ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದ ‘ಎತ್ತರ ಝಂಡಾ’ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಕುರಿತ ಹಾಡಿಗೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಿದ್ದು, ಜ್ಯೂನಿಯರ್ ಎನ್ಟಿಆರ್, ರಾಮ್ ಚರಣ್ ಮತ್ತು ಅಲಿಯಾ ಭಟ್ ಅವರ ಮೇಲೆ ಚಿತ್ರಣಗೊಂಡಿದೆ.
‘RRR’ ತಂಡ ಚಿತ್ರದ ‘ಸೆಲೆಬ್ರೇಷನ್ ಆಂಥೆಮ್’ ಎಂದೇ ಕರೆಸಿಕೊಂಡಿರುವ ‘ಎತ್ತರ ಝಂಡಾ’ ವೀಡಿಯೋ ಸಾಂಗ್ ಬಿಡುಗಡೆಗೊಳಿಸಿದೆ. ಈ ಹಾಡಿನಲ್ಲಿ ಜ್ಯೂನಿಯರ್ ಎನ್ಟಿಆರ್, ರಾಮ್ ಚರಣ್ ತೇಜಾ ಮತ್ತು ಅಲಿಯಾ ಭಟ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿತ್ತಾ ಹಾಡು ಕುಣಿದಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ವಿಶಾಲ್ ಮಿಶ್ರಾ, ಪೃಥ್ವಿ ಚಂದ್ರ, ಸಾಹಿತಿ ಚಗಾಂಟಿ, ಹಾರಿಕಾ ನಾರಾಯಣ್ ಹಾಡಿದ್ದಾರೆ. ಚಿತ್ರದ ಇಬ್ಬರು ಹೀರೋಗಳೂ ಉತ್ತಮ ನೃತ್ಯಪಟುಗಳು. ಈ ಹಿಂದಿನ ಅವರ ‘ನಾಟ್ಟು ನಾಟ್ಟು’ ಹಾಡಿನಂತೆ ‘ಎತ್ತರ ಝಂಡಾ’ ಕೂಡ ಕೊರಿಯೋಗ್ರಫಿಯಿಂದ ಗಮನ ಸೆಳೆಯುತ್ತದೆ. ಆದರೆ ‘ನಾಟ್ಟು ನಾಟ್ಟು’ ಹಾಡು ಸೃಷ್ಟಿಸಿದ ಕ್ರೇಝ್ ಹೊಸ ಹಾಡಿನಲ್ಲಿಲ್ಲ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿನ ಕಾಮೆಂಟ್ಗಳು.
ಭಾರತೀಯ ಸಿನಿಮಾ ಸಂದರ್ಭದಲ್ಲೇ ‘RRR’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಕೋವಿಡ್ನಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗಿತ್ತು. ಅಂತಿಮವಾಗಿ ಮಾರ್ಚ್ 25ರಂದು ಸಿನಿಮಾ ಥಿಯೇಟರ್ಗೆ ಬರುತ್ತಿದೆ. ಚಿತ್ರದ ಪ್ರೀ ರಿಲೀಸ್ ಇವೆಂಟ್ ಅನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗಿದೆ. ಕರ್ನಾಟದಲ್ಲಿ ಸಿನಿಮಾದ ವಿತರಣೆ ಹಕ್ಕು ಪಡೆದಿರುವ KVN ಪ್ರೊಡಕ್ಷನ್ಸ್ನವರು ಚಿತ್ರದ ನಿರ್ಮಾಪಕರೊಡಗೂಡಿ ಈ ಮೆಗಾ ಇವೆಂಟ್ ನಡೆಸುತ್ತಿದ್ದಾರೆ. ಮಾರ್ಚ್ 19ರಂದು ಚಿಕ್ಕಬಳ್ಳಾಪುರ ಸಮೀಪದ ಅಗಲಗುರ್ಕಿಯಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಸಿನಿಮಾ ತಂಡದ ಎಲ್ಲರೂ ಪಾಲ್ಗೊಳ್ಳಲಿದ್ದಾರೆ. ಈ ಇವೆಂಟ್ ಮೂಲಕ ಮತ್ತೊಂದು ದಾಖಲೆ ಬರೆಯಲು ಹೊರಟಿದ್ದಾರೆ ನಿರ್ದೇಶಕ ರಾಜಮೌಳಿ. ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾ ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗಲಿದೆ.