ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಕೆ ಎಸ್ ನಂದೀಶ್ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು.
ಕೆ ಎಸ್ ನಂದೀಶ್ ನಿರ್ದೇಶನದಲ್ಲಿ ರಿಷಿ ನಟಿಸಿರುವ ‘ರುದ್ರ ಗರುಡ ಪುರಾಣ’ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ. ಇದೀಗ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಟ ರಿಷಿ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ರಿಷಿ ಅಭಿನಯಿಸಿದ್ದ ‘ಕವಲುದಾರಿ’ ಚಿತ್ರ ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ನಿರ್ಮಾಣವಾಗಿತ್ತು. ಈಗ ಅದೇ ಸಂಸ್ಥೆಯ ಅಶ್ವಿನಿಯವರು ರಿಷಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಎನ್ನುವುದು ವಿಶೇಷ.
ಕನ್ನಡ ಸಿನಿಮಾಗಳ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ರಿಷಿ ‘ಸೈತಾನ್’ ಸರಣಿ ಮೂಲಕ ತೆಲುಗು ಜನರಿಗೂ ಪರಿಚಿತರಾಗಿದ್ದಾರೆ. ಹಾಗಾಗಿ ‘ರುದ್ರ ಗರುಡ ಪುರಾಣ’ ತೆಲುಗು ಅವತರಣಿಕೆಯಲ್ಲೂ ಸಿದ್ಧವಾಗುವ ಸಂಭವವಿದೆ. ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಕೆಪಿ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನ ಚಿತ್ರಕ್ಕಿದೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ ಆರ್ ಪೇಟೆ, ಗಿರಿ, ಕೆ ಎಸ್ ಶ್ರೀಧರ್, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ ಚಿತ್ರದಲ್ಲಿ ಅಭಿನಯಿಸಿದ್ದಾರೆ.