ನಟ ರಕ್ಷಿತ್‌ ಶೆಟ್ಟಿ, ನಟ – ನಿರ್ದೇಶಕ ರಿಷಭ್‌ ಶೆಟ್ಟಿ ಅವರನ್ನು 6ನೇ ‘ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಪುರಸ್ಕರಿಸಲಾಗಿದೆ. ನಟ ರಕ್ಷಿತ್‌ ಶೆಟ್ಟಿ ಅವರು ಎಂ ಎಸ್‍ ಕೆ ಟ್ರಸ್ಟ್ ನೀಡುವ ‘ದಾದಾ ಸಾಹೇಬ್‍ ಫಾಲ್ಕೆ – ಎಂ ಎಸ್‍ ಕೆ ಟ್ರಸ್ಟ್’ ಪ್ರಶಸ್ತಿಗೂ ಭಾಜನರಾಗಿದ್ದಾರೆ.

6ನೇ ‘ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ (IIFF 2023) ನಟ ರಕ್ಷಿತ್‌ ಶೆಟ್ಟಿ, ನಟ – ನಿರ್ದೇಶಕ ರಿಷಭ್‌ ಶೆಟ್ಟಿ ಗೌರವಕ್ಕೆ ಪಾತ್ರರಾಗಿದ್ದಾರೆ. ‘ಕಾಂತಾರ’ ಚಿತ್ರದ ಮೂಲಕ ಭಾರತೀಯ ಸಿನಿಮಾದ ಗಮನ ಸೆಳೆದ ರಿಷಭ್‍ ಶೆಟ್ಟಿ ಅವರಿಗೆ ‘ಐಕಾನಿಕ್‍ ಡೈರೆಕ್ಟರ್’ ಮತ್ತು ‘777 ಚಾರ್ಲಿ’ ಚಿತ್ರದ ಅತ್ಯುತ್ತಮ ನಟನೆಯಿಂದ ಅಪಾರ ಮೆಚ್ಚುಗೆಗೆ ಪಾತ್ರರಾದ ರಕ್ಷಿತ್‌ ಶೆಟ್ಟಿ ಅವರಿಗೆ ‘ಟ್ರೆಂಡಿಂಗ್‍ ಆ್ಯಕ್ಟರ್’ ಎಂದು ಗುರುತಿಸಿ ಪುರಸ್ಕರಿಸಲಾಗಿದೆ. ಗೌರವ ಸ್ವೀಕರಿಸಿ ಮಾತನಾಡಿದ ರಿಷಭ್‍ ಶೆಟ್ಟಿ, ‘ಕಾಂತಾರ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳು ಮತ್ತು ಜನಪ್ರಿಯತೆ ಎಲ್ಲವೂ ಕನ್ನಡಿಗರಿಗೆ ಸಲ್ಲಬೇಕು. ಈ ಚಿತ್ರಕ್ಕೆ ಅದ್ಭುತ ಯಶಸ್ಸು ಕೊಟ್ಟವರು ಅವರು. ಚಿತ್ರ ಅಲ್ಲಿಂದ ಬೇರೆ ಬೇರೆ ಭಾಷೆಗಳಿಗೆ ತಲುಪಿತು. ಕನ್ನಡ ಚಿತ್ರಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿವೆ. ಆದರೆ, ಈ ಚಿತ್ರಗಳಿಗೆ ಇಲ್ಲಿ ಚಿತ್ರಮಂದಿರಗಳು ಹಾಗೂ OTTಗಳಲ್ಲಿ ಪ್ರಾಧಾನ್ಯತೆ ಸಿಗುತ್ತಿಲ್ಲ. NFDC ಮತ್ತು ಫಿಲಂ ಬಜಾರ್‌ಗಳಿಗೆ ಆಯ್ಕೆಯಾಗುವ ಚಿತ್ರಗಳ ಪ್ರದರ್ಶನಕ್ಕೆ ಒಂದು ವೇದಿಕೆ ಕಲ್ಪಿಸಬೇಕು’ ಎಂದು ಸಮಾರಂಭದ ಮುಖ್ಯ ಅತಿಥಿ, IAS ಅಧಿಕಾರಿ ಅಪೂರ್ವ ಚಂದ್ರ ಅವರಿಗೆ ಮನವಿ ಸಲ್ಲಿಸಿದರು.

ರಕ್ಷಿತ್‍ ಶೆಟ್ಟಿ ಮಾತನಾಡಿ, ‘777 ಚಾರ್ಲಿ ನನ್ನ ವೃತ್ತಿಜೀವನದ ವಿಶೇಷ ಸಿನಿಮಾ. Paramvah Studiosನಡಿ ನಿರ್ಮಾಣವಾದ ಮೊದಲ PAN ಇಂಡಿಯಾ ಚಿತ್ರವಿದು. ಇದರಲ್ಲಿ ನಾವು ಕೇವಲ ಕಿರುಚಿತ್ರಗಳನ್ನು ಮಾಡುತ್ತಿದ್ದೆವು. ಈಗ ನಮ್ಮ ಚಿತ್ರವೊಂದು ರಾಷ್ಟ್ರಪ್ರಶಸ್ತಿ ಪಡೆದಿದೆ. ಮನುಷ್ಯರ ಜೊತೆಗೆ ನಟನೆ ಮಾಡಬಹುದು. ಚಾರ್ಲಿ (ನಾಯಿ) ಜೊತೆ ನಟನೆ ಕಷ್ಟಕರ. ಆದರೆ ಇಂಥ ಪ್ರಶಸ್ತಿಗಳಿಂದ ಕಷ್ಟಗಳು ಮರೆತು ಹೋಗುತ್ತವೆ’ ಎಂದರು. ‘ಟ್ರೆಂಡಿಂಗ್‍ ಆ್ಯಕ್ಟರ್’ ಜೊತೆಗೆ ಎಂ ಎಸ್‍ ಕೆ ಟ್ರಸ್ಟ್ ನೀಡುವ ‘ದಾದಾ ಸಾಹೇಬ್‍ ಫಾಲ್ಕೆ – ಎಂ ಎಸ್‍ ಕೆ ಟ್ರಸ್ಟ್’ ಪ್ರಶಸ್ತಿಗೂ ರಕ್ಷಿತ್‌ ಭಾಜನರಾಗಿದ್ದಾರೆ. ಶರವಣ ಪ್ರಸಾದ್ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ 6ನೇ ಉದ್ಘಾಟನಾ ಸಮಾರಂಭದಲ್ಲಿ ಚಿತ್ರೋತ್ಸವದ ಅಧ್ಯಕ್ಷರಾದ ರಾಕ್‍ಲೈನ್‍ ವೆಂಕಟೇಶ್‍, ಫಿಲಂ ಫೆಡರೇಶನ್‍ ಆಫ್‍ ಇಂಡಿಯಾದ ಅಧ್ಯಕ್ಷರಾದ ರವಿ ಕೊಟ್ಟಾರ್ಕರ್‌ ಮತ್ತು ಅಂತಾರಾಷ್ಟ್ರೀಯ ನಿರ್ದೇಶಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಭಾರತೀರಾಜ, ರಾಜೇಂದ್ರ ಸಿಂಗ್‍ ಬಾಬು, ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ನಟ ಸಾಯಿಕುಮಾರ್ ಮುಂತಾದವರನ್ನು ಸನ್ಮಾನಿಸಲಾಯಿತು. ತೆಲುಗು ನಟಿ ಮತ್ತು ಸಚಿವೆ ರೋಜಾ, ಹಿರಿಯ ನಟಿ ಅಂಬಿಕಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‍ ಎಂ ಸುರೇಶ್‍ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

LEAVE A REPLY

Connect with

Please enter your comment!
Please enter your name here