ಮೊನ್ನೆ ಶನಿವಾರ ನಡೆದ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಪ್ರಶಸ್ತಿ ಸಮಾರಂಭ ಖುಷಿ, ಅಚ್ಚರಿ, ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಯ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್‌, ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರು, ಕಾರ್ಯಕ್ರಮದ ಪ್ರಾಯೋಜಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

“ಇದು ನನಗೆ ಸಂದ ದೊಡ್ಡ ಗೌರವ. ತಮ್ಮ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ ‘ಸಲಗ’ ಚಿತ್ರದ ನಟ, ನಿರ್ದೇಶಕ ದುನಿಯಾ ವಿಜಯ್‌ ಅವರನ್ನು ಸ್ಮರಿಸುತ್ತೇನೆ. ಈ ಪ್ರಶಸ್ತಿಯನ್ನು ನನ್ನ ಜನರಿಗೆ ಅರ್ಪಿಸುತ್ತೇನೆ” ಎಂದು ಭಾವುಕರಾದರು ಗಾಯಕಿ ಗಿರಿಜಾ ಸಿದ್ದಿ. ‘ಸಲಗ’ ಚಿತ್ರಕ್ಕಾಗಿ ತಾವು ಹಾಡಿದ ‘ಟಿನಿಂಗ ಮಿನಿಂಗ’ ಹಾಡಿಗೆ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಪ್ರಶಸ್ತಿ ಪಡೆದು ಅವರು ಮಾತನಾಡಿದರು. ಸಿದ್ದಿ ಜನಾಂಗದ ಗಾಯನ ಪ್ರತಿಭೆ ಗಿರಿಜಾ ಅವರು ಈ ಹಾಡಿನೊಂದಿಗೆ ಕನ್ನಡದ ಜನರಿಗೆ ಚಿರಪರಿಚಿತರಾಗಿದ್ದಾರೆ. ಸಿನಿಮಾದಲ್ಲಿ ಹಾಡಲು ಅವರಿಗೆ ಅವಕಾಶಗಳು ಸಿಗುತ್ತಿವೆ. ಇದಾಗಿ ಸ್ವಲ್ಪ ಹೊತ್ತಿನ ನಂತರ ವಿಜೇತರೊಬ್ಬರಿಗೆ ಪ್ರಶಸ್ತಿ ಕೊಡಲು ವೇದಿಕೆಗೆ ಬಂದ ನಿರ್ಮಾಪಕ ಕೆ.ಮಂಜು ಅವರು, ಗಿರಿಜಾ ಸಿದ್ದಿ ಅವರ ಆಯ್ಕೆಯನ್ನು ಮೆಚ್ಚಿ ಮಾತನಾಡಿದರು.

ಮನೆಯವರು ನೀಡಿದ ಪ್ರಶಸ್ತಿ!
ನಟ ಅರ್ಜುನ್‌ ಜನ್ಯ ಅವರು ‘ರಾಬರ್ಟ್‌’ ಚಿತ್ರದ ಉತ್ತಮ ಸಂಗೀತಕ್ಕಾಗಿ ಕ್ರಿಟಿಕ್ಸ್‌ ಅಕಾಡೆಮಿ ಪ್ರಶಸ್ತಿ ಪಡೆದರು. ನಿರ್ಮಾಪಕರಾದ ಕೆ.ಮಂಜು ಮತ್ತು ರಮೇಶ್‌ ರೆಡ್ಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಅವರು, “ಸಂಗೀತಕ್ಕಾಗಿ ನನಗೆ ಹತ್ತಾರು ಪ್ರಶಸ್ತಿಗಳು ಸಂದಿವೆ. ಆದರೆ ಈ ಪ್ರಶಸ್ತಿ ಭಿನ್ನ. ಇದು ನನಗೆ ಮನೆಯವರೇ ನೀಡಿದ ಪ್ರಶಸ್ತಿಯಂತೆ. ನಮ್ಮ ಸರಿ, ತಪ್ಪುಗಳನ್ನು ಗಮನಿಸುತ್ತಾ ನಮ್ಮನ್ನು ಎಚ್ಚರಿಸುವವರು ನೀಡುವ ಈ ಪ್ರಶಸ್ತಿಗೆ ವಿಶೇಷ ಸ್ಥಾನವಿದೆ” ಎಂದರು.

ಕ್ರಿಟಿಕ್ಸ್‌ ಅಕಾಡೆಮಿಗೆ ಅಭಿನಂದನೆ
ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿಯ ಈ ಪ್ರಶಸ್ತಿ ಸಮಾರಂಭಕ್ಕೆ ಒತ್ತಾಸೆಯಾಗಿ ನಿಂತಿರುವವರು ಪ್ರಾಯೋಜಕರು. ಈ ಬಾರಿ ‘ಮಾಧ್ಯಮ ಅನೇಕ’ ಮೀಡಿಯಾ ಹೌಸ್‌ ಸಂಸ್ಥೆ ಕ್ರಿಟಿಕ್ಸ್‌ ಅಕಾಡೆಮಿಯೊಂದಿಗೆ ಕೈಜೋಡಿಸಿತ್ತು. ಗುಣಮಟ್ಟದ ವೆಬ್‌ ಕಂಟೆಂಟ್‌ನೊಂದಿಗೆ ಕನ್ನಡಿಗರಿಗೆ ಪರಿಚಿತವಾಗಿರುವ ‘ಮಾಧ್ಯಮ ಅನೇಕ’ ಸಂಸ್ಥೆಯಿಂದ ಕಳೆದ ತಿಂಗಳು Aneka Plus ಓಟಿಟಿ ಲಾಂಚ್‌ ಆಗಿದೆ. ಕನ್ನಡದ ಒರಿಜಿನಲ್‌ ವೆಬ್‌ ಸರಣಿ, ಟಾಕ್‌ ಶೋ, ಸಾಕ್ಷ್ಯಚಿತ್ರ ಸೇರಿದಂತೆ ಅಪರೂಪದ ಕಂಟೆಟ್‌ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ”ಮಾಧ್ಯಮ ಅನೇಕ’ ಸಂಸ್ಥೆಯ ಮುಖ್ಯಸ್ಥರಾದ ಅರವಿಂದ ಮೋತಿ ಅವರು ಸಮಾರಂಭದಲ್ಲಿ ಮಾತನಾಡಿ, “ಯುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಿಟಿಕ್ಸ್‌ ಅಕಾಡೆಮಿಯ ಈ ಪ್ರಯತ್ನ ಶ್ಲಾಘನೀಯ. ಸಮಾರಂಭ ಅಚ್ಚುಕಟ್ಟಾಗಿ ಆಯೋಜನೆಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯುವಂತಾಗಲಿ. ನಮ್ಮ ಸಹಕಾರ ಇರುತ್ತದೆ” ಎಂದು ಹಾರೈಸಿದರು.

GGVV ಗೆ ನಾಲ್ಕು ಪ್ರಶಸ್ತಿ
‘ಗರುಡ ಗಮನ ವೃಷಭ ವಾಹನ’ ಈ ಬಾರಿ ನಾಲ್ಕು ಕ್ರಿಟಿಕ್ಸ್‌ ಅವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿತು. ಅತ್ಯುತ್ತಮ ನಟ, ನಿರ್ದೇಶನ ಮತ್ತು ಚಿತ್ರಕಥೆಗೆ ರಾಜ್‌ ಬಿ. ಶೆಟ್ಟಿ ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರೆ, ಸಂಕಲನ ವಿಭಾಗದ ಪ್ರಶಸ್ತಿಯನ್ನೂ ಈ ಸಿನಿಮಾ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪ್ರಶಸ್ತಿಗಾಗಿ ಮೂರು ಬಾರಿ ವೇದಿಕೆಗೆ ಬಂದರು ರಾಜ್‌. “ಚಿತ್ರಕಥೆ ಮತ್ತು ಸಂಕಲನಕ್ಕಾಗಿ ನಮ್ಮ ಚಿತ್ರವನ್ನು ಆಯ್ಕೆ ಮಾಡಿರುವುದು ನನಗೆ ಹೆಚ್ಚು ಖುಷಿ ತಂದಿದೆ. ನಮ್ಮಲ್ಲಿ ಹೀರೋ ಅಂದರೆ ಸುಂದರವಾಗಿ, ಸದೃಢ ಮೈಕಟ್ಟಿನವರಾಗಿರಬೇಕು ಎನ್ನುವ ಒಂದು ನಿಯಮವಿದೆ. ಒಮ್ಮೆ ನನಗೊಬ್ಬರು, ‘ಇವನು ಲಾರಿ ಕ್ಲೀನರ್‌ನವನಿದ್ದ ಹಾಗೆ ಇದ್ದಾನೆ’ ಎಂದಿದ್ದರು. ಲಾರಿ ಕ್ಲೀನರ್‌ ಪಾತ್ರ ಮಾಡುವವನು ಲಾರಿ ಕ್ಲೀನರ್‌ನಂತೆಯೇ ಇರಬೇಕು. ಸಿದ್ಧ ಫಾರ್ಮುಲಾಗಳನ್ನು ಮೀರಿದಾಗ ನಾವು ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯ” ಎಂದ ರಾಜ್‌ ಶೆಟ್ಟಿ ಪ್ರಶಸ್ತಿಗಳಿಗೆ ತಮ್ಮನ್ನು ಪರಿಗಣಿಸಿದ ಕ್ರಿಟಿಕ್ಸ್‌ ಅಕಾಡೆಮಿಗೆ ಧನ್ಯವಾದ ಅರ್ಪಿಸಿದರು.

‘ಪುಕ್ಸಟ್ಟೆ ಲೈಫು’ ರೂಪುಗೊಳ್ಳಲು ವಿಜಿ ಕಾರಣ
ಸಂಚಾರಿ ವಿಜಯ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ಪುಕ್ಸಟ್ಟೆ ಲೈಫು’ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. ಚಿತ್ರದ ನಿರ್ಮಾಪಕ ನಾಗರಾಜ ಸೋಮಯಾಜಿ ಮತ್ತು ನಿರ್ದೇಶಕ ಅರವಿಂದ ಕುಪ್ಳೀಕರ್‌ ಅವರಿಗೆ ‘ಮಾಧ್ಯಮ ಅನೇಕ’ ಮುಖ್ಯಸ್ಥರಾದ ಅರವಿಂದ ಮೋತಿ ಮತ್ತು ಕ್ರಿಟಿಕ್ಸ್‌ ಅಕಾಡೆಮಿಯ ಶ್ಯಾಮ್‌ ಪ್ರಸಾದ್‌ ಟ್ರೋಫಿ ಹಸ್ತಾಂತರಿಸಿದರು. ಅಗಲಿದ ನಟ, ತಮ್ಮ ಆತ್ಮೀಯ ಸ್ನೇಹಿತ ಸಂಚಾರಿ ವಿಜಯ್‌ ಅವರನ್ನು ಸ್ಮರಿಸಿದ ನಿರ್ದೇಶಕ ಅರವಿಂದ ಕುಪ್ಳೀಕರ್‌, “ಈ ಸಿನಿಮಾ ರೂಪುಗೊಳ್ಳಲು ಕಾರಣರಾಗಿದ್ದು ಸಂಚಾರಿ ವಿಜಯ್‌. ಈ ಕತೆ ಅವನಿಗೆ ತುಂಬಾ ಇಷ್ಟವಾಗಿತ್ತು. ಈ ಕತೆಯನ್ನು ತಂದು ನಮ್ಮೆಲ್ಲರನ್ನೂ ಒಗ್ಗೂಡಿಸಿ ಒಂದೊಳ್ಳೆ ಸಿನಿಮಾ ಆಗಲು ಕಾರಣನಾದ. ಅವನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ” ಎಂದರು.

ಚೊಚ್ಚಲ ನಿರ್ದೇಶನದ ಚಿತ್ರ
ಈ ಬಾರಿ ಚಂದನವನ ಕ್ರಿಟಿಕ್ಸ್‌ ಅಕಾಡೆಮಿ ಚೊಚ್ಚಲ ನಿರ್ದೇಶನಕ್ಕಾಗಿ ಪ್ರಶಸ್ತಿಯೊಂದನ್ನು ಕೊಟ್ಟದ್ದು ವಿಶೇಷ. ‘ನೆನಪಿರಲಿ’ ಪ್ರೇಮ್‌ ನಟಿಸಿದ್ದ ‘ಪ್ರೇಮಂ ಪೂಜ್ಯಂ’ ಚಿತ್ರಕ್ಕಾಗಿ ನಿರ್ದೇಶಕ ಡಾ.ರಾಘವೇಂದ್ರ ಅವರು ಈ ಪ್ರಶಸ್ತಿ ಪಡೆದರು. ವೃತ್ತಿಯಲ್ಲಿ ವೈದ್ಯರಾದ ರಾಘವೇಂದ್ರ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ವೈದ್ಯಲೋಕಕ್ಕೆ ಸಂಬಂಧಿಸಿದ ಕತೆಯನ್ನೇ ನಿರೂಪಿಸಿ ಗಮನ ಸೆಳೆದಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಅಕ್ಷಿ’ ಸಿನಿಮಾದ ಉತ್ತಮ ನಟನೆಗಾಗಿ ಮಾಸ್ಟರ್‌ ಮಿಥುನ್‌, ಕ್ರಿಟಿಕ್ಸ್‌ ಅಕಾಡೆಮಿಯ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದರು. ನಟಿ ಹರ್ಷಿಕಾ ಪೂಣಚ್ಚ ಅವರು ಮಿಥುನ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಗಾನವಿ ಲಕ್ಷ್ಮಣ್‌ ಮತ್ತು ಗೀತರಚನೆಗಾಗಿ ರಾಘವೇಂದ್ರ ಕಾಮತ್‌ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡ ಯೋಗರಾಜ್‌ ಭಟ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಅವರು ವೀಡಿಯೋ ಮೆಸೇಜ್‌ ಮೂಲಕ ಕ್ರಿಟಿಕ್ಸ್‌ ಅಕಾಡೆಮಿಗೆ ಅಭಿನಂದನೆ ಸಲ್ಲಿಸಿದರು.

LEAVE A REPLY

Connect with

Please enter your comment!
Please enter your name here