ಪುನೀತ್ ರಾಜಕುಮಾರ್‌ ಕನ್ನಡ ನಾಡು ಕಂಡ ಅಪರೂಪದ, ಆಪ್ತ ವ್ಯಕ್ತಿತ್ವ. ಸಿನಿಮಾದಲ್ಲಿ ನಟ, ಗಾಯಕ, ನಿರೂಪಕ, ನಿರ್ಮಾಪಕನಾಗಿ ಒಂದು ತೂಕವಾದರೆ, ಸಾರ್ವಜನಿಕ ಬದುಕಿನಲ್ಲಿ ‘ನಮ್ಮನೆ ಹುಡ್ಗ’ ಎನ್ನುವಂತಹ ಆತ್ಮೀಯತೆ ಮೂಡಿಸಿದ್ದವರು.

ಚಿಕ್ಕಂದಿನಿಂದಲೂ ಪುನೀತ್‌ ಕನ್ನಡಿಗರ ಕಣ್ಮುಂದೆ ಬೆಳೆದ ಹುಡುಗ. ವರನಟ ರಾಜಕುಮಾರ್ ಕಿರಿಮಗ ಎನ್ನುವ ಕಾರಣಕ್ಕೂ ಎಲ್ಲರೂ ಆಗ ‘ಮಾಸ್ಟರ್‌ ಲೋಹಿತ್‌’ನನ್ನು ಪ್ರೀತಿಯಿಂದ ನೋಡಿದ್ದರು. ಬಹುಶಃ ತಂದೆಯ ಸರಳತೆ, ವಿನಯವಂತಿಕೆಯ ಗುಣವೂ ರಕ್ತದಲ್ಲಿತ್ತೇನೋ? ಹಾಗಾಗಿ ಬಾಲನಟನಾಗಿಯೂ ‘ನಮ್ಮನೆ ಹುಡ್ಗ’ ಎನ್ನುವ ಹಾಗೆ ಕನ್ನಡಿಗರು ಅವರನ್ನು ಇಷ್ಟಪಟ್ಟಿದ್ದರು. ಬಾಲನಟನಾಗಿ ಪಾತ್ರಗಳಲ್ಲಿ ಮುದ್ದಾದ ಮಾತು, ಹಾಡು, ಮುಗ್ಧ ನೋಟ.. ಹೀಗೆ ಮುಂದೆ ರಾಜ್‌ ಪುತ್ರನಾಗಿ ಮಾತ್ರವಲ್ಲದೆ ಸ್ವಂತಿಕೆಯಿಂದಲೂ ‘ಮಾಸ್ಟರ್ ಲೋಹಿತ್’ ಎಂದು ಗುರುತಿಸಿಕೊಳ್ಳಲು ಸಾಧ್ಯವಾಗಿದ್ದು ಅವರಲ್ಲಿದ್ದ ನೈಜ ಪ್ರತಿಭೆಯಿಂದಲೇ. ‘ಬೆಟ್ಟದ ಹೂವು’ ಚಿತ್ರದ ನಟನೆಗಾಗಿ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆಯೂ ಅವರದಾಯ್ತು. ಹೀಗೆ ಪುನೀತ್‌ ಬಾಲನಟನಾಗಿಯೇ ಕನ್ನಡಿಗರಿಗೆ ಪ್ರೀತಿಯ ಹುಡುಗನಾಗಿದ್ದರು.

‘ಬೆಟ್ಟದ ಹೂವು’

ಮುಂದೆ ನಾಯಕನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುವ ಹೊತ್ತಿಗೆ ಬಾಲ್ಯದ ಇಮೇಜು ಅವರಿಗೇನೂ ನೆರವಾಗಲಿಲ್ಲ. ಜೊತೆಗೆ ಆ ವೇಳೆಯಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಅವರ ಸುತ್ತ ಕೆಲವು ವಿವಾದಗಳೂ ಸೃಷ್ಟಿಯಾಗಿದ್ದವು. ನಟ ರಾಜಕುಮಾರ್‌ ಪರ – ವಿರೋಧದ ಸಮರ್ಥಕರ ಮಧ್ಯೆ ವಿವಾದಗಳು ಎತ್ತರಕ್ಕೇ ಬೆಳೆದಿದ್ದವು. ‘ಅಪ್ಪು’ ಚಿತ್ರದೊಂದಿಗೆ ಅವರು ಹೀರೋ ಆದರು. ಅಲ್ಲಿಯವರೆಗೆ ಬಾಲನಟನಾಗಿ ಮನಸ್ಸಿನಲ್ಲುಳಿದಿದ್ದ ಪುನೀತ್‌ರಲ್ಲಿ ಜನರು ಒಬ್ಬ ನಾಯಕನಟನನ್ನು ಗುರುತಿಸಿದರು. ಬಾಡಿ ಲಾಂಗ್ವೇಜ್‌, ಎನರ್ಜಿ, ಸಂಭಾಷಣೆ ಹೇಳುವ ಶೈಲಿ, ಜೊತೆಗೆ ಚಿಕ್ಕಂದಿನ ಅದೇ ಮುಗ್ಧ ನಗು… ಒಟ್ಟಾರೆ ಒಂಥರಾ ಹೊಸತನವಿತ್ತು. ಬಾಲನಟನಾಗಿ ಹಾಡಿದ್ದ ಅವರು ಹೀರೋ ಆಗಿ ಕಾಣಿಸಿಕೊಂಡ ಚೊಚ್ಚಲ ಚಿತ್ರಕ್ಕೂ ಹಾಡಿದ್ದರು. ಸಂಗೀತಕ್ಕೆ ಬೇಕಿದ್ದ ಲಯ, ಗೇಯ ಅವರಿಗೆ ಒಲಿದಿತ್ತು. ಮುಂದೆ ಸಾಕಷ್ಟು ಸಿನಿಮಾಗಳಿಗೆ ಹಾಡುತ್ತಾ ಬಂದರು. ತಮ್ಮ ಚಿತ್ರಗಳಿಗಲ್ಲದೆ ಇತರೆ ಹೀರೋಗಳ ಚಿತ್ರಗಳಿಗೂ ಹಾಡುತ್ತಿದ್ದರು. ತಮ್ಮ ಸಿನಿಮಾಗೆ ಪುನೀತ್‌ರಿಂದ ಒಂದು ಹಾಡಿಸಬೇಕು ಎಂದು ಹಾಡು ಬರೆಸಲು ಶುರುಮಾಡಿದ್ದರು ನಿರ್ದೇಶಕರು. ಹಾಗೆ ಗಾಯಕನಾಗಿಯೂ ಅವರು ತಮ್ಮದೊಂದು ಐಡೆಂಟಿಟಿ ಸೃಷ್ಟಿಸಿಕೊಂಡರು.

‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ರಾಜಕುಮಾರ್, ಪುನೀತ್, ಸರಿತಾ

ಶಿವರಾಜಕುಮಾರ್, ರಾಘವೇಂದ್ರರಾಜಕುಮಾರ್ ಸಿನಿಮಾಗೆ ಆಗಿ ಪರಿಚಯವಾದಾಗ ಅವರನ್ನು ಎಲ್ಲರೂ ರಾಜಕುಮಾರ್ ಪುತ್ರ ಎಂದು ಗುರುತಿಸಿದ್ದರು. ಆದರೆ ಪುನೀತ್ ವಿಷಯದಲ್ಲಿ ಹಾಗಾಗದಿರಲು ಕಾರಣ ಬಾಲನಟನಾಗಿ ಅವರು ಅದಾಗಲೇ ಕನ್ನಡಿಗರ ಮನಸ್ಸಿನಲ್ಲಿದ್ದುದು. ‘ಅಪ್ಪು’ ಚಿತ್ರದೊಂದಿಗೆ ಹೀರೋ ಆದ ಪುನೀತ್‌ ಅವರಿಗೆ ಹೆಚ್ಚು ಫ್ಯಾಮಿಲಿ ಆಡಿಯನ್ಸ್‌ ಸೃಷ್ಟಿಯಾಗಿದ್ದು ‘ಆಕಾಶ್’, ‘ಅರಸು’, ‘ಮಿಲನ’ ಚಿತ್ರಗಳಲ್ಲಿ. ಈ ಚಿತ್ರಗಳಲ್ಲಿ ಅವರು ಲವರ್ ಬಾಯ್‌ ಅಷ್ಟೇ ಆಗಿರಲಿಲ್ಲ. ಪ್ರೀತಿಯನ್ನು ಘನತೆಯಿಂದ ನಿಭಾಯಿಸುವ ಯುವಕನಾಗಿ ಅವರ ಪಾತ್ರಗಳನ್ನು ವಿಶೇಷವಾಗಿ ಹೆಣ್ಣುಮಕ್ಕಳು ತುಂಬಾ ಇಷ್ಟಪಟ್ಟರು. ಪುನೀತ್‌ ಕೂಡ ಪಾತ್ರಗಳ ಆಳ ಅರಿತು ಅಭಿನಯಿಸಿದ್ದರು. ‘ಮನೆಯ ಮಗ ಜವಾಬ್ದಾರಿಯಿಂದ ಹೀಗೆ ನಡೆದುಕೊಳ್ಳಬೇಕು’ ಎಂದುಕೊಂಡರು ಮನೆಮಂದಿ. ತಮ್ಮನ್ನು ಜನರು ತೆರೆಯ ಮೇಲೆ ಹೇಗೆ ನೋಡಲು ಬಯಸುತ್ತಾರೆ ಎಂದು ಯಾವಾಗ ಮನವರಿಕೆಯಾಯ್ತೋ, ಪಾತ್ರಗಳ ಆಯ್ಕೆಯಲ್ಲಿ ಪುನೀತ್‌ ಹೆಚ್ಚು ಹುಷಾರಾದರು. ಆಕ್ಷನ್‌, ಡ್ಯಾನ್ಸ್ ಜೊತೆಗೆ ತಮ್ಮ ಚಿತ್ರಗಳಲ್ಲಿ ಉತ್ತಮ ಕತೆಯೂ ಇರಬೇಕೆನ್ನುವ ಪಾಲಿಸಿ ಕಡ್ಡಾಯ ಮಾಡಿದರು.

ದಶಕದಿಂದೀಚಿನ ಸಿನಿಮಾರಂಗದ ಟ್ರೆಂಡ್‌ ಗಮನಿಸುವುದಾದರೆ, ಅಬಾಲವೃದ್ಧರಾದಿಯಾಗಿ ಎಲ್ಲರೂ ಇಷ್ಟಪಟ್ಟು ನೋಡುವ ಫ್ಯಾಮಿಲಿ ಹೀರೋಗಳು ತೀರಾ ಕಡಿಮೆ. ಅಭಿಮಾನಿಗಳಿಗೋಸ್ಕರ ಸಿನಿಮಾ ಮಾಡುವ ಹೀರೋಗಳ ಮಧ್ಯೆ ಪುನೀತ್‌ ಭಿನ್ನವಾಗಿ ಕಂಡರು. ಮೊದಲ ವಾರ ಚಿತ್ರಮಂದಿರಗಳನ್ನು ಹೌಸ್‌ಫುಲ್‌ ಮಾಡುವಂತಹ ಇಮೇಜು ಅವರಿಗಿತ್ತು. ಮತ್ತೊಂದೆಡೆ ಇದೇ ಚಿತ್ರಗಳು ಟೀವಿಯಲ್ಲಿ ಪ್ರಸಾರವಾದಾಗ ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುತ್ತಿದ್ದರು. ಪುಟ್ಟ ಮಕ್ಕಳು ಅವರ ಡ್ಯಾನ್ಸ್‌ ತುಂಬಾ ಇಷ್ಟಪಡುತ್ತಿದ್ದರು. ಬಹುಶಃ ಕನ್ನಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಇಷ್ಟಪಡುತ್ತಿದ್ದ ನಾಯಕನಟ ಪುನೀತ್‌ ಅವರೇ ಆಗಿದ್ದರು. ‘ಆಕಾಶ್‌’ ಚಿತ್ರದಿಂದ ಇತ್ತೀಚಿನ ‘ಯುವರತ್ನ’ದವರೆಗೂ ಅವರ ಚಿತ್ರಗಳಲ್ಲಿ ಈ ‘ಫ್ಯಾಮಿಲಿ ಪ್ಯಾಕೇಜ್‌’ ವ್ಯಾಕರಣವಿತ್ತು.

ಅಮಿತಾಭ್ ಬಚ್ಚನ್ ಜೊತೆ

ಪುನೀತ್‌ ಇನ್ನು ಮುಂದೆ ನಮ್ಮೊಂದಿಗೆ ಇರೋಲ್ಲ ಎಂದು ಮನಸ್ಸಿಗೆ ಬಂದಾಗ ಕನ್ನಡಿಗರ ಕಣ್ಣು ಒದ್ದೆಯಾಗದೇ ಇರದು. ತೆರೆಯ ಮೇಲೆ ಒಬ್ಬ ನಟ ಇಷ್ಟವಾಗುವುದು ಬೇರೆ. ತೆರೆಯಾಚೆಗೂ ವ್ಯಕ್ತಿ ಆಪ್ತವಾಗಬೇಕಾದರೆ ಅದಕ್ಕೆ ವಿಶೇಷ ಕಾರಣಗಳಿರುತ್ತವೆ. ಅಲ್ಲಿ ವ್ಯಕ್ತಿಯ ನಡೆ, ನುಡಿ, ಅಭಿರುಚಿ ಮುಖ್ಯವಾಗುತ್ತವೆ. ಆ ವಿಷಯದಲ್ಲಿ ಪುನೀತ್‌ ಹೆಚ್ಚು ಸ್ಕೋರ್ ಮಾಡಿದ್ದರು. ಸಿನಿಮಾಗಳಲ್ಲಿ ಹೀರೋ ಆಗಿದ್ದ ಅವರು ಕಿರುತೆರೆ ಶೋ ನಿರೂಪಣೆಯಲ್ಲಿ ಓರ್ವ ಆತ್ಮೀಯ ಗೆಳೆಯ, ಅಣ್ಣನೋ, ತಮ್ಮನೋ ಎನ್ನುವಂತೆ ನಡೆದುಕೊಳ್ಳುತ್ತಿದ್ದರು. ಆ ವಿಚಾರದಲ್ಲಿ ತಂದೆ ರಾಜಕುಮಾರ್ ಅವರಿಗಿದ್ದ ಸ್ಕ್ರೀನ್‌ ಪ್ರಸೆನ್ಸ್‌ ಪುನೀತ್‌ ಅವರಿಗೂ ಇತ್ತು. ತಾವೊಬ್ಬ ಜನಪ್ರಿಯ ನಟ ಎನ್ನುವ ಹಮ್ಮು ಅವರಿಗಿರಲಿಲ್ಲ. ಅದೆಷ್ಟೋ ಬಾರಿ ಅವರು ತಮ್ಮ ಮೈಬಣ್ಣದ ಕುರಿತು ಸಹಜವಾಗಿ, ಆತ್ಮವಿಶ್ವಾಸದಿಂದ ಮಾತನಾಡಿದ್ದಿದೆ. ಪ್ರಜ್ಞಾಪೂರ್ವಕ ಅಲ್ಲದ ಅವರ ಇಂತಹ ಸಹಜ ನಡೆ ಜನರಿಗೆ ಆಪ್ತವಾಗುತ್ತಿತ್ತು. ಕಿರುತೆರೆ ಪರದೆ ಮೇಲೆ ಆಕಸ್ಮಾತ್ ಪುನೀತ್ ಕಂಡರೆ, ವೀಕ್ಷಕರು ತಮಗರಿವಿಲ್ಲದೆ ಅತ್ತ ಕಣ್ಣು ಹಾಯಿಸುತ್ತಿದ್ದರು.

ಅಪ್ಪ – ಅಮ್ಮನೊಂದಿಗೆ

ಇನ್ನು ಒಬ್ಬ ನಟ, ನಿರ್ಮಾಪಕನಾಗಿ ಕನ್ನಡ ಚಿತ್ರೋದ್ಯಮಕ್ಕೆ ಪುನೀತ್ ಅಗಲಿಕೆ ತುಂಬಲಾರದ ನಷ್ಟ. ಇತ್ತೀಚಿನ ವರ್ಷಗಳಲ್ಲಿ ಅವರು ಭಿನ್ನ ಕತೆಗಳ ಹುಡುಕಾಟದಲ್ಲಿದ್ದರು. ಕಂಟೆಂಟ್‌ ಡ್ರಿವನ್‌ ಸಿನಿಮಾಗಳೆಡೆ ಅವರ ಒಲವು ಹೆಚ್ಚಾಗಿತ್ತು. ಕಮರ್ಷಿಯಲ್‌ ಸಿನಿಮಾ ಹೀರೋಗಿರುವ ಮಿತಿಗಳ ಮಧ್ಯೆಯೂ ಬದಲಾಗುತ್ತಿರುವ ಪ್ರೇಕ್ಷಕರ ಅಭಿರುಚಿಗೆ ಹೊಂದುವಂತಹ ಸಿನಿಮಾ ಮಾಡಬೇಕೆನ್ನುವ ತುಡಿತವಿತ್ತು. ‘ಲೂಸಿಯಾ’ ಸಿನಿಮಾ ಖ್ಯಾತಿಯ ಪವನ್ ಕುಮಾರ್‌ ನಿರ್ದೇಶನದಲ್ಲಿ ಘೋಷಣೆಯಾಗಿದ್ದ ‘ದ್ವಿತ್ವ’ ಅಂಥದ್ದೇ ವಸ್ತು. ಮುಂದಿನ ದಿನಗಳಲ್ಲಿ ಇಂತಹ ಹತ್ತು ಹಲವು ಸಿನಿಮಾಗಳಲ್ಲಿ ಅವರು ನಟಿಸುವವರಿದ್ದರು. ತಾವು ನಟಿಸಲಾಗದ ಕತೆಗಳನ್ನು ನಿರ್ಮಾಪಕನಾಗಿ ತೆರೆಗೆ ತರಬೇಕೆನ್ನುವ ಅವರ ಅಭಿಲಾಷೆಯಿಂದ ಹುಟ್ಟಿಕೊಂಡದ್ದು ‘ಪಿಆರ್‌ಕೆ ಪ್ರೊಡಕ್ಷನ್ಸ್‌’. ಕ್ರಿಯಾಶೀಲ ನಿರ್ದೇಶಕರ ಕತೆಗಳನ್ನು ಕೇಳಿ ಅವರು ಸಿನಿಮಾ ನಿರ್ಮಿಸಿದರು. “ಇಂಥದ್ದೊಂದು ಸೋಷಿಯಲ್ ಮೆಸೇಜ್ ಇರುವ ಸಿನಿಮಾ ಇದೆ, ವಿಮೆನ್ ಸೆಂಟ್ರಿಕ್‌ ಕಥಾವಸ್ತು ಇದೆ, ಅದನ್ನು ಪುನೀತ್‌ ಅವರಿಗೆ ಹೇಳಬೇಕು. ಅವರ ಬ್ಯಾನರ್‌ನಲ್ಲಿ ಸಿನಿಮಾ ಮಾಡಬೇಕು” ಎಂದು ಕನಸು ಕಾಣುತ್ತಿದ್ದ ಹತ್ತಾರು ನಿರ್ದೇಶಕರು ಉದ್ಯಮದಲ್ಲಿದ್ದಾರೆ. ಈಗ ಆ ಕನಸುಗಳೆಲ್ಲಾ ಕಮರಿವೆ.

ಸಾರ್ವಜನಿಕ ಸಮಾರಂಭಗಳಲ್ಲಂತೂ ಅವರದ್ದು ತೂಕದ ಮಾತು, ನಡಾವಳಿ. ಅವರ ಹಿರಿಯಣ್ಣ ಶಿವರಾಜಕುಮಾರ್‌ ಅಭಿಮಾನಿಗಳ ಕೂಗಾಟ, ಪುಂಡಾಟಗಳಿಗೆ ಕೆಲವೊಮ್ಮೆ ಗದರುವುದಿದೆ. ಆದರೆ ಪುನೀತ್ ಹಾಗಲ್ಲ. ವೇದಿಕೆ ಏರಿದ ಅರೆಕ್ಷಣ ಅವರು ಸಭೆ, ಸನ್ನಿವೇಶ, ಅಲ್ಲಿ ನೆರೆದಿರುವ ಜನರನ್ನು ಗಮನಿಸುತ್ತಿದ್ದರು. ಕೆಲವೇ ಮಾತುಗಳನ್ನಾಡುವ ಸಂದರ್ಭದಲ್ಲೂ ಸಮಾಧಾನವಾಗಿ, ಜವಾಬ್ದಾರಿಯಿಂದ ಆಡುತ್ತಿದ್ದರು. ತಮ್ಮ ತಂದೆ ವರನಟ ಡಾ.ರಾಜಕುಮಾರ್‌ ಅವರ ಲೆಗಸಿಯನ್ನು ಕ್ಯಾರಿ ಮಾಡುವ ಜವಾಬ್ದಾರಿಯನ್ನು ಅವರು ಸಹಜವಾಗಿ ನಿಭಾಯಿಸುತ್ತಿದ್ದರು. ವಿವಾದಗಳಿಂದ ಸದಾ ದೂರವೇ ಉಳಿದಿದ್ದ ಅಪ್ಪಟ ಫ್ಯಾಮಿಲಿ ಮ್ಯಾನ್‌. ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಹ ಹಲವಾರು ಸರ್ಕಾರಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಅವರು ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದ ವ್ಯಕ್ತಿ. ಇಂತಹ ಒಬ್ಬ ಅಪರೂಪದಲ್ಲಿ ಅಪರೂಪವಾಗಿದ್ದ ಪ್ರತಿಭಾವಂತ, ಸರಳ, ಸಜ್ಜನಿಕೆಯ ಸಾರ್ವಜನಿಕ ವ್ಯಕ್ತಿತ್ವ ಕಣ್ಮೆರೆಯಾಗಿದೆ. ‘ರಾಜಕುಮಾರ’ ಇನ್ನು ನೆನಪು ಮಾತ್ರ.

LEAVE A REPLY

Connect with

Please enter your comment!
Please enter your name here