ಕಾಲೇಜು ಮತ್ತು ಹಿಜಾಬ್‌ನ ಕತೆ ಹೇಳದಿದ್ದರೂ ಇತ್ತಂಡಗಳ ರಾಜಕೀಯ ಪ್ರಭಾವ – ಪ್ರೇರಣೆಯನ್ನು ನಗಿಸುವ ವಿಡಂಬನೆ ಬಳಸಿ ತೋರಿಸುತ್ತದೆ. ಜನವರಿಯಲ್ಲಿ ಥಿಯೇಟರ್‌ಗೆ ಬಂದ ‘ರಂಡು’ ಮಲಯಾಳಂ ಸಿನಿಮಾ ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಂ ಆಗುತ್ತಿದೆ.
ಅದೆಲ್ಲೋ ಸರಕು ಇಳಿಸಿ ಮತ್ತೆಲ್ಲೋ ಹೋಗುತ್ತಿರುವ ಲಾರಿಗೆ ಅದೊಂದು ರಾತ್ರಿಯ ಹಾದಿಯಲ್ಲಿ ಸಿಗುವ ಊರು. ಚಳಿಯಾಗುತ್ತಿದೆ ಎಂದು ಚಾಲಕ ಮತ್ತು ಕ್ಲೀನರ್‌ಗೆ ಒಂದೊಂದು ಪೆಗ್ ಹಾಕಬೇಕು ಅನಿಸುತ್ತದೆ. ಅದಕ್ಕೆ ಬೇಕಾದ ವ್ಯವಸ್ಥೆಯೂ ಅವರಲ್ಲಿಯೇ ಇರುತ್ತದೆ. ಲಾರಿಯನ್ನು ಅಲ್ಲೇ ನಿಲ್ಲಿಸಿ, ಸಣ್ಣದಾಗೊಂದು ಗುಂಡು ಏರಿಸಿ ಹೊರಡಬೇಕು. ಚಳಿಗೆ ಕಿವಿ ಮುಚ್ಚಿಕೊಳ್ಳಲು ಡ್ರೈವರ್ ಬಳಿ ಮಂಕಿ ಕ್ಯಾಪ್ ಇದೆ. ತನ್ನದೂ ಕಿವಿ ಮುಚ್ಚಿಕೊಳ್ಳಲು ಅತ್ತಿತ್ತ ತಡಕಾಡುವ ಕ್ಲೀನರ್‌ಗೆ ಸಿಗುವುದು ಲಾರಿಯ ಕಿಟಿಕಿಯ ಬದಿಯೇ ನೇತಾಡುವ ಮೂರ್ನಾಲ್ಕು ಬಟ್ಟೆ. ಅದರಲ್ಲಿ ಒಂದನ್ನು ಹರಿದು ತಲೆಗೆ ಕಟ್ಟಿಕೊಳ್ಳುತ್ತಾನೆ, ಲಾರಿಯ ಪಯಣ ಮುಂದುವರಿಯುತ್ತದೆ. ಮರುದಿನ ಊರವರು ನೋಡುವಾಗ ಭಾರಿ ಸಂಚು ಗಮನಕ್ಕೆ ಬರುತ್ತದೆ. ಒಂದರ ಪಕ್ಕ ಒಂದಿರುವ ಸಿಪಿಐ, ಡಿವೈಎಫ್‌ಐ, ಕೇಸರಿ ಹಾಗೂ ಹಸಿರು ಬಾವುಟಗಳ ಪೈಕಿ ಹಸಿರು ಬಾವುಟ ಮಾತ್ರ ಹರಿದಿದೆ. ಅಲ್ಲಿಂದ ನಂತರ ಕೋಮು ದಳ್ಳುರಿ ಭುಗಿಲೇಳುವ ಕತೆಯಾಗಿದ್ದರೆ ಈ ಸಿನಿಮಾದ ಬಗ್ಗೆ ಬರೆಯಬೇಕು ಅನಿಸುತ್ತಲೇ ಇರಲಿಲ್ಲ. ಬೆಂಕಿಯ ನಡುವೆ ನಲುಗುವ ಉತ್ಕಟ ಪ್ರೇಮ ಕತೆ ಇದ್ದಿದ್ದರೂ ಅದು ಹೊಸತು ಅನಿಸುತ್ತಿರಲಿಲ್ಲ. ವೈಭವೀಕರಿಸದೆ, ಉತ್ಪ್ರೇಕ್ಷೆಗಿಳಿಯದೆ ಕೋಮು ಸೂಕ್ಷ್ಮದ ಕತೆ ಹೇಳುವ ಕಾರಣ ಮಲೆಯಾಳ ಸಿನಿಮಾ ‘ರಂಡು’ ಭಿನ್ನವಾಗಿದೆ.
ಇಂಥದ್ದೊಂದು ಘಟನೆ ನಡೆದ ಕೂಡಲೇ ಬೆಂಕಿ ಹತ್ತಿಕೊಳ್ಳುವ ಪ್ರಕ್ಷುಬ್ದ ವಾತಾವರಣ ಈಗಿಲ್ಲ. ಹಿಜಾಬ್ ಧರಿಸಿ ಬಂದೊಡನೆಯೇ ಪುಣ್ಯವಶಾತ್ ಕಲ್ಲು ತೂರಾಟ ನಡೆಯುವುದಿಲ್ಲ. ಆದರೆ ಖಂಡಿತವಾಗಿ ಅಲ್ಲಿ ರಾಜಕೀಯ ಧೂಳೆಬ್ಬಿಸುತ್ತದೆ. ಹಾಗೆ ಧೂಳೆಬ್ಬಿದ ದಾರಿಯನ್ನು ಹಿಂದಿರುಗಿ ನೋಡಿದಾಗಿ ನಡೆದು ಬಂದ ಹಾದಿಯೂ ಮಸುಕು ಮಸುಕು. ಕಾಲೇಜು ಮತ್ತು ಹಿಜಾಬ್‌ನ ಕತೆ ಹೇಳದಿದ್ದರೂ ಇತ್ತಂಡಗಳ ರಾಜಕೀಯ ಪ್ರಭಾವ – ಪ್ರೇರಣೆಯನ್ನು ನಗಿಸುವ ವಿಡಂಬನೆ ಬಳಸಿ ತೋರಿಸುತ್ತದೆ.
ಧ್ವಜ ಹರಿದ ಮರುದಿನ ಚೆಂಪರಿಕ ಎಂಬ ಆ ಊರಲ್ಲಿ ಅದೊಂದು ದೊಡ್ಡ ಸುದ್ದಿ, ಆದರೂ ಸಮುದಾಯಗಳ ಹಿರಿಯರು ಶಾಂತಿ ಸಭೆ ಆಯೋಜಿಸುವಲ್ಲಿ ಯಶಸ್ವಿಯಾಗುತ್ತಾರೆ. ಪರಿಸ್ಥಿತಿ ತಿಳಿಗೊಳಿಸಲು ಅವರು ಮಾಡುವ ಪ್ರಯತ್ನ ಫಲ ನೀಡುತ್ತದೆ ನಿಜ, ಆದರೂ ಗಲಾಟೆ ನಡೆಯಲಿಲ್ಲ ಎಂಬ ಅಸಮಾಧಾನ ಕೆಲವರಲ್ಲಿ. ಆ ಪೈಕಿ ಒಬ್ಬ ಮುಕ್ರಿ, ಮತ್ತೋರ್ವ ಕಾರ್ಯಕರ್ತ ಚಂದ್ರನ್ – ಇಬ್ಬರೂ ಕಾಲು ಕರೆದು ಜಗಳಕ್ಕೆ ನಿಲ್ಲುವ ಅಸಹಿಷ್ಣುಗಳು.
ಒಳ್ಳೆಯದೊಂದು ಕೆಲಸಕ್ಕೆ ಪ್ರಯತ್ನ ಪಡುತ್ತಾ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುವ ಶೈಲೇಂದ್ರ ಕುಮಾರ್ ಅಲಿಯಾಸ್ ವಾವ ಇಲ್ಲಿನ ಕಥಾನಾಯಕ ಎನ್ನಬಹುದು. ಹಾಗೆಂದು ಹೀರೋಯಿನ್ ಜತೆಗೆ ಕುಣಿಯುವ, ಹತ್ತು ರೌಡಿಗಳನ್ನು ಬಡಿಯುವ ಸಾಮರ್ಥ್ಯದ ನಾಯಕನಲ್ಲ. ಗ್ರಾಮೀಣ ಮಟ್ಟದ ಕ್ರಿಕೆಟ್ಟು – ಕಬಡ್ಡಿ ಆಟಗಳಲ್ಲಿ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡುವಲ್ಲಿಗೆ ಇಲ್ಲಿ ನಾಯಕನ ಹೀರೋಯಿಸಮ್ ಸೀಮಿತಗೊಂಡಿದೆ. ನಾಯಕ ಪಾತ್ರವನ್ನು ಹೀಗೆ ಸಾಮಾನ್ಯನಂತೆ ಬಿಂಬಿಸಿರುವುದರಿಂದ ಇದೊಂದು ನಮ್ಮ ನಿಮ್ಮ ನಡುವೆಯೇ ನಡೆಯುತ್ತಿರುವ ಕತೆ ಅನಿಸುತ್ತದೆ. ಪಕ್ಕದ ಮನೆಯಲ್ಲೇ ಮುಸ್ಲಿಂ ಕುಟುಂಬ ಇರುವುದು ಮತ್ತು ಶಾಜಹಾನ್ ಎಂಬ ಮುಸ್ಲಿಂ ಗೆಳೆಯನೂ ಇರುವ ವಾವ ಭಾರಿ ಆದರ್ಶಗಳ ವ್ಯಕ್ತಿತ್ವವೂ ಅಲ್ಲ. ಮದುವೆಯಾಗಿ ಗಂಡ ಕೆನಡಾದಲ್ಲಿ ಇರುವ ಮಹಿಳೆಯ ಕಡೆಗೂ ಇವನ ಮನಸು ಕೊಂಚ ವಾಲುತ್ತದೆ.
ಹಾಗೆಯೇ ವಾಲಿದ ಒಂದು ದಿನ ಅವಳ ಆಮಂತ್ರಣದ ಮೇರೆಗೆ ಒಂದು ಮುಂಜಾನೆ ಗೌಪ್ಯವಾಗಿ ಅವಳ ಮನೆ ಕಡೆಗೆ ಹೆಜ್ಜೆ ಹಾಕುತ್ತಾನೆ. ಈ ನಡುವೆ ಹೊಟ್ಟೆ ಗುಡುಗುಡುವಾದಾಗ ಅವನ ಕಣ್ಣಿಗೆ ಕಾಣುವುದು ಮಸೀದಿಯ ಆವರಣದಲ್ಲಿರುವ ಟಾಯ್ಲೆಟ್ಟು. ಇವನ ಗ್ರಹಚಾರದಿಂದ ಮೊದಲೇ ಅಸಹಿಷ್ಣುವಾದ ಮುಕ್ರಿಯೇ ಅಲ್ಲಿ ಬರುತ್ತಾನೆ. ಟಾಯ್ಲೆಟ್ಟಲ್ಲಿ ಯಾರೋ ಆಗಂತುಕನಿದ್ದಾನೆ ಎಂಬ ಗುಲ್ಲೆಬ್ಬುತ್ತದೆ. ಅಷ್ಟು ಹೊತ್ತಿಗೆ ಅಲ್ಲಿಗೆ ತಾನು ಏಕೆ ಬಂದೆ ಎಂದು ಸತ್ಯ ಹೇಳುವ ಪರಿಸ್ಥಿತಿಯಲ್ಲಿ ವಾವಾ ಇಲ್ಲ. ಹಾಗಾಗಿ ಕಾನೂನು ಪ್ರಕಾರ ಪೊಲೀಸರ ಪ್ರವೇಶ, ಈತನಿಗೆ ಕೆಲವು ದಿನಗಳ ಜೈಲು.
ಹೇಳಿಕೊಳ್ಳಲಾಗದ ಸಂಕಟದಿಂದ ಜೈಲು ಸೇರಿ ವಾವ ಹೊರಬರುವ ಹೊತ್ತಿಗೆ ಊರಲ್ಲಿ ಬಿಗುವಿನ ವಾತಾವರಣ. ಮುಸಲ್ಮಾನರ ಜತೆಗೆ ನಕ್ಕು ಮಾತಾಡುತ್ತಾನೆ ಎಂಬ ಕಾರಣಕ್ಕೆ ಕಿಡಿ ಕಾರುತ್ತಿದ್ದ ಗುಂಪಿನ ಪಾಲಿಗೆ ಈತನೀಗ ಹೀರೋ. ರಿಕ್ಷಾ ಡೈವರ್ ವಾವ ಈಗ ವಾವಾಜೀ. ಒಲ್ಲೆನೆಂದರೂ ಹಿಡಿದಿಟ್ಟು ಅವನಿಗಾಗಿ ತೆರೆದ ಜೀಪಿನಲ್ಲಿ ವಿಜಯೋತ್ಸವದ ಮೆರವಣಿಗೆ. ಮಾರ್ಗಮಧ್ಯೆ ಸಭಾ ಕಾರ್ಯಕ್ರಮ, ಶಾಲು ಹೊದೆಸಿ ಸನ್ಮಾನ. ಇಷ್ಟೆಲ್ಲ ಆಗುವ ಹೊತ್ತಿಗೆ ಅದುವರೆಗೂ ನಗುತ್ತಾ ಮಾತಾಡುತ್ತಿದ್ದ ಸಮುದಾಯಕ್ಕೆ ಅವನನ್ನು ಕಂಡರೆ ದೂರ ಹೋಗುವ ಪರಿಸ್ಥಿತಿ. ಸತ್ಯ ವಿವರಿಸಲು ಮುಂದಾದಾಗ ಅದನ್ನು ಒಪ್ಪಲು ಎರಡೂ ಪಂಗಡಗಳು ತಯಾರಿರುವುದಿಲ್ಲ. ಈ ಮುಖ್ಯ ಭೂಮಿಕೆಯಲ್ಲಿ ಸಾಗುವ ಕತೆಯ ಬದಿಯಲ್ಲಿ ಹಾದುಹೋಗುವ ಒಂದಷ್ಟು ಉತ್ತಮ ಸನ್ನಿವೇಶಗಳಿವೆ.
ಹೋಟೆಲಲ್ಲಿ ಕೂತು ಚಾ ಕುಡಿಯುವ ವೇಳೆ ‘ಅಂಬಾನಿ-ಅದಾನಿಗೆ ಏನೇ ಇರಲಿ. ನಮ್ಮ ಬದುಕು ನಾವೇ ನೋಡ್ಕೋಬೇಕಲ್ಲ’ ಎಂದು ಶಾಜಹಾನ್ ಹೇಳುವ ಮಾತು ಹಿಂದೂಭಕ್ತಿಯ ಚಂದ್ರನ್‌ಗೆ ಕಿಚಾಯಿಸಿದಂತೆ ಕೇಳುತ್ತದೆ. ‘ನೋಡೂ, ಅದಾನಿ ವಿಚಾರಕ್ಕೆ ನೀನು ಬರೋದು ಬೇಡ’ ಎನ್ನುವಾಗ ಅದಾನಿಯನ್ನು ಮೋದಿಯ ಪ್ರತಿನಿಧಿಯಂತೆ ವಹಿಸಿ ಮಾತನಾಡುವ ಹಲವು ಮಂದಿ ನಿಮ್ಮ ಕಣ್ಮುಂದೆ ಬರಬಹುದು. ಇನ್ನೊಂದು ಸಂದರ್ಭದಲ್ಲಿ ತನಗೆ ಒಂದಿನಿತೂ ಅರ್ಥವಾಗದ ಸ್ಕ್ವ್ಯಾಷ್ ಆಟವನ್ನು ಭಾರತ ಮತ್ತು ಪಾಕಿಸ್ತಾನದ ಇಬ್ಬರು ಆಡುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ಸವಿಯುವ ಚಂದ್ರನನ್ನು ನೋಡುವಾಗ ಕ್ರೀಡೆಯ ಮೂಲ ಆಶಯವೇ ಹಳಿತಪ್ಪಿರುವುದು ಗೋಚರವಾಗುತ್ತದೆ.
ತನ್ನ ಪಾಡಿಗೆ ತಾನಿರುವವ ಹೇಗೆ ರಾಜಕಾರಣಕ್ಕೆ ಬಳಕೆಗೆ ಸಿಗುವ ವಸ್ತುವಾಗುತ್ತಾನೆ ಎಂಬುದನ್ನು ಈ ಚಲನಚಿತ್ರ ಮನರಂಜನಾತ್ಮಕವಾಗಿ ಹೇಳಿದೆ. ಹಾಗೆಂದು ಸಿನಿಮಾ ತಂತ್ರಜ್ಞಾನ, ಚಿತ್ರಕತೆ ಶೈಲಿಯಲ್ಲಿ ಹೊಸತನ-ಭಿನ್ನತೆ ಏನಿಲ್ಲ. ನಾಯಕ ವಿಷ್ಣು ಉನ್ನಿಕೃಷ್ಣನ್ ನಟನೆಯೂ ಅತ್ಯದ್ಭುತ ಅನಿಸದಿದ್ದರೂ ಪಾತ್ರಕ್ಕೆ ಹೊಂದುತ್ತದೆ. ಕೊನೆಯ ಸನ್ನಿವೇಶ ವಾಸ್ತವಕ್ಕೆ ಹತ್ತಿರವಲ್ಲ, ಚಿತ್ರಕತೆ ಬರೆದ ಬಿನುಲಾಲ್ ಹಾಗೂ ನಿರ್ದೇಶಕ ಸುಜಿತ್‌ಲಾಲ್ ಅವರ ವೈಯಕ್ತಿಕ ದೃಷ್ಟಿಕೋನದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಇವೆಲ್ಲವುಗಳ ಮಧ್ಯೆ ನಾಯಕನ ತಂದೆ ಟಿವಿಯಲ್ಲಿ ನೋಡುವ ‘ಕಥೆಯಲ್ಲಿತು ಜೀವಿತಂ’ ಪ್ರಸ್ತಾಪ ಸನ್ನಿವೇಶಕ್ಕೆ ಹೊಂದುತ್ತದೆ. ಹಾಗೆಯೇ ಟಿವಿ ಚಾನೆಲ್‌ಗಳು ಎಲ್ಲಾ ಭಾಷೆಗಳಲ್ಲೂ ಒಂದೇ ನಮೂನೆಯ ಕಾರ್ಯಕ್ರಮ ನಿರ್ಮಾಣ ಮಾಡುತ್ತಾರೆ ಎಂಬುದೂ ಗಮನಕ್ಕೆ ಬರುತ್ತದೆ.