ನವ್ಯಚಿತ್ರದ ಸುತ್ತ ಅಲುಗಾಡದೇ ನಿಂತ ಫ್ರೇಮಿನಂತೆಯೇ ಅದರೆದುರು ಗಂಟೆಗಟ್ಟಲೆ ನಿಂತು ವಿಮರ್ಶಿಸೀ ವಿಮರ್ಶಿಸಿ ಬುದ್ಧಿಯ ಒಳಗೆ ಇಳಿಸಿಕೊಳ್ಳಬೇಕಾದ ಸಿನಿಮಾವಿದು. ಸ್ಥಾಪಿತ ಸೂತ್ರಗಳ ಚೌಕಟ್ಟಿನ ಆಚೆ ನಿಲ್ಲುವ ಚಲನಚಿತ್ರ ‘ಚುರುಳಿ’ SonyLIV ನಲ್ಲಿ ಸ್ಟ್ರೀಂ ಆಗುತ್ತಿದೆ.

ಕೆ.ಎಸ್.ನ ಕವಿತೆಗಳನ್ನು ಓದುವುದು ಸುಲಲಿತ, ಹಾಡಿದಾಗ ಕೇಳಲು ಮನೋಹರ. ಆರಂಭದ ಕೆಲವು ಪದ್ಯಗಳ ಹೊರತುಪಡಿಸಿ ಅಡಿಗರ‌ ಕವಿತೆಗಳಿಗೆ ರಾಗಸಂಯೋಜನೆ ಕಷ್ಟ, ಓದು ಕ್ಲಿಷ್ಟ. ಒಂದೇ ಓದಿಗೆ ಅರ್ಥಕ್ಕೆ ನಿಲುಕದ ಸಾಹಿತ್ಯವದು. ಹಾಗೆ ಒಂದೇ ಓದಿಗೆ ನಿಲುಕಬಾರದೆಂಬ ಉದ್ದೇಶದಿಂದಲೇ ಬರೆದಂಥವೂ ಹೌದು. ತುಸು ಗೌರವಪೂರ್ಣವಾಗಿ ಹೇಳುವುದಾದರೆ ಹಲವು ಅರ್ಥ-ಅಯಾಮಗಳನ್ನು ತನ್ನೊಳಗೆ ಹುದುಗಿಸಿಕೊಂಡ ಸಾಹಿತ್ಯ. ನವ್ಯದ ವರ್ಗಕ್ಕೆ ಬರುವ ವರ್ಣಚಿತ್ರ-ಕಲಾಕೃತಿಗಳೂ ಹಾಗೆಯೇ, ಒಮ್ಮೆ ನೋಡಿ ಅರ್ಥ ಮಾಡಿಕೊಳ್ಳುವಂಥವಲ್ಲ. ನೋಡುತ್ತಾ ನೋಡುತ್ತಾ ಅರ್ಥ ಮಾಡಿಕೊಳ್ಳಬೇಕಾದ್ದು. ಅದೇ ಸಾಲಿಗೆ ಸೇರುತ್ತದೆ ‘ಚುರುಳಿ’ ಸಿನಿಮಾ.

ಕನ್ನಡದಲ್ಲಿ ಸುರುಳಿ ಎಂಬರ್ಥ ನೀಡುವ ‘ಚುರುಳಿ’ ಎಂಬ ಮಲಯಾಳ ಸಿನಿಮಾ ಭೂತ – ಭವಿಷ್ಯ – ವರ್ತಮಾನದ ಮೇರೆ ಮೀರಿದ ಸಮಯದ ಸುರುಳಿಯ ಒಳಗಿನ ಕತೆ. ಹಾಗಾಗಿ ಒಂದು ಬಾರಿ ನೋಡಿ‌ ಅರ್ಥ ಮಾಡಿಕೊಳ್ಳುವ ಸಿನಿಮಾವಲ್ಲ. ನವ್ಯಚಿತ್ರದ ಸುತ್ತ ಅಲುಗಾಡದೇ ನಿಂತ ಫ್ರೇಮಿನಂತೆಯೇ ಅದರೆದುರು ಗಂಟೆಗಟ್ಟಲೆ ನಿಂತು ವಿಮರ್ಶಿಸೀ ವಿಮರ್ಶಿಸಿ ಬುದ್ಧಿಯ ಒಳಗೆ ಇಳಿಸಿಕೊಳ್ಳಬೇಕಾದ ಸಿನಿಮಾ. ಸ್ಥಾಪಿತ ಸೂತ್ರಗಳ ಚೌಕಟ್ಟಿನ ಆಚೆ ನಿಲ್ಲುವ ಚಲನಚಿತ್ರ.

ಚುರುಳಿ ಎಂಬುದೊಂದು ಕಾಲ್ಪನಿಕ ಗ್ರಾಮ, ದಟ್ಟ ಕಾಡಿನ ಒಳಗೆ ತಣ್ಣಗೆ ಉಸಿರಾಡುವ ಕುಗ್ರಾಮ. ಸುತ್ತಲೂ ಹರಿಯುವ ಹೊಳೆಯ ಗಡಿಯಿರುವ ಆ ಗ್ರಾಮಕ್ಕೆ ತನ್ನದೇ ವೈಶಿಷ್ಟ್ಯವಿದೆ. ಆ ಗಡಿಯಾಚೆಗೆ ಸೌಮ್ಯ ಸ್ವಭಾವ ತೋರುವ ಮಂದಿ ಸೇತುವೆ ದಾಟುತ್ತಿದ್ದ ಹಾಗೆಯೇ ಕಟ್ಟಾ ಕೊಳಕು ಬೈಗುಳ ಸುರಿಸುತ್ತ ಅಸಹನೆಯೇ ಮೈವೆತ್ತ ಜೀವಿಗಳಾಗುತ್ತಾರೆ. ಮೈಲಾಂದುಪುರದ ಜಾಯ್ ಎಂಬಾತ ಆ ಊರಲ್ಲಿ ಅಡಗಿದ್ದಾನೆ ಎಂಬ ವರ್ತಮಾನ ಸಿಕ್ಕಿದ್ದರಿಂದ ಇಬ್ಬರು ಪೊಲೀಸರು ಮಾರುವೇಷದಲ್ಲಿ ಆ ಊರಿಗೆ ಬರುವುದು ಕತೆಯ ನೈಜ ಆರಂಭ.

ಅದಕ್ಕೂ ಮೊದಲು ನಿರೂಪಕಿಯ ಹಿನ್ನೆಲೆ ಧ್ವನಿಯಲ್ಲಿ ಬೊಂಬೆಯಾಟದ ರೂಪಕ ತೆರೆಯ ಮೇಲೆ ಬಂದಿರುತ್ತದೆ. ರಕ್ಕಸನನ್ನು ಹಿಡಿಯಲು ಕಾಡಿಗೆ ಹೋಗುವ ನಂಬೂದರಿಯ ಕತೆಯದು. ಬುಟ್ಟಿಯಲ್ಲೊಂದು ಪ್ರಾಣಿಯನ್ನಿಟ್ಟು ಅದನ್ನು ತಲೆಯ‌ ಮೇಲೆ ಹೊತ್ತು ಸಾಗುವ ನಂಬೂದರಿಯನ್ನು ನೋಡಿ ಕಾಡಿನೊಳಗಿನ ಸರ್ಪ-ಜೇಡಗಳು ಪರಸ್ಪರ ಕಣ್ಣುಮಿಟುಕಿಸಿ ನಗುತ್ತವೆ. ರಾಕ್ಷಸನನ್ನು ಹುಡುಕಹೊರಟ ನಂಬೂದರಿಗೆ ತಾನು ತಲೆಯ ಮೇಲೆ ಹೊತ್ತ ಪ್ರಾಣಿ ದಾರಿ ಸೂಚಿಸಲು ಶುರುವಿಡುತ್ತದೆ. ಆಗ ಆತ ಗುರಿಯನ್ನೇ ಮರೆತು ಅದು ತೋರಿದ ಕಡೆಗೆ ಸಾಗುತ್ತಾ ಅಲ್ಲಿಂದ ಮುಂದಕ್ಕೆ ಕಾಡಿನೊಳಗಿನ ಅಲೆಮಾರಿಯಾಗುತ್ತಾನೆ ಎನ್ನುತ್ತದೆ ಆ ದೃಶ್ಯರೂಪಕ.

ಸಿನಿಮಾದ ನೋಡುಗನೂ ಚಿತ್ರವನ್ನು ಆ ದೃಶ್ಯರೂಪಕಕ್ಕೆ ಸಮೀಕರಿಸಿ ನೋಡಬೇಕು. ಮಾರುವೇಷದ ಆ್ಯಂಟನಿ ಹಾಗೂ ಶಾಜೀವನ್ ಚುರುಳಿಗೆ ಬರುವುದು ತಾವು ರಬ್ಬರ್ ತೋಟವೊಂದರಲ್ಲಿ ಗಿಡಕ್ಕೆ ಗುಂಡಿ ತೋಡಲು ಬಂದ ಕಾರ್ಮಿಕರು ಎಂಬ ಸಬೂಬು ಹಿಡಿದು. ಆ ಊರಲ್ಲಿರುವ ಏಕೈಕ ಚಟುವಟಿಕೆಯ ಕೇಂದ್ರ ಒಂದು ಗಡಂಗು. ತೋಟದ ಮಾಲೀಕ ತಂಕನ್ ಊರಲ್ಲಿ ಇಲ್ಲದ ಕಾರಣ ಆ ಸಾರಾಯಿ ಅಂಗಡಿಯ ಒಡೆಯನೇ ಅವರಿಗೆ ಆಶ್ರಯದಾತ. ಅಲ್ಲೇ ಕೆಲಸ ಮಾಡುತ್ತ ಅವರು ತಮ್ಮ ಗುಪ್ತಚರ ಕಾರ್ಯ ಶುರು ಮಾಡಬೇಕು. ಆದರೆ ತಾನು ಬಂದ ಉದ್ದೇಶವನ್ನೇ ಮರೆತು ಆ್ಯಂಟನಿ ಆ ಗಡಂಗಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾನೆ.

ಹೀಗಿರುವಾಗ ಶಾಜೀವನ್ ಆ ಊರಿಗೆ ಮೊದಲೇ ಬಂದಿದ್ದ. ನಿನ್ನನ್ನು ಮೊದಲೇ ಎಲ್ಲೋ ಕಂಡಿದ್ದೇನೆ ಎನ್ನುತ್ತಾ ಅಟ್ಟಾಡಿಸಿ ಕೊಡಲಿಯಲ್ಲಿ ಕೊಚ್ಚಲು ಬರುವ ಅಜ್ಜಿ, ಅವನಿಗೆ ಮಾತ್ರ ರೋಗಿಯ ಜತೆ ಒಳಗೆ ಪ್ರವೇಶ ಕೊಡುವ ನಾಟಿ ವೈದ್ಯೆ – ಇದೊಂದು ಟೈಮ್ ಸ್ಪೈರಲ್ ಎಂದು ಸ್ಥೂಲವಾಗಿಯೇ ಸೂಚಿಸುವ ದೃಶ್ಯಗಳು‌. ಇದೇ ವಿಚಾರವನ್ನು ಸೂಕ್ಷ್ಮವಾಗಿ ಒಂದಷ್ಟು ಸಂಭಾಷಣೆಗಳೂ ತಿಳಿಸುತ್ತವೆ. ಈ ಊರಲ್ಲಿ ಒಬ್ಬರಿಗೇ ಹಲವು ಹೆಸರಿವೆ ಎನ್ನುವುದು, ಬೇರೆ ಹೆಸರಲ್ಲಿಯೂ ಕರೆದಾಗ ಓಗೊಡುವ ಕೆಲವರು, ಶಾಜೀವನ್ ಮನಸ್ಸಲ್ಲಿ‌ ನೆನಪಿನಂತೆ ಹೊಳೆಯುವ ದೃಶ್ಯಗಳು ನಾವು ನೋಡುತ್ತಿರುವುದು ಸಮಯದ ಸುರುಳಿ ಎಂಬುದಕ್ಕೆ ಸಾಕ್ಷಿ.

ಈ ಸಿನಿಮಾವನ್ನು ನಾವೊಂದು ಸೈನ್ಸ್ ಫಿಕ್ಷನ್ ಎಂದೂ ನೋಡಬೇಕು. ಎರಡು ದೃಶ್ಯಗಳಲ್ಲಿ ಬರುವ ಅನ್ಯಗ್ರಹ ಜೀವಿಗಳು ಒಂದೆಡೆ ಶಾಜೀವನ್‌ಗೆ ಭಯ ಹುಟ್ಟಿಸಿದರೆ ಮತ್ತೊಂದೆಡೆ ಅವನಿಗೆ ಬೇಟೆಗೆ ಸಹಾಯ ಮಾಡುತ್ತವೆ. ಕೊನೆಯ ಹಂತದಲ್ಲಿ ಪೊಲೀಸ್ ಹೊಡೆಯುವ ಗುಂಡು ಎದುರಿನವನ ಕಿವಿ ಹರಿಯುತ್ತದೆ. ಆದಾಗ್ಯೂ ಆತ ನಗುತ್ತಾ ಮಾತು ಮುಂದುವರಿಸುವ ಕಾರಣ ಅದು ಅನ್ಯಗ್ರಹ ಜೀವಿಗಳ ಅಧೀನದಲ್ಲಿರುವ ಊರೆಂದೇ ತಿಳಿಯಬೇಕು.

ಕತೆಯ ಇವಿಷ್ಟು ಅಂಶಗಳನ್ನು ಹೆಕ್ಕಿ ಇಲ್ಲಿ ಬರೆದುದರ ಉದ್ದೇಶವಿಷ್ಟೇ. ಕಡೇ ಪಕ್ಷ ಈ ಅಂಶಗಳನ್ನಾದರೂ ಮನಸ್ಸಲ್ಲಿಟ್ಟು ನೋಡದಿದ್ದರೆ ಸಿನಿಮಾ ಅರ್ಥವಾಗದು. ಹಾಗೆಂದು ಇದಿಷ್ಟೇ ಕತೆಯಲ್ಲ‌. ಇದರ ಆಚೆಗೂ ಒರೆಗೆ ಹಚ್ಚಿ ನೋಡಬೇಕಾದ ಹಲವು ಅಂಶಗಳಿವೆ. ಸಮಾರಂಭದ ದಿನ ಮಾತ್ರವೇ ಚರ್ಚ್ ಆಗಿ ಪರಿವರ್ತನೆಯಾಗುವ ಸಾರಾಯಿ ಅಂಗಡಿ ಆ ಹಲವು ಅಂಶಗಳ ಪೈಕಿ ಒಂದು. ಬುಡಕಟ್ಟು ಸಂಸ್ಕೃತಿಯೇ ಇರಬೇಕಾದ ಅಂಥ ಕಾಡಿನ ಒಳಗೆ ಕ್ರೈಸ್ತ ಮತವನ್ನು ಎಳೆದು ತಂದದ್ದು ನಿರ್ಮಾಪಕ ಮತ್ತು ನಿರ್ದೇಶಕನೂ ಆದ ಲಿಜೋ ಜೋಸ್‌ಗೆ ಇದ್ದ ಸಿನಿಮಾದ ಆಚೆಗಿನ ಅನಿವಾರ್ಯತೆ ಎಂದುಕೊಳ್ಳೋಣ ಎಂದೊಮ್ಮೆ ಅನಿಸುತ್ತದೆ. ಆ ಕಾಡಿನ ಒಳಗೂ ಒಂದು ದಿನಕ್ಕೆ ಕಾಲಿಡುವ ಪಾದ್ರಿಗಳ ತಂಡದ ಮೂಲಕ ಧರ್ಮ ಪ್ರಚಾರವೆಂಬುದು ಅಲ್ಲಿಗೂ ಕಾಲಿಟ್ಟಿದೆ ಎಂಬ ಉಪಮೆ ಎಂದೂ ಅಂದುಕೊಳ್ಳಬಹುದು ಎಂದು ಮತ್ತೊಮ್ಮೆ ಭಾಸವಾಗುತ್ತದೆ.

ಇಂಥ ಸಿನಿಮಾಕ್ಕೆ ಅಗತ್ಯವಿರುವ ಛಾಯಾಗ್ರಹಣದಲ್ಲಿ ಸುಂದರ ಫ್ರೇಮುಗಳನ್ನು ಮಧು ನೀಲಕಂಠನ್ ಕಟ್ಟಿಕೊಟ್ಟರೆ ಕತೆಗೆ ಒಪ್ಪುವ, ಕಾಡಿನ ವಾತಾವರಣಕ್ಕೆ ಹೊಂದುವ ಹಿನ್ನೆಲೆ ಸಂಗೀತ ನೀಡಿದ್ದಾರೆ ಶ್ರೀರಾಗ್ ಸಾಜಿ. ಅಂದಹಾಗೆ ಚುರುಳಿ ಗ್ರಾಮವನ್ನು ಕೊಡಗು ಜಿಲ್ಲೆಗೆ ಅಂಟಿಕೊಂಡ ಗ್ರಾಮವೆನ್ನಲಾಗಿದೆ. ರೇಡಿಯೋದಲ್ಲಿ ಬರುವ ಕಾಲು ಸಾಲಿನ ಹಾಡು, ಜಾತ್ರೆಯಲ್ಲಿ ಬರುವ ಮುಕ್ಕಾಲು ಸಾಲಿನ ಹರಿಕಥೆ ಮತ್ತು ಬಸ್ಸಿನಲ್ಲಿ ಆಡುವ ಎರಡು ಸಾಲಿನ ಸಂಭಾಷಣೆಯಲ್ಲಿ ಕನ್ನಡವನ್ನು ಕೇಳಬಹುದು. ಚಿತ್ರಕತೆ ಹೆಣೆಯುವಲ್ಲಿ, ದೃಶ್ಯಗಳನ್ನು ಕಟ್ಟುವಲ್ಲಿ ಸಿನಿಮಾ ತಂಡ ಭಾರಿ ಹೋಂವರ್ಕ್ ಮಾಡಿರುವುದು ಕಾಣುತ್ತದೆ. ಆದರೆ ಹರಿಕಥೆ ದಾಸ ಆಕಾಶ ಎನ್ನಬೇಕಾದಲ್ಲಿ ಮಲ್ಲು ಛಾಯೆಯಲ್ಲಿ ಆಗಾಷ ಎನ್ನುವಾಗ ಉಳಿದೆಲ್ಲಾ ಹೋಂವರ್ಕ್ ಚುರುಳಿಯ ಸುತ್ತ ಹರಿವ ಹೊಳೆಯಲ್ಲಿ ತೊಳೆದುಹೋಯಿತೋ ಎಂಬ ಅನುಮಾನ ಕಾಡುವುದೂ ಸುಳ್ಳಲ್ಲ‌.

ಕೊನೆಯಲ್ಲಿ ಸಿಕ್ಕಿಬೀಳುವ ಜಾಯ್ ಜೀಪಲ್ಲಿ ಕರೆದೊಯ್ಯುವಾಗ ಕತೆ ಹೇಳುತ್ತಾನೆ. ಈ ಹಿಂದೆ ಪೊಲೀಸರು ಅವನನ್ನು ಹುಡುಕಿಬಂದ ಕತೆ. ಆಗ ಜಾಯ್ ಶಾಜೀವನ್ ಜಾಗಕ್ಕೆ ಬರುವುದು ಈ ಹಿಂದಿನ ಟೈಮ್ ಸ್ಪೈರಲ್‌. ವನ್ಯಜೀವಿ ಬೇಟೆ, ಕೊಲೆ ಮತ್ತು ಅಪ್ರಾಪ್ತನ ಲೈಂಗಿಕ ಶೋಷಣೆ – ಈ ಮೂರೂ ಕಳ್ಳ ಜಾಯ್ ಮೇಲಿನ ಆರೋಪಗಳು. ಇಷ್ಟೂ ಅಪರಾಧಗಳನ್ನು ಪ್ರಸಕ್ತ ಸ್ಪೈರಲ್‌ನಲ್ಲಿ ಶಾಜೀವನ್ ಮಾಡಿದ್ದಾನೆ. ಇದೊಂದು ಕಳ್ಳ ಪೊಲೀಸ್ ಆಟ, ಈ ಸ್ಪೈರಲ್‌ನಲ್ಲಿ ಇವ ಕಳ್ಳನಾದರೆ ಮತ್ತೊಂದರಲ್ಲಿ ಅವ ಕಳ್ಳ, ಇವ ಪೊಲೀಸ್.

ಸೋನಿ ಲೈವ್‌ನಲ್ಲಿ ಬಿತ್ತರವಾಗುತ್ತಿರುವ ‘ಚುರುಳಿ’ ಮನರಂಜನೆಗಾಗಿ ನೋಡಬೇಕಾದ ಸಿನಿಮಾವಲ್ಲ. ವಿಮರ್ಶೆ, ರಸಾಸ್ವಾದನೆ, ಕಲಾರಾಧನೆ, ಸಿನಿಮಾದ ವಿದ್ಯಾರ್ಜನೆ ಹೀಗೆ ಉಳಿದ ಅಷ್ಟೂ ಕಾರಣಕ್ಕೆ ನೋಡಬಹುದಾದ ಸಿನಿಮಾ. ಹೆಸರಿನ ಹಾಗೆಯೇ ಸುರುಳಿ ಸುತ್ತಿ ಮತ್ತೆ ಮತ್ತೆ ನೋಡಬೇಕಾಗುವ ಅಪಾಯವಿದೆ‌ ಎಂಬುದು ಶಾಸನವಿಧಿಸಿದ ಎಚ್ಚರಿಕೆ.

ಸಿನಿಮಾ : ಚುರುಳಿ | ಕತೆ : ವಿನಯ್ ಥಾಮಸ್ | ನಿರ್ದೇಶಕ: ಲಿಜೋ ಜೋಸ್ | ತಾರಾಗಣ: ವಿನಯ್ ಫೋ಼ರ್ಟ್, ಚೆಂಬನ್ ವಿನೋದ್ ಜೋಸ್, ಜಾಫರ್ ಇಡುಕ್ಕಿ, ಜೋಜು ಜಾರ್ಜ್, ಸೌಬಿನ್ ಶಾಹಿರ್

LEAVE A REPLY

Connect with

Please enter your comment!
Please enter your name here