ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ‘ರುದ್ರ ಗರುಡ ಪುರಾಣ’ದಲ್ಲಿ ಇರಲಿವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಂದೀಶ್‌. ರಿಷಿ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿರುವ ಸಿನಿಮಾ ಸೆಟ್ಟೇರಿದೆ. ಪ್ರಿಯಾಂಕಾ ಕುಮಾರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಕವಲುದಾರಿ ಚಿತ್ರದ ನಂತರ ಮತ್ತೆ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ. ಅದೇ ಜಾನರ್‌ನ ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಂದೀಶ್ ಅವರು ಕಥೆ ಕೇಳಿದಾಗ ಬಹಳ ಇಷ್ಟವಾಯ್ತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಚಿತ್ರದಲ್ಲಿವೆ’ ಎನ್ನುತ್ತಾರೆ ನಟ ರಿಷಿ. ಅವರು ಹೀರೋ ಆಗಿ ನಟಿಸುತ್ತಿರುವ ‘ರುದ್ರ ಗರುಡ ಪುರಾಣ’ ಸಿನಿಮಾ ಸೆಟ್ಟೇರಿದೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ರುದ್ರ. ನಟ ನೀನಾಸಂ ಸತೀಶ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿ ಶುಭ ಹಾರೈಸಿದರು.

ಸಿನಿಮಾ ಮಾಧ್ಯಮ ಜನರ ಮೇಲೆ ಉತ್ತಮ ಪರಿಣಾಮ ಬೀರಬೇಕು ಎನ್ನುವ ನಿಲುವು ಹೊಂದಿರುವವರು ಈ ಚಿತ್ರದ ನಿರ್ದೇಶಕ ಕೆ ಎಸ್‌ ನಂದೀಶ್‌. ಈ ಹಿಂದಿನ ಅವರ ‘ಡಿಯರ್‌ ವಿಕ್ರಂ’ ಚಿತ್ರಗಳ ಕಥಾವಸ್ತು ಕೂಡ ಹೀಗೇ ಇತ್ತು. ಈ ಸಿನಿಮಾಗೆ ಅವರು ಕತೆ, ಚಿತ್ರಕಥೆ ಮಾಡಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ‘ಪುನೀತ್‌ ರಾಜಕುಮಾರ್‌ ಅಭಿನಯದ ‘ಪೃಥ್ವಿ’ ಸಿನಿಮಾ ಹಲವರಿಗೆ ಸ್ಫೂರ್ತಿಯಾಗಿದೆ. ನಾನು ಆ ಚಿತ್ರದ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೆ.‌ ನಾವು ಮಾಡುವ ಚಿತ್ರ, ಈ ರೀತಿ ಜನರಿಗೆ ತಲುಪಿದಾಗ ಮುಂದೆ ಇಂತಹ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವ ಹುಮ್ಮಸ್ಸು ಬರುತ್ತದೆ’ ಎನ್ನುತ್ತಾರೆ ನಿರ್ದೇಶಕ ನಂದೀಶ್‌. ಚಿತ್ರದ ನಾಯಕಿಯಾಗಿ ಪ್ರಿಯಾಂಕಾ ಕುಮಾರ್‌ ಅಭಿನಯಿಸುತ್ತಿದ್ದು, ಉದ್ಯಮಿ ಲೋಹಿತ್‌ ಚಿತ್ರದ ನಿರ್ಮಾಪಕ.

Previous articleನಿಧಾನ ಗತಿಯಾದರೂ ತಾರ್ಕಿಕ Spy – Detective ‘ದಿ ನೈಟ್ ಏಜೆಂಟ್’
Next articleಒಡಿಸಾ ಟ್ರೈನ್‌ ಆಕ್ಸಿಡೆಂಟ್‌ | ಸಿನಿಮಾ ತಾರೆಯರ ಸಂತಾಪ

LEAVE A REPLY

Connect with

Please enter your comment!
Please enter your name here