ತಾಯಿಯ ಅಮೂಲ್ಯ ಆಸ್ತಿಯ ಬಗ್ಗೆ ಕುಟುಂಬದ ಜಗಳ ಮತ್ತು ಪೋಲೀಸ್ ಜೀವನದಲ್ಲಿ ನಡೆದ ಘಟನೆ ಹೀಗೆ ಅನೇಕ ಅಂಶಗಳನ್ನು ‘ತಂಡಟ್ಟಿ’. ಸಂಬಂಧಗಳ ನಿಜರೂಪವನ್ನು ತೆರೆದಿಡುತ್ತಾ ಹೋಗುತ್ತದೆ ಸಿನಿಮಾ. Amazon Primeನಲ್ಲಿ ಸ್ಟ್ರೀಮ್‌ ಆಗುತ್ತಿದೆ ‘ತಂಡಟ್ಟಿ’.

ರಾಮ್ ಸಂಗಯ್ಯ ಅವರ ಚೊಚ್ಚಲ ನಿರ್ದೇಶನದ ತಂಡಟ್ಟಿ ಗ್ರಾಮೀಣ ಕಥಾಹಂದರದ ತಮಿಳು ಸಿನಿಮಾ. ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಅಪ್ಪಟ ಹಳ್ಳಿಯ ಈ ಚಿತ್ರ ಮನುಷ್ಯನ ಭಾವನೆಗಳು, ದುರಾಸೆ ಮತ್ತು ಸಂಬಂಧಗಳ ನಡುವಿನ ಪ್ರೀತಿ, ನಂಬಿಕೆಯ ಕತೆ ಹೇಳುತ್ತದೆ. ದಕ್ಷಿಣ ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಈ ಕತೆಯಲ್ಲಿ ನಮಗೆ ಮೊದಲು ಪರಿಚಯವಾಗುವವರೇ ವೀರಸುಬ್ರಮಣ್ಯಂ (ಪಶುಪತಿ) ಎಂಬ ಪೋಲೀಸ್. ಇವರ ನಿವೃತ್ತಿಗೆ ಕೇವಲ ಹತ್ತು ದಿನಗಳು ಉಳಿದಿವೆ. ಗಟ್ಟಿಗ, ಅಷ್ಟೇ ಅಲ್ಲ ತನ್ನ ಮೇಲಧಿಕಾರಿಯ ಆದೇಶಗಳನ್ನು ಉಲ್ಲಂಘಿಸಿ, ತನ್ನ ಮನಸ್ಸಿಗೆ ಯಾವುದು ಸರಿ ಎಂದು ಅನಿಸುತ್ತದೆಯೋ ಅದರಂತೆ ಮುಂದೆ ಹೆಜ್ಜೆ ಇಡುವ ಧೈರ್ಯಶಾಲಿ ಈತ. ಹೀಗೆ ಎಲ್ಲದಕ್ಕೂ ಮುಂದೆ ನಿಂತು ಮುನ್ನುಗ್ಗುವ ಪ್ರವೃತ್ತಿಯಿಂದಾಗಿ ಕೆಲವೊಂದು ಪ್ರಕರಣಗಳು ಆತನಿಗೆ ಕಂಟಕವಾಗಿ ಪರಿಣಮಿಸಿವೆ. ಇನ್ನೇನು ನಿವೃತ್ತಿ ಹತ್ತಿರಬಂತು, ಈ ಹೊತ್ತಲ್ಲೇ ಅವನು ಮತ್ತೊಂದು ಪ್ರಕರಣ ಕೈಗೆತ್ತಿಕೊಳ್ಳಲು ಮುಂದಾಗುತ್ತಾರೆ. ಅದೇನು ಅಂತಿಂಥ ಪ್ರಕರಣವಲ್ಲ. ಈ ಪ್ರಕರಣ ನಡೆದಿರುವ ಊರಿಗೆ ಹೋಗಲು ಯಾವ ಪೊಲೀಸೂ ಒಪ್ಪಲ್ಲ. ಅಂಥದರಲ್ಲಿ ವೀರಸುಬ್ರಮಣ್ಯಂ ಆ ಊರಿಗೆ ಹೋಗಿ ಪ್ರಕರಣದ ತನಿಖೆ ನಡೆಸಲು ಮುಂದಾಗುತ್ತಾರೆ.

ಪೊಲೀಸ್ ಠಾಣೆಗೆ ಅಳುತ್ತಾ ಬರುವ ಹದಿಹರೆಯದ ಹುಡುಗ ಸೆಲ್ವರಾಜ್, ತನ್ನ ಅಜ್ಜಿ ಕಾಣೆಯಾಗಿದ್ದಾರೆ ಎಂದು ಕಣ್ಣೀರಿಡುತ್ತಾನೆ. ಆ ಬಾಲಕ ಕಾಣೆಯಾದ ತನ್ನ ಅಜ್ಜಿ ತಂಗಪೊಣ್ಣು (ರೋಹಿಣಿ) ಬಗ್ಗೆ ದೂರು ನೀಡಲು ಬಯಸುತ್ತಾನೆ. ಆತ ಅಲ್ಲಿನ ಕುಖ್ಯಾತ ಗ್ರಾಮ ಕಿದರಿಪಟ್ಟಿಯಿಂದ ಬಂದಿರುವ ಕಾರಣದಿಂದ ಪೊಲೀಸರು ಅಲ್ಲಿಗೆ ಹೋಗಲು ನಿರಾಕರಿಸುತ್ತಾರೆ. ಈ ಹಿಂದೆ ಅಲ್ಲಿಗೆ ಹೋಗಿದ್ದ ಪೊಲೀಸರಿಗೆ ಊರವರು ಥಳಿಸಿ ಓಡಿಸಿದ್ದರು. ಹಾಗಾಗಿ ಯಾವುದೇ ಪೊಲೀಸ್ ಕೂಡಾ ಆ ಊರಿಗೆ ಹೋಗಲು ಮುಂದಾಗುವುದಿಲ್ಲ. ಇಂತಿರುವಾಗ ವಿಷಯ ವಿಚಾರಿಸಿದ ವೀರಸುಬ್ರಮಣ್ಯಂ ಹತ್ತಿರದ ಹಳ್ಳಿಯಲ್ಲಿ ಕಾಣೆಯಾಗಿರುವ ಅಜ್ಜಿ, ಕಳೆದುಹೋದ ತಂಡಟ್ಟಿ (ದೊಡ್ಡ ಕಿವಿಯೋಲೆ) ಪ್ರಕರಣವನ್ನು ಹೇಗೆ ಪರಿಹರಿಸುತ್ತಾರೆ ಎಂಬಲ್ಲಿಂದ ಸಿನಿಮಾ ಶುರುವಾಗುತ್ತದೆ. ಮೊದಲ ಹದಿನೈದು ನಿಮಿಷಗಳಾದ ನಂತರ ಸಿನಿಮಾದ ನಿಜವಾದ ಕತೆ ಆರಂಭ. ಇಲ್ಲಿ ಒಂದೊಂದೇ ಪಾತ್ರಗಳನ್ನು ನಮಗೆ ಪರಿಚಯಿಸುತ್ತಾ, ಅವರ ಸ್ವಭಾವ ಗುಣಗಳ ಅನಾವರಣವಾಗುತ್ತದೆ. ವೇಗವಾಗಿ ಸಾಗುವ ಕತೆ ಅಲ್ಲಲ್ಲಿ ನಗುವಿನ ಕಚಗುಳಿ ಇಡುತ್ತದೆ.

ತಂಗಪೊಣ್ಣುಗೆ ಮೂವರು ಕುತಂತ್ರಿ ಹೆಣ್ಣು ಮಕ್ಕಳಿದ್ದಾರೆ. ಒಬ್ಬ ಕುಡುಕ ಮಗ ಶೋಪಾಂಡಿ (ವಿವೇಕ್ ಪ್ರಸನ್ನ), ಮತ್ತು ವಿಧವೆ ಸೊಸೆಯೂ (ಸೆಲ್ವರಾಜ್ ಅವರ ತಾಯಿ) ಈ ಕುಟುಂಬದಲ್ಲಿದ್ದಾರೆ. ಅವರ ಗುಣಲಕ್ಷಣಗಳು ಮತ್ತು ಅವರ ಪರಸ್ಪರ ಸಂಬಂಧಗಳನ್ನು ವ್ಯಾಖ್ಯಾನಿಸುವ ಸನ್ನಿವೇಶಗಳು ಹಾಸ್ಯದಿಂದ ಕೂಡಿದೆ. ಇವರೆಲ್ಲರೂ ಕಣ್ಣು ನೆಟ್ಟಿರುವುದು ತಂಗಪೊಣ್ಣು ಆಸ್ತಿ ಮೇಲೆ. ಮಕ್ಕಳು ಮಾಡುವ ಒಂದೊಂದು ಕಿತಾಪತಿಗಳಿಂದಾಗಿ ಸ್ವಲ್ಪ ಸ್ವಲ್ಪವೇ ಆಸ್ತಿ ಕರಗುತ್ತಾ ಹೋಗುತ್ತದೆ. ಆದರೂ ಮಕ್ಕಳ ದುರಾಸೆ ನಿಲ್ಲುವುದಿಲ್ಲ. ಎಷ್ಟೇ ಕಟ್ಟಿಕೊಂಡು ಹೋದರೂ, ಕಿತ್ತುಕೊಂಡು ಹೋದರೂ ಅಮ್ಮನ ಕಿವಿಯೋಲೆ ಅಂದರೆ ತಂಡಟ್ಟಿ ಮೇಲೆಯೇ ಎಲ್ಲರ ಕಣ್ಣು. ಇದನ್ನರಿತ ಮೊಮ್ಮಗ ಅದನ್ನು ಬಿಚ್ಚಿ ಅಡಗಿಸಿಡಲು ಅಜ್ಜಿಗೆ ಹೇಳುತ್ತಾನೆ. ಆದರೆ ಅಜ್ಜಿ ಒಪ್ಪುವುದಿಲ್ಲ. ಆಕೆಯ ಪ್ರಾಣವೇ ತಂಡಟ್ಟಿಯಲ್ಲಿದೆ.

ಆದರೆ ಇಲ್ಲಿ ಆ ತಂಡಟ್ಟಿಗಾಗಿ ಜಗಳಗಳಾಗುತ್ತವೆ. ಅಲ್ಲಿ ಹಾಸ್ಯಕ್ಕೂ ಜಾಗವುಂಟು. ದೀಪಾ ಶಂಕರ್ ಮತ್ತು ವಿವೇಕ್ ಪ್ರಸನ್ನ ಅವರಂತಹ ನಟರು ತಮ್ಮ ಸಹಜ ಅಭಿನಯದಿಂದ ಮನಗೆಲ್ಲುತ್ತಾರೆ. ವಯಸ್ಸಾದ ಮಹಿಳೆಯರ ಹಾಡುಗಾರಿಕೆ, ಆಡುಭಾಷೆ, ಉಡುಗೆ-ತೊಡುಗೆಗಳು ಹಳ್ಳಿಯ ಚಂದವನ್ನು ಕಟ್ಟಿಕೊಡುತ್ತವೆ. ಈ ಹೊತ್ತಲ್ಲೇ ಚಿತ್ರ ಹಾಸ್ಯದಿಂದ ಮೆಲೋಡ್ರಾಮದತ್ತ ಹೊರಳುತ್ತದೆ. ತಂಡಟ್ಟಿ ತೊಟ್ಟ ತಂಗಪೊಣ್ಣು ಕಾಣೆಯಾಗಿದ್ದಾರೆ. ಅಪರಾಧಿಯನ್ನು ಕಂಡುಹಿಡಿಯುವುದಕ್ಕಾಗಿ ಪೊಲೀಸ್ ಬಂದಿದ್ದಾರೆ. ಆದರೆ ತನಿಖೆ ವೇಳೆ ಕೆಲವು ಘಟನೆಗಳು ಅಲ್ಲೇ ಗಿರಕಿ ಹೊಡೆಯುವಂತಿರುತ್ತದೆ.

ತಂಡಟ್ಟಿಯ ಹೈಲೈಟ್ ಎಂದರೆ ಅದರ ಫ್ಲ್ಯಾಷ್‌ಬ್ಯಾಕ್. ತಂಗಪೊಣ್ಣುನ ಯೌವನದ ಕತೆಯನ್ನು ಇದು ತೋರಿಸುತ್ತದೆ. ತಂಡಟ್ಟಿ, ಆಕೆಗೆ ಆಕೆಯ ಗಂಡ ಕೊಟ್ಟ ಅಮೂಲ್ಯ ಉಡುಗೊರೆ. ಅದರ ಹಿಂದೆ ಇರುವುದು ಭಾವನಾತ್ಮಕ ನಂಟು. ಪ್ರೀತಿ ಮಾಡಿ ಓಡಿಹೋದ ಹೆಣ್ಣಿನ ಮೇಲೆ ಕುಟುಂಬದವರ ಕೋಪ, ಅದು ಆಕೆಯಿಂದ ಎಲ್ಲವನ್ನೂ ಕಿತ್ತುಕೊಳ್ಳುತ್ತದೆ. ಉಳಿದದ್ದು ಗಂಡ ಕೊಟ್ಟ ತಂಡಟ್ಟಿ ಮಾತ್ರ.

ತಮ್ಮ ತಾಯಿಯ ಅಮೂಲ್ಯ ಆಸ್ತಿಯ ಬಗ್ಗೆ ಕುಟುಂಬದ ಜಗಳ ಮತ್ತು ಪೋಲೀಸ್ ಜೀವನದಲ್ಲಿ ನಡೆದ ಘಟನೆ ಹೀಗೆ ಅನೇಕ ಅಂಶಗಳನ್ನು ತಂಡಟ್ಟಿ ಹೆಣೆಯಲು ಪ್ರಯತ್ನಿಸಿದೆ. ಇಲ್ಲಿ ಕತೆ ವೇಗವಾಗಿ ಸಾಗುತ್ತಿದ್ದರೂ ಕೆಲವು ಮಾತುಗಳು ಮನಸ್ಸಿಗೆ ನಾಟುತ್ತದೆ, ತಂಡಟ್ಟಿ ಏನಾಯ್ತು? ತಂಗಪೊಣ್ಣು ಮರಳಿ ಬರುತ್ತಾರಾ? ಎಂಬ ಕುತೂಹಲವನ್ನು ಹುಟ್ಟಿಸುವ ಸಿನಿಮಾ ಹಲವು ಸಂಬಂಧಗಳ ನಿಜರೂಪವನ್ನು ತೆರೆದಿಡುತ್ತಾ ಹೋಗುತ್ತದೆ.

ಪಶುಪತಿ ಅವರ ಅಭಿನಯಕ್ಕೆ ಚಪ್ಪಾಳೆ ತಟ್ಟಲೇಬೇಕು. ಪೋಷಕ ಪಾತ್ರವರ್ಗದಲ್ಲಿ ರೋಹಿಣಿ ನಟನೆ ಹೈಲೈಟ್ ಆಗಿದ್ದು, ಇದು ದೊಡ್ಡ ಪ್ಲಸ್ ಪಾಯಿಂಟ್. ದೀಪಾ ಮತ್ತು ವಿವೇಕ್ ಪ್ರಸನ್ನ ಅವರ ನಟನೆ ಕೂಡ ಮೆಚ್ಚುವಂಥದ್ದು. ಸುಂದರಮೂರ್ತಿ ಕೆ ಎಸ್ ಅವರ ಸಂಗೀತ ನಿರ್ದೇಶನದಲ್ಲಿ ಹಿನ್ನೆಲೆ ಸಂಗೀತವೂ ಪವರ್ ಫುಲ್ ಆಗಿದೆ. ಮಹೇಶ್ ಮುತ್ತುಸ್ವಾಮಿ ಅವರ ಛಾಯಾಗ್ರಹಣವು ಗ್ರಾಮೀಣ ನೆಲದ ಸೊಗಡನ್ನು ಸೆರೆಹಿಡಿದಿದೆ. ಒಟ್ಟಿನಲ್ಲಿ ತಂಡಟ್ಟಿ ಬದುಕಿನ ಅತ್ಯಂತ ಅಮೂಲ್ಯವಾದ ಉಡುಗೊರೆ ಮತ್ತು ಮಾನವೀಯ ಸಂಬಂಧಗಳನ್ನು ಪರಿಣಾಮಕಾರಿಯಾಗಿ ತೋರಿಸಿದೆ.

Previous articleಶೂಟಿಂಗ್‌ ಮುಗಿಸಿದ ‘ಎಲ್ಲೋ ಜೋಗಪ್ಪ ನಿನ್ನರಮನೆ’ | ಹಯವದನ ನಿರ್ದೇಶನದ ಸಿನಿಮಾ
Next articleಮೇರು ನಟ, ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಜನ್ಮಶತಮಾನೋತ್ಸವ

LEAVE A REPLY

Connect with

Please enter your comment!
Please enter your name here