ಕೆ ಎಸ್ ನಂದೀಶ್ ನಿರ್ದೇಶನದ ‘ರುದ್ರ ಗರುಡ ಪುರಾಣ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದಲ್ಲಿ ನಟ ರಿಷಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಿಯಾಂಕ ಕುಮಾರ್ ಚಿತ್ರದ ನಾಯಕಿ. ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ನಟ ರಿಷಿ ಹೀರೋ ಆಗಿ ನಟಿಸಿರುವ ‘ರುದ್ರ ಗರುಡ ಪುರಾಣ’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಕ್ಲೈಮ್ಯಾಕ್ಸ್ ಫೈಟ್ ಅನ್ನು ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಆರು ದಿನಗಳ ಕಾಲ ಚಿತ್ರಿಸಿಕೊಳ್ಳುವುದರೊಂದಿಗೆ ಶೂಟಿಂಗ್ ಪೂರ್ಣಗೊಂಡಿದೆ. ಚಿತ್ರಕ್ಕೆ ಒಟ್ಟು 70 ದಿನಗಳ ಚಿತ್ರೀಕರಣ ನಡೆದಿದೆ. ‘ಕವಲು ದಾರಿ’ ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಕೆಲಸದಿಂದ ಕ್ರೈಂ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡಲು ಆಸೆ ಪಡುವ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದ ರಿಷಿ ‘ರುದ್ರ ಗರುಡ ಪುರಾಣ’ ಚಿತ್ರದಲ್ಲಿ ಕ್ರೈಂ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ‘ರುದ್ರ ಗರುಡ ಪುರಾಣ’ ಆಕ್ಷನ್ ಡ್ರಾಮಾ ಜಾನರ್ ಸಿನಿಮಾ. ಟೆಕ್ನಿಕಲ್ ವಿಚಾರದಲ್ಲಿ ಹಲವಾರು ಹೊಸತನಗಳನ್ನು ಅಳವಡಿಸಿಕೊಂಡು ಫೈಟ್ ಮತ್ತು ಸಾಂಗ್‌ಗಳನ್ನು ಚಿತ್ರಿಸಿರುವುದು ಈ ಸಿನಿಮಾದ ವಿಶೇಷ. ‘ಡಿಯರ್ ವಿಕ್ರಂ’ ಚಿತ್ರದ ನಿರ್ದೇಶಕ ಕೆ ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ಇತ್ತೀಚೆಗೆ ‘ಕಾಟೇರ’ ಚಿತ್ರದ ಖಳಪಾತ್ರದಲ್ಲಿ ಅಭಿನಯಿಸಿ ಖ್ಯಾತರಾದ ವಿನೋದ್ ಆಳ್ವ, ಅವಿನಾಶ್, ಕೆ ಎಸ್ ಶ್ರೀಧರ್, ಗಿರಿ, ಕೆ ಆರ್ ಪೇಟೆ ಶಿವು. ಮಜಾ ಭಾರತ ಜಗಪ್ಪ, ಅಶ್ವಿನಿ ಗೌಡ, ಗೌತಮ್ ಮೈಸೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಟ ರಿಷಿ ಇತ್ತೀಚೆಗೆ ಸ್ಟ್ರೀಮ್ ಆದ ‘ಸೈತಾನ್’ ತೆಲುಗು ವೆಬ್ ಸರಣಿಯಲ್ಲಿ ನಟಿಸಿದ್ದರು. ಈ ಪಾತ್ರಕ್ಕೆ ಅವರಿಗೆ ‘ಅತ್ಯುತ್ತಮ ಖಳನಟ’ ಪ್ರಶಸ್ತಿ ಸಂದಿತ್ತು. ಸದ್ಯ ಅವರೀಗ ಬಾಲಕೃಷ್ಣ ಅವರ ಸಿನಿಮಾ ಸೇರಿದಂತೆ ಕೆಲವು ತೆಲುಗು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ‘ರುದ್ರ ಗರುಡ ಪುರಾಣ’ ಚಿತ್ರವನ್ನು ಮೊದಲಿಗೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿ ನಂತರ ಇತರೆ ಭಾಷೆಗಳಲ್ಲೂ ರಿಲೀಸ್ ಮಾಡುವುದು ಚಿತ್ರತಂಡದ ಯೋಜನೆ. ಇದೇ ತಿಂಗಳಲ್ಲಿ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ.