ನಟ ಯಶ್‌ ಇಂದು (ಜನವರಿ 8) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ sandalwood star hero ಆಗಿ ಬೆಳೆದ ನಟ. ‘KGF’ ಸರಣಿ ಸಿನಿಮಾಗಳ ನಂತರ ಅವರೀಗ PAN ಇಂಡಿಯಾ ಸ್ಟಾರ್‌. ಯಶ್‌ ಮುಂಬೈನಲ್ಲಿ ಕಾಣಿಸಿಕೊಂಡರೆ ಜನರು ‘ರಾಕಿ ಭಾಯ್‌’ ಎಂದು ಕೂಗುತ್ತಾ ಅವರನ್ನು ಸುತ್ತುವರಿಯುತ್ತಾರೆ. ತಾರಾ ಪತ್ನಿ ರಾಧಿಕಾ ಪಂಡಿತ್‌ ಜೊತೆ ಓಡಾಡಿದರೆ ಅದು ದೊಡ್ಡ ಸುದ್ದಿಯಾಗುತ್ತದೆ. sandalwood ಹೀರೋ national star ಆಗಿದ್ದು ಹೇಗೆ?

‘KGF’ ಸರಣಿ ಸಿನಿಮಾಗಳು ಬರುವ ಮುನ್ನ ಒಂದು ಲೆಕ್ಕ, ಈ ಚಿತ್ರಗಳು ಬಂದ ನಂತರ ಇನ್ನೊಂದು ಲೆಕ್ಕ! – ಸ್ಯಾಂಡಲ್‌ವುಡ್‌ ಮಾರುಕಟ್ಟೆ ವಿಸ್ತರಿಸಿದ ಈ ಸರಣಿ ಸಿನಿಮಾಗಳು, ಚಿತ್ರದ ಹೀರೋ ಯಶ್‌ಗೂ ದೊಡ್ಡ ತಿರುವಾದವು. ಯಶ್‌ ಅವರನ್ನು ಉತ್ತರ ಭಾರತದ ಸಿನಿಪ್ರಿಯರು ಈಗ ‘ರಾಕಿ ಭಾಯ್‌’ ಎಂದೇ ಕೂಗುತ್ತಾರೆ. ಅದು ‘KGF’ ಸರಣಿಗಳು ತಂದುಕೊಟ್ಟ ಜನಪ್ರಿಯತೆ! ಮುಂಬೈನಲ್ಲಿ ಯಶ್‌ ಕಾಣಿಸಿದಾಕ್ಷಣ paparazziಗಳು ಅವರನ್ನು ಸುತ್ತುವರೆಯುತ್ತಾರೆ. ತಾರಾ ಪತ್ನಿ ರಾಧಿಕಾ ಪಂಡಿತ್‌ ಜೊತೆ ಯಶ್‌ ಓಡಾಡಿದರೆ, ಅಲ್ಲೀಗ ಅದು ದೊಡ್ಡ ಸುದ್ದಿ.

‘KGF’ ಸರಣಿಗಳ ನಂತರ ಯಶ್‌ ನಟಿಸುತ್ತಿರುವ ‘ಟಾಕ್ಸಿಕ್‌’ ಸುದ್ದಿಯಾಗುತ್ತಿದೆ. ಟೀಸರ್‌, ಪೋಸ್ಟರ್‌ಗಳ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ ಇಂಗ್ಲಿಷ್‌ ಭಾಷೆಯಲ್ಲೂ ತೆರೆಕಾಣಲಿದೆ. ಇದಾದ ನಂತರ ಪೌರಾಣಿಕ ಸಿನಿಮಾ ‘ರಾಮಾಯಣ’. ಬಹುಕೋಟಿ ವೆಚ್ಚದ ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ನಲ್ಲಿ ಯಶ್‌, ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ. ‘ಟಾಕ್ಸಿಕ್‌’, ‘ರಾಮಾಯಣ’ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿರುವ ಯಶ್‌ ಈ ಚಿತ್ರಗಳ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ ಎನ್ನುವುದು ವಿಶೇಷ.

ಹಾಗೆ ನೋಡಿದರೆ ಯಶ್‌, ಯಾವುದೇ ಗಾಡ್‌ಫಾದರ್‌ಗಳು ಇಲ್ಲದೇ ಬೆಳೆದ ಹುಡುಗ. ಜನ್ಮನಾಮ ನವೀನ್‌ ಕುಮಾರ್‌ ಗೌಡ. ತಂದೆ ಅರುಣ್‌ ಕುಮಾರ್‌ ಗೌಡ ಕೆಎಸ್‌ಆರ್‌ಟಿಸಿ ಬಸ್‌ ಡ್ರೈವರ್‌. ತಾಯಿ ಪುಷ್ಪ ಗೃಹಿಣಿ. ಸಿನಿಮಾ ನಟನಾಗುವ ಕನಸಿನ ಹೊರತಾಗಿ ಯಶ್‌ಗೆ ಆಗ ಬೇರೆ ಬೆಂಬಲ ಇರಲಿಲ್ಲ. ತಾಯಿ ನಡೆಸುತ್ತಿದ್ದ ಸ್ಟೇಷನರಿ ಅಂಗಡಿಯಲ್ಲಿ ಕೆಲವೊಮ್ಮೆ ಇವರೂ ಕೂರುತ್ತಿದ್ದರು. ಆಗೆಲ್ಲಾ ಸಿನಿಮಾದ್ದೇ ಧ್ಯಾನ. SSLC ಓದುವ ಹೊತ್ತಿಗೆ ನಟನಾಗುವ ಗೀಳು ಹೆಚ್ಚಾಯ್ತು. ಮನೆಯಿಂದ ಹೊರಟು ಬೆಂಗಳೂರು ಸೇರಿದರು. ಗೊತ್ತು – ಗುರಿ ಇಲ್ಲದೆ ಅಲೆಯುತ್ತಿದ್ದ ಹುಡುಗನಿಗೆ ಮೊದಲ ಬೆಳಕಾಗಿದ್ದು ರಂಗಭೂಮಿ. ‘ಬೆನಕ’ ರಂಗತಂಡದ ಬ್ಯಾಕ್‌ಸ್ಟೇಜ್‌ನಲ್ಲಿ ಕೆಲಸ ಮಾಡುತ್ತಾ ನಿಧಾನವಾಗಿ ರಂಗದ ಮೇಲೆ ಪಾತ್ರಗಳನ್ನು ಮಾಡತೊಡಗಿದರು.

ರಂಗಭೂಮಿ ಅನುಭವ ಸೀರಿಯಲ್‌ಗೆ ಕರೆತಂದಿತು. ‘ಉತ್ತರಾಯಣ’ ಸೀರಿಯಲ್‌ನೊಂದಿಗೆ ಟೀವಿ ಪ್ರವೇಶಿಸಿದ ಯಶ್‌ಗೆ ‘ನಂದಗೋಕುಲ’ ಹೆಸರು ತಂದುಕೊಟ್ಟಿತು. ಮುಂದೆ ‘ಮಳೆಬಿಲ್ಲು’, ‘ಪ್ರೀತಿ ಇಲ್ಲದ ಮೇಲೆ’ ಸೀರಿಯಲ್‌ಗಳಲ್ಲಿ ನಟಿಸಿದರು. ‘ಜಂಭದ ಹುಡುಗಿ’ ಚಿತ್ರದೊಂದಿಗೆ ಬೆಳ್ಳಿತೆರೆ ಪರಿಚಯವಾಯ್ತು. ಬೆಳೆಯುವ ಹಸಿವಿತ್ತು. ಸಿಕ್ಕ ಪಾತ್ರದಲ್ಲೇ ಗುರುತಿಸಿಕೊಂಡ ಹುಡುಗನಿಗೆ ‘ಮೊಗ್ಗಿನ ಮನಸ್ಸು’ ದೊಡ್ಡ ಯಶಸ್ಸು ತಂದುಕೊಟ್ಟಿತು. ಈ ಚಿತ್ರದಲ್ಲಿನ ಅವರ ಪಾತ್ರಕ್ಕೆ filmfare ಪ್ರಶಸ್ತಿಯ ಗರಿ!

‘ಮೊಗ್ಗಿನ ಮನಸ್ಸು’ ನಂತರ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದರೂ ಯಶ್‌ಗೆ ಹೊಸತೊಂದು ಇಮೇಜು ದೊರಕಿಸಿಕೊಟ್ಟಿದ್ದು ‘ಕಿರಾತಕ’. ಮರುವರ್ಷವೇ ‘ಲಕ್ಕಿ’ ಸಿನಿಮಾದ stylish ಲುಕ್‌ನಲ್ಲಿ ಮಿಂಚಿದರು. ಆ ವೇಳೆಗಾಗಲೇ ಯಶ್‌ರಿಗೆ ಲೇಡೀಸ್‌ ಫ್ಯಾನ್‌ ಫಾಲೋಯಿಂಗ್‌ ಸೃಷ್ಟಿಯಾಗಿತ್ತು. ಡ್ಯಾನ್ಸ್‌ನಲ್ಲೂ ಸೈ ಎನಿಸಿಕೊಂಡರು. ‘ಡ್ರಾಮಾ’, ‘ಗೂಗ್ಲಿ’ಯಲ್ಲಿ ಅಭಿಮಾನವನ್ನು ಎನ್‌ಕ್ಯಾಶ್‌ ಮಾಡಿಕೊಂಡ ಅವರಿಗೆ ಸೂಪರ್‌ಹಿಟ್‌ ‘ರಾಜಾಹುಲಿ’ ಮತ್ತೊಂದು ದೊಡ್ಡ ತಿರುವು! ಮುಂದೆ ದ್ವಿಪಾತ್ರದಲ್ಲಿದ್ದ ‘ಗಜಕೇಸರಿ’ಯಲ್ಲಿ ಅವರ ಕ್ಯಾನ್ವಾಸ್‌ ವಿಸ್ತರಿಸಿತು. ಇದಾದ ನಂತರ ತೆರೆಕಂಡ ‘ಮಿಸ್ಟರ್‌ ಅಂಡ್‌ ಮಿಸೆಸ್‌ ರಾಮಾಚಾರಿ’ ಬಹುದೊಡ್ಡ ಇಂಡಸ್ಟ್ರೀ ಹಿಟ್‌!

‘ಮಾಸ್ಟರ್‌ ಪೀಸ್‌’, ‘ಸಂತು stright forward’ ಚಿತ್ರಗಳಲ್ಲಿ ತಾವೊಬ್ಬ ಒಳ್ಳೆಯ ಎಂಟರ್‌ಟೇನರ್‌ ಎಂದು ಮತ್ತೊಮ್ಮೆ ಸಾಬೀತು ಮಾಡಿದರು. ಇದಾಗಿ ಎರಡು ವರ್ಷಗಳಲ್ಲಿ ಯಶ್‌ ತೆರೆಗೆ ಮರಳಿದ್ದು ‘KGF’ ಚಿತ್ರದೊಂದಿಗೆ. ಮುಂದಿನದ್ದು ಇತಿಹಾಸ! sandalwood ಮಾರ್ಕೆಟ್‌ ವಿಸ್ತರಿಸಿತು. ಯಶ್‌ PAN ಇಂಡಿಯಾ Star ಆದರು. ಈ ಯಶಸ್ಸಿನ ಬೆನ್ನಲ್ಲೇ ‘KGF 2’ ಸರಣಿ ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿತು.

ನಟನಾಗಿ ಬೆಳೆಯುವ ಹಂತದಲ್ಲಿ ಉದ್ಯಮದ ಯಾರೊಂದಿಗೂ ಮನಸ್ತಾಪ ಮಾಡಿಕೊಂಡವರಲ್ಲ ಯಶ್‌. ಗಾಸಿಪ್‌ಗಳಿಗೆ ಸಿಲುಕದ ಜಾಗರೂಕ ನಡೆ ಅವರದ್ದು. ‘ಮೊಗ್ಗಿನ ಮನಸ್ಸು’ ಸಿನಿಮಾದ ಗೆಳತಿ ರಾಧಿಕಾ ಪಂಡಿತ್‌ ಬಾಳ ಸಂಗಾತಿಯಾದರು. ಈ ಲವ್ಲೀ ದಂಪತಿಗೆ ಇಬ್ಬರು ಮಕ್ಕಳು. ಊರಿನಿಂದ ಹೊರಟು ಬೆಂಗಳೂರಿನ ಬಸ್‌ ಹತ್ತಿದಾಗಲೇ ಯಶ್‌ ಗುರಿ ಸ್ಪಷ್ಟವಿತ್ತು. ಕಠಿಣ ಪರಿಶ್ರಮದ ಜೊತೆ ಅದೃಷ್ಟವೂ ಜೊತೆಯಾಯ್ತು. ಥಿಯೇಟರ್‌ಗಳ ಮುಂದೆ ಅವರ ಕಟೌಟ್‌ಗಳು ಎದ್ದುನಿಂತವು. ಆಗ ಸ್ಟೇಷನರಿ ಅಂಗಡಿಯಲ್ಲಿ ಕುಳಿತು ಸಿನಿಮಾ ನಟನಾಗುವ ಕನಸು ಕಂಡಿದ್ದ ನವೀನ್‌ ಕುಮಾರ್‌ ಗೌಡ ಈಗ ನ್ಯಾಷನಲ್‌ ಸ್ಟಾರ್‌!

LEAVE A REPLY

Connect with

Please enter your comment!
Please enter your name here