಇಲ್ಲಿಯೂ ಚೇಷ್ಟೆ ಮುಂದುವರೆಸಿದ್ದಾರೆ. ಈರೇಗೌಡ, ದೊನ್ನೆ ರಂಗಮ್ಮ ಮಾತನಾಡುವ ಬಹುತೇಕ ಮಾತುಗಳಲ್ಲಿ ಡಬ್ಬಲ್‌ ಮೀನಿಂಗ್‌ ಕೇಳಿಸುತ್ತದೆ. ಆದರೆ ವಿಜಯಪ್ರಸಾದ್‌ ಇದನ್ನು ಅಶ್ಲೀಲ ಅನ್ನೋಲ್ಲ. ಅರ್ಥ ಹುಡುಕಿಕೊಳ್ಳಿ ಎಂದು ಪ್ರೇಕ್ಷಕರಿಗೇ ಬಿಡುತ್ತಾರೆ. ಪ್ರೇಕ್ಷಕರ ತಲೆಗೆ ಹುಳ ಬಿಡುತ್ತಲೇ ಸಿನಿಮಾದಲ್ಲಿ ದೊಡ್ಡ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾ ಹೋಗುತ್ತಾರೆ. ಸಂಭಾಷಣೆಗಳಿಗೆ ಸಂಬಂಧಿಸಿದಂತೆ ಅವರೇನೇ ಹೇಳಿದರೂ ಫ್ಯಾಮಿಲಿ ಜೊತೆ ಕುಳಿತು ಸಿನಿಮಾ ನೋಡೋಕೆ ಕಸಿವಿಸಿ ಆಗೋದಂತೂ ಹೌದು.

ನಟ ಜಗ್ಗೇಶ್‌ ಮ್ಯಾನರಿಸಂ ಮತ್ತು ಟೈಮಿಂಗ್‌ ವಿಜಯಪ್ರಸಾದ್‌ ಮೇಕಿಂಗ್‌ ಶೈಲಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ತೋತಾಪುರಿ ಕಟ್‌ಗೆ ಫೇಮಸ್‌ ಆಗಿರೋ ಟೈಲರ್‌ ಈರೇಗೌಡನ ಪಾತ್ರದಲ್ಲಿ ಜಗ್ಗೇಶ್‌ ಸಿನಿಮಾ ಪೂರ್ತಿ ನಗಿಸುತ್ತಾರೆ. ಅವರ ಮಾತುಗಳಲ್ಲಿ ಕೆಲವೊಮ್ಮೆ ಡಬ್ಬಲ್‌, ಮತ್ತೆ ಕೆಲವೊಮ್ಮೆ ಮಲ್ಟಿಪಲ್‌ ಮೀನಿಂಗೂ ಧ್ವನಿಸುತ್ತದೆ. ಈ ಸಂಭಾಷಣೆಗಳಲ್ಲಿ ತಲೆ ಮೇಲೆ ಮೊಟಕಿ ಬುದ್ಧಿ ಹೇಳುವಂಥ ಮೊನಚು ಮಾತುಗಳೂ ಇವೆ ಎನ್ನುವುದು ಗಮನಾರ್ಹ.

ಸಿನಿಮಾದಲ್ಲಿ ನಂಜಮ್ಮನ ಪಾತ್ರವನ್ನು ಸೊಗಸಾಗಿ ಹೆಣೆಯಲಾಗಿದೆ. ಹೇಮಾ ದತ್ತ ಈ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಸ್ಯಾನಿಟರಿ ಪ್ಯಾಡ್‌ ಕುರಿತು ಪ್ರಸ್ತಾಪ ಆಗೋ ನಂಜಮ್ಮ ನಟಿಸಿರೋ ಒಂದು ಸನ್ನಿವೇಶ ಆಡಿಯನ್ಸ್‌ ಕಣ್ಣು ಮಂಜಾಗಿಸೋದ್ರಲ್ಲಿ ಸಂದೇಹವೇ ಇಲ್ಲ. ಇಂಥದ್ದೊಂದು ಸೀನ್‌ ಬರೆಯೋದು ತುಂಬಾ ಕಷ್ಟ. ಈ ಸನ್ನಿವೇಶವನ್ನು ಚಿತ್ರದಲ್ಲಿ ಅಳವಡಿಸಿರುವ ವಿಜಯಪ್ರಸಾದ್‌ ಅವರಿಗೆ ವಿಶೇಷ ಅಭಿನಂದನೆ ಸಲ್ಲಬೇಕು. ಇನ್ನು ದೊನ್ನೆ ರಂಗಮ್ಮನಾಗಿ ವೀಣಾ ಸುಂದರ್‌ ಸೂಪರ್‌. ಅವರ ಆಕ್ಟಿಂಗ್‌ ಕೆರಿಯರ್‌ನಲ್ಲಿ ಇದು ತುಂಬಾನೇ ಮಹತ್ವದ ಪಾತ್ರ.

ಮೊದಲೇ ಹೇಳಿದಂತೆ ಇದು ಎರಡು ಪಾರ್ಟ್‌ಗಳಲ್ಲಿ ಬರುತ್ತಿರುವ ಸಿನಿಮಾ. ಫಸ್ಟ್‌ ಪಾರ್ಟ್‌ನಲ್ಲಿ ಪಾತ್ರಗಳನ್ನು ಇಂಟ್ರಡ್ಯೂಸ್‌ ಮಾಡೋದ್ರಲ್ಲೇ ಸಿನಿಮಾ ಮುಗಿಸುವ ನಿರ್ದೇಶಕರು ಬಹುಶಃ ಮುಂದಿನ ಪಾರ್ಟ್‌ನಲ್ಲಿ ಗಟ್ಟಿ ಕತೆ ಜೊತೆ ಬರಲಿದ್ದಾರೆ ಎಂದು ಭಾವಿಸಬಹುದು. ಆದರೆ ಅದೇಕೋ ಈ ಸಿನಿಮಾದ ಫಸ್ಟ್‌ ಹಾಫ್‌ ಕೊಡೋ ಮಜಾ ಸಕೆಂಡ್‌ ಹಾಫ್‌ನಲ್ಲಿ ಇಲ್ಲ ಅನ್ನೋದು ಬೇಜಾರು. ಸೆಕೆಂಡ್‌ ಪಾರ್ಟ್‌ನಲ್ಲಿ ಬರೋ ಧನಂಜಯ್‌ ಪಾತ್ರದ ಒಂದು ಸಣ್ಣ ಝಲಕ್‌ನ ನಿರ್ದೇಶಕರು ಇಲ್ಲಿ ತೋರಿಸುತ್ತಾರೆ. ಒಂದಷ್ಟು ಒಳ್ಳೇ ವಿಚಾರಗಳನ್ನೇ ನಿರ್ದೇಶಕರು ಇಲ್ಲಿ ಹೇಳುತ್ತಾ ಹೋಗುತ್ತಾರೆ. ನಿರ್ದೇಶಕರ ಆಶಯವೇನೋ ಒಳ್ಳೆಯದೆ, ಆದರೆ ಇದನ್ನು ಪ್ರೇಕ್ಷಕರಿಗೆ ದಾಟಿಸಲು ಅವರು ಹುಡುಕಿಕೊಂಡಿರುವ ಮಾರ್ಗದ ಬಗ್ಗೆ ಸಹಜವಾಗಿಯೇ ತಕರಾರು ಏಳುತ್ತವೆ. ‘ತೋತಾಪುರಿ’ ಭಾಗ 2ರಲ್ಲಿ ನಿರ್ದೇಶಕರು ಇದಕ್ಕೇನಾದರೂ ಪರಿಹಾರ ಕಂಡುಕೊಂಡಿದ್ದಾರೆಯೇ ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here