ಕುಶಾಲ್ ಗೌಡ ನಿರ್ದೇಶನದಲ್ಲಿ ಧನಂಜಯ ನಟಿಸುತ್ತಿರುವ ಸಿನಿಮಾದ ಶೀರ್ಷಿಕೆ ರಿವೀಲ್ ಆಗಿದೆ. ‘Once upon a time in ಜಮಾಲಿ ಗುಡ್ಡ’ ವಿಶಿಷ್ಟ ಶೀರ್ಷಿಕೆಯ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ಬೆಳವಾಡಿ, ಭಾವನಾ, ಯಶ್‌ ಶೆಟ್ಟಿ ನಟಿಸುತ್ತಿದ್ದಾರೆ. ಅದಿತಿ ಪ್ರಭುದೇವ ಚಿತ್ರದ ನಾಯಕಿ.

ಕುಶಾಲ್ ಗೌಡ ನಿರ್ದೇಶನದ ನೂತನ ಸಿನಿಮಾದ ಶೀರ್ಷಿಕೆ ರಿವೀಲ್ ಆಗಿದೆ. ‘Once upon a time in ಜಮಾಲಿ ಗುಡ್ಡ’ ಎನ್ನುವ ವಿಶಿಷ್ಟ ಹೆಸರಿನ ಈ ಸಿನಿಮಾ ಈಗಾಗಲೇ ಚಿತ್ರೀಕರಣದಲ್ಲಿದೆ. ಧನಂಜಯ ಮತ್ತು ಅದಿತಿ ‘ತೋತಾಪುರಿ’ ಸಿನಿಮಾದ ನಂತರ ಇಲ್ಲಿ ಎರಡನೇ ಬಾರಿ ಜೊತೆಯಾಗಿ ನಟಿಸುತ್ತಿದ್ದಾರೆ. ಧನಂಜಯ ಈಗ ಬ್ಯುಸಿ ಹೀರೋ. ಕನ್ನಡವಷ್ಟೇ ಅಲ್ಲದೆ ಇತರೆ ಭಾಷೆಗಳ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ಕುಶಾಲ್ ಗೌಡರ ಸಿನಿಮಾದಲ್ಲಿ ಅವರಿಗೆ ಭಿನ್ನ ಶೇಡ್‌ನ ಪಾತ್ರವಿದೆಯಂತೆ. ಧನಂಜಯ ಮತ್ತು ಪುಟ್ಟ ಬಾಲಕಿ ಒಟ್ಟಿಗೆ ಕುಳಿತಿರುವ ಪೋಸ್ಟರ್‌ ಕತೆ ಏನಿರಬಹುದು ಎನ್ನುವ ಕುತೂಹಲಕ್ಕೆ ಎಡೆಮಾಡಿದೆ.

ಈ ಸಿನಿಮಾ ಕುರಿತು ಮಾತನಾಡಿದ ಧನಂಜಯ, “ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗಲೂ ಭಯವಾಗುತ್ತೆ. ಸಿನಿಮಾ ಹೇಗೆ ಪ್ರಸೆಂಟ್ ಮಾಡುತ್ತಾರೋ ಎನ್ನುವ ಗೊಂದಲ ಅದು. ಕೆಲವು ಬಾರಿ ನಮಗೆ ಕತೆ ಹೇಳುವ ರೀತಿ ಸಿನಿಮಾ ಮಾಡೋಲ್ಲ. ಈ ಸಿನಿಮಾ ವಿಚಾರದಲ್ಲಿ ನನಗೆ ತುಂಬಾ ಕಾನ್ಫಿಡೆನ್ಸ್ ಇದೆ. ಸಾಹಿತಿ ತೇಜಸ್ವಿ ಅವರ ಅಭಿಮಾನಿಯಾದ ನಿರ್ದೇಶಕ ಕುಶಾಲ್ ಗೌಡ ಅವರು ತುಂಬಾ ಒಳ್ಳೆಯ ಕತೆ ಮಾಡಿಕೊಂಡಿದ್ದಾರೆ. ಅವರು ನನಗೆ ಈ ಕತೆ ಹೇಳಿ ಒಂದು ವರ್ಷವೇ ಆಗಿತ್ತು. ಇತರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನನಗೆ ಶೂಟಿಂಗ್‌ಗೆ ಡೇಟ್ಸ್ ಕೊಡಲು ಸಾಧ್ಯವಾಗಿರಲಿಲ್ಲ. ನಾನೇ ಬೇಕೆಂದು ಅವರು ಹೇಳಿದಾಗ ತುಂಬಾ ಖುಷಿಯಾಯ್ತು. ಎಲ್ಲಾ ಕಲವಿದರಂತೆ ಇಲ್ಲಿ ನಾನೂ ಒಬ್ಬ ಪಾತ್ರಧಾರಿಯಷ್ಟೇ. ಇದೊಂದು ರೋಡ್ ಸಿನಿಮಾ, ಫೀಲ್ ಗುಡ್‌ ಮೂವೀ ಆಗಲಿದೆ” ಎಂದರು.

‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾದ ಕುಶಾಲ್ ಗೌಡ ಅವರಿಗೆ ‘ಜಮಾಲಿ ಗುಡ್ಡ’ ನಿರ್ದೇಶನದ ಎರಡನೇ ಸಿನಿಮಾ. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಅಪ್ಪಟ ಅಭಿಮಾನಿ ಅವರು. ಈಗಾಗಲೇ ಚಿಕ್ಕಮಗಳೂರು, ಕುದುರೆಮುಖದಲ್ಲಿ ಇಪ್ಪತ್ತೈದು ದಿನ ಚಿತ್ರೀಕರಣ ನಡೆದಿದೆ. “ಮಲೆನಾಡು ನನ್ನ ಸಿನಿಮಾಗಳಲ್ಲಿ ಒಂದು ಪಾತ್ರವಾಗಿ ಬರುತ್ತದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಧನಂಜಯ, ಪ್ರಕಾಶ್ ಬೆಳವಾಡಿ, ಸತ್ಯಣ್ಣ, ಯಶ್‌ ಶೆಟ್ಟಿ, ನಂದಗೋಪಾಲ್‌  ಪಾಲ್ಗೊಂಡಿದ್ದಾರೆ. ಶಿವಮೊಗ್ಗ, ಗೋಕರ್ಣದಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ” ಎಂದರು ನಿರ್ದೇಶಕ ಕುಶಾಲ್ ಗೌಡ. ಶ್ರೀಹರಿ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಮಾಸ್ತಿ ಸಂಭಾ‍ಷಣೆಯಿದೆ.

LEAVE A REPLY

Connect with

Please enter your comment!
Please enter your name here