ರಾಮೋಜಿ ಫಿಲ್ಮ್‌ ಸಿಟಿ ಸಂಸ್ಥಾಪಕ, ಈನಾಡು ತೆಲುಗು ಪತ್ರಿಕೆ, ಈಟೀವಿ ಸಂಸ್ಥಾಪಕ ರಾಮೋಜಿರಾವ್‌ (87 ವರ್ಷ) ಇಂದು (ಜೂನ್‌ 8) ಬೆಳಗ್ಗೆ ಹೈದರಾಬಾದ್‌ನಲ್ಲಿ ಅಗಲಿದ್ದಾರೆ. ಅವರ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನೇಕರು ಸಂತಾಪ ಸೂಚಿಸಿದ್ದಾರೆ.

ರಾಮೋಜಿ ಫಿಲ್ಮ್‌ ಸಿಟಿ ಸಂಸ್ಥಾಪಕ, ಮಾಧ್ಯಮ ಕ್ಷೇತ್ರದ ದಿಗ್ಗಜ ರಾಮೋಜಿರಾವ್‌ (87 ವರ್ಷ) ಇಂದು (ಜೂನ್‌ 8) ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಸ್ಟಾರ್‌ ಹಾಸ್ಪಿಟೆಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3.45ಕ್ಕೆ ಅಗಲಿದ್ದಾರೆ. ರಾಮೋಜಿರಾವ್‌ ಅವರ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಭಾರತೀಯ ಸಿನಿಮಾರಂಗದ ಪ್ರಮುಖರನೇಕರು ಸಂತಾಪ ಸೂಚಿಸಿ ಅವರ ಸಾಧನೆ, ಕೊಡುಗೆಯನ್ನು ಸ್ಮರಿಸಿದ್ದಾರೆ.

ಚೆರುಕೂರಿ ರಾಮೋಜಿ ರಾವ್‌ ಅವರು ಜನಿಸಿದ್ದು 1936, ನವೆಂಬರ್‌ 16ರಂದು. ಮನರಂಜನೆ ಮತ್ತು ಮಾಧ್ಯಮ ಕ್ಷೇತ್ರಗಳಿಗೆ ಅವರ ಕೊಡುಗೆ ಬಹುದೊಡ್ಡದು. ಹೈದರಾಬಾದ್‌ನಲ್ಲಿ ಅವರು ನಿರ್ಮಿಸಿರುವ ರಾಮೋಜಿ ರಾವ್‌ ಫಿಲ್ಮ್‌ ಸಿಟಿ, ಜಗತ್ತಿನ ಅತಿ ದೊಡ್ಡ ಫಿಲ್ಮ್‌ ಸಿಟಿ. ಸುಮಾರು 2000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಫಿಲ್ಮ್‌ ಸಿಟಿಯಲ್ಲಿ ಚಿತ್ರನಿರ್ಮಾಣ, ಸ್ಟುಡಿಯೋಗಳು, ಪೋಸ್ಟ್‌ ಪ್ರೊಡಕ್ಷನ್‌ಗೆ ಅಗತ್ಯವಿರುವ ಸಂಪೂರ್ಣ ಸೌಲಭ್ಯಗಳಿವೆ. ಭಾರತೀಯ ಸಿನಿಮಾರಂಗದ ವಿವಿಧ ಭಾಷೆಗಳ ಸಿನಿಮಾಗಳು ಇಲ್ಲಿ ಚಿತ್ರಿಕರಣಗೊಳ್ಳುತ್ತವೆ. ರಾಮೋಜಿ ರಾವ್‌ ಫಿಲ್ಮ್‌ ಸಿಟಿ ಸಿನಿಮಾ ಚಿತ್ರೀಕರಣಕ್ಕಷ್ಟೇ ಸೀಮಿತವಾಗಿಲ್ಲ. ಹೈದರಾಬಾದ್‌ನ ಪ್ರಮುಖ ಪ್ರವಾಸಿ ತಾಣವಾಗಿದೆ. ಸಿನಿಮಾರಂಗದ ಹೊರತಾಗಿ ಮಾಧ್ಯಮ ಕ್ಷೇತ್ರದಲ್ಲೂ ರಾಮೋಜಿರಾವ್‌ ಅವರ ಅಚ್ಚಳಿಯದ ಛಾಪು ಇದೆ. ಅವರು ಸ್ಥಾಪಿಸಿರುವ ಈನಾಡು ಗ್ರೂಪ್‌ನ ಈನಾಡು, ತೆಲುಗು ನಾಡಿನ ಪ್ರಮುಖ ದಿನಪತ್ರಿಕೆ. ಟೀವಿ ಚಾನೆಲ್‌, ಸಿನಿಮಾ ನಿರ್ಮಾಣ ಸಂಸ್ಥೆ ಸೇರಿದಂತೆ ಇತರೆ ಉದ್ಯಮಗಳಲ್ಲಿ ರಾಮೋಜಿ ಗ್ರೂಪ್ಸ್‌ ಸಕ್ರಿಯವಾಗಿದೆ.

LEAVE A REPLY

Connect with

Please enter your comment!
Please enter your name here