ಸಂಚಿಕೆಯಿಂದ ಸಂಚಿಕೆಗೆ ಕಿಲ್ಲರ್ರ್ಸ್, ಸೈಕೋ ಕಿಲ್ಲರ್ರ್ಸ್, ಸ್ಮಗ್ಲರ್ಸ್ ಹಂತಕ್ಕೂ ತಲುಪುವ ಸರಣಿ ಕೊನೆಗೆ ರುದ್ರನದೇ ಮುಖ್ಯ ಭೂಮಿಕೆಯ ಕ್ರೈಮ್ ಕಹಾನಿಯಾಗಿ ತೆರೆದುಕೊಳ್ಳುತ್ತದೆ. ಸರಣಿ DisneyPlus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.
Rudra – The Edge Of Darkness – ಇದು ಕತ್ತಲೆ ಬೆಳಕಿನ ಆಟ. ರುದ್ರವೀರ್ ಸಿಂಗ್‌ನ ವೈಯಕ್ತಿಕ ಮತ್ತು ವೃತ್ತಿಬದುಕು ಹಾಗು ಆರು ಕರಾಳ ಕ್ರೈಂ ಕತೆಗಳ ನೈಪುಣ್ಯ ನೇಯ್ಗೆ. ರುದ್ರನಿಗೆ ಕೋಪ ಬಂದ್ರೆ, ಅವನು ನೃತ್ಯ ಮಾಡಲ್ಲ. ಬದಲಿಗೆ ಕೈಗೆ ಸಿಕ್ಕಿದ್ದನ್ನೆಲ್ಲ ಪುಡಿಪುಡಿ ಮಾಡುತ್ತಾನೆ. ಅಲ್ಲಿ ಗಂಗೆ – ಗೌರಿ ಆದ್ರೆ ಇಲ್ಲಿ ಆಲಿಯಾ ಮತ್ತು ಶೈಲ. ಈ ರುದ್ರವೀರ್‌ಸಿಂಗ್ ಕೂಡ ರುದ್ರನೇ, ಆದರೆ ಮಾನಸಿಕವಾಗಿ. ಇವನು ಸಂಹಾರಕನಲ್ಲ, ಇತ್ತ ಶಿಸ್ತುಬದ್ಧ ಕಾನೂನು ಪರಿಪಾಲಕನೂ ಅಲ್ಲ. ಆ ರುದ್ರನಿಗೂ ಈ ರುದ್ರನಿಗೂ ಯಾವ ಹೋಲಿಕೆಗಳೂ ಇಲ್ಲ, ಆದರೆ ಕಲ್ಪಿಸಿಕೊಳ್ಳಬಹುದು ಅಷ್ಟೆ.
ದಿಲ್ಲಿ ಸ್ಪೆಷಲ್ ಕ್ರೈಂ ಯೂನಿಟ್‌ನ ಸ್ಪೆಷಲ್ ಆಫೀಸರ್ ಡಿಸಿಪಿ ರುದ್ರವೀರ್ ಸಿಂಗ್ ನಡೆಸುವ ಕಾರ್ಯಚರಣೆ ಮತ್ತು ಅವನ ವೈಯಕ್ತಿಕ ಬದುಕಿನ ಸುತ್ತಲೂ ಸುತ್ತವಂತಹ ಕತೆ. ಸಂಚಿಕೆಯಿಂದ ಸಂಚಿಕೆಗೆ ಕಿಲ್ಲರ್ರ್ಸ್, ಸೈಕೋ ಕಿಲ್ಲರ್ರ್ಸ್, ಸ್ಮಗ್ಲರ್ಸ್ ಹಂತಕ್ಕೂ ತಲುಪುವ ಸರಣಿ ಕೊನೆಗೆ ರುದ್ರನದೇ ಮುಖ್ಯ ಭೂಮಿಕೆಯ ಕ್ರೈಮ್ ಕಹಾನಿಯಾಗಿ ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೂ ಪ್ರೇಕ್ಷಕರಲ್ಲಿದ್ದ ಸಾಮಾನ್ಯ ಕುತುಹಲ ಕೆರಳಿ ಕೊನೆಯ ಎರಡು ಸಂಚಿಕೆಗಳನ್ನು ಏಕಾಗ್ರತೆಯಿಂದ ನೋಡಿಸಿಕೊಳ್ಳುವಂತೆ ಮಾಡುತ್ತದೆ.
ರುದ್ರ ಒಬ್ಬ ಜೀನಿಯಸ್, ಕ್ರೈಂ ಸ್ಪಾಟ್ ಮಹಜರ್ ಅಥವ ಕೇಸ್ ಪೈಲ್ ನೋಡಿಯೇ ಅಪರಾಧಿ ಎಂಥವನು ಎಂಬುದನ್ನು ಅನಲೈಸ್ ಮಾಡುತ್ತಾನೆ. ಅದು ಅವನಂದುಕೊಂಡಂತೆಯೇ ಇರುತ್ತದೆ. ಕೆಲವೊಮ್ಮೆ ಪ್ರೇಕ್ಷಕ ರುದ್ರನಂತೆಯೇ ಆಲೋಚಿಸಿ ಗೆಸ್ ಮಾಡಿದರೆ.. ರುದ್ರ ಪ್ರೇಕ್ಷಕರಿಗಿಂತಲೂ ತಳಮಟ್ಟ ತಲುಪಿ ಸಿಂಪಲ್ಲಾಗಿ ಕ್ಲಿಯರ್ ಮಾಡಿಬಿಡುತ್ತಾನೆ. ರುದ್ರ ಪ್ರತಿ ಕೇಸ್‌ನಲ್ಲೂ ಅಪರಾಧಿಯನ್ನು ಹಿಡಿಯಲು ಅಪರಾಧಿಯಂತೆಯೇ ಕ್ರಿಮಿನಲ್ಲಾಗಿ ಆಲೋಚಿಸುತ್ತಾನೆ. ಅವನಲ್ಲಿಯೂ ಸ್ನೇಹ, ಪ್ರೀತಿ, ಮಾನವೀಯತೆ ಜೊತೆಗೊಂದಷ್ಟು ಬದ್ಧತೆಗಳಿವೆ. ಅವುಗಳೆಲ್ಲದರೊಂದಿಗೆ ತನ್ನ ವೃತ್ತಿಯನ್ನು ಹೇಗೆ ನಿಭಾಯಿಸುತ್ತಾನೆ ಅನ್ನೋದೇ ಒಂದು ರೀತಿಯ ಕೌತುಕ. ಮೊದಲ ಕ್ರೈಂ ಸ್ಟೋರಿಯ ಅಂತ್ಯ ಸಂಪೂರ್ಣವಾಗಿ ಪರಿಹರಿಸಿಲ್ಲ. ಅದು ಯಾಕೆ? ಎನ್ನುವುದು ಮುಂದಿನ ಸಂಚಿಕೆಗಳಲ್ಲಿ ತಿಳಿಸುತ್ತಾ ಹೋಗಿದ್ದಾರೆ. ಆದರೂ ಅದು ಅಸ್ಪಷ್ಟ ಅನಿಸುತ್ತೆ. ಅಪರಾಧಿ ಯಾರು ಎಂಬುದು ತಿಳಿಯುವಂತೆಯೇ ಸಂಬಾಳಿಸಿದ್ದರೂ, ಯಾಕೆ? ಏನು? ಎನ್ನುವುದನ್ನು ಅವರು ದ್ವಂದ್ವ ಸಂಭಾಷಣೆಯಲ್ಲಿ ವಾಚ್ಯವಾಗಿ ಹೇಳಿದ್ದರೂ ಅದು ಸಂಪೂರ್ಣ ಅರ್ಥವಾಗುವುದು ಕಷ್ಟ.
ಇದೊಂದು ಸೈಕಲಾಜಿಕಲ್ ಕ್ರೈಂ ವೆಬ್ ಸರಣಿ ಆದರೂ ಇಲ್ಲಿ ಪ್ರೀತಿ, ಸ್ನೇಹ, ಮದುವೆ, ಸಂಬಂಧದ ಕುರಿತು ಗಾಢವಾಗಿ ಆಲೋಚಿಸುವಂತೆ ಮಾಡುವುದು ಇದರ ವಿಶೇಷತೆ. ಸರಣಿಯ ಯಾವ ಹಂತದಲ್ಲೂ ನಾನ್‌ಸೆನ್ಸ್ ಅನಿಸುವಂಥದ್ದು ಇಲ್ಲದಿದ್ದರೂ ಎಲ್ಲೋ ಒಮ್ಮೊಮ್ಮೆ ರಕ್ತಪಾತ ಅತಿಯಾಯ್ತು ಎನಿಸಬಹುದು. ಸಂಭಾಷಣೆ ಕೆಲವೊಮ್ಮೆ ಖಾರ ಎನಿಸಿದರೂ ಪಂಚಿಂಗ್ ಆಗಿರುವುದರಿಂದ ಇಷ್ಟವಾಗಬಹುದು. ನಟಿ ರಾಶಿ ಖನ್ನಾ ಅವರು ಪಾತ್ರದ ಅಗತ್ಯತೆಗಿಂತಲೂ ಹೆಚ್ಚು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಕಲ್ಸೆಕರ್, ಬಾಸ್ ಆದರೂ ಜೀನಿಯಸ್ ಅಲ್ಲದಂಥ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರುದ್ರನ ಪತ್ನಿ ಪಾತ್ರಕ್ಕೆ ಇಶಾ ಡಿಯೋಲ್ ಪರ್ಫೆಕ್ಟ್ ಆಯ್ಕೆ. ಬಹುಶಃ ಮಣಿರತ್ನಂ ಅವರ ‘ಯುವ’ ಚಿತ್ರದಲ್ಲಿ ಮತ್ತು ‘ಮೈ ಐಸಾ ಹೀ ಹೂಂ’ ಚಿತ್ರಗಳಲ್ಲಿ ಅಜಯ್ ದೇವಗನ್ ಜೋಡಿಯಾಗಿ ಕಾಣಿಸಿಕೊಂಡಿದ್ದ ಕಾರಣವೂ ಇರಬಹುದು.
ಪ್ರೀತಿ, ಸ್ನೇಹ, ಮೌನ, ಆಲೋಚನೆ ಮತ್ತು ಆಕ್ರೋಶ ಎಲ್ಲವನ್ನೂ ಹೊಂದಿರುವ ರುದ್ರನ ಪಾತ್ರ ಅಜಯ್ ದೇವಗನ್ ಅವರಿಗೆ ಚೆನ್ನಾಗಿ ಹೊಂದುತ್ತದೆ. ಅಥವಾ ಅವರೇ ಅದಕ್ಕೆ ಹೊಂದಿಕೊಂಡಿದ್ದಾರೆ ಎನ್ನಬಹುದು. ಎಂದಿನಂತೆ ತಮ್ಮ ಮನೋಜ್ಞ ಅಭಿನಯದಿಂದ ಡಿಸಿಪಿ ಗೌತಮ್ ಪಾತ್ರದಲ್ಲಿ ಅಥುಲ್ ಕುಲಕರ್ಣಿ ಮಿಂದೆದ್ದಿದ್ದಾರೆ. ರುದ್ರ ಕಾರ್ಯಚರಣೆ ನಡೆಸುವಂಥ ಕ್ರೈಂ ಸ್ಟೋರಿಗಳು ಇಷ್ಟವಾಗದಿದ್ದರೂ, ರುದ್ರನ ಪಾತ್ರ ಅವನ ವೈಯಕ್ತಿಕ ಜೀವನದ ಎಪಿಸೋಡ್‌ಗಳು ಇಷ್ಟವಾಗಿ ಮನದಲ್ಲಿ ಉಳಿಯಬಹುದು. ರುದ್ರನ ವ್ಯಕ್ತಿತ್ವ, ಅವನು ಪ್ರೀತಿಸುವ ರೀತಿ ಇಷ್ಟವಾಗಬಹುದು. ಒಟ್ಟಾರೆಯಾಗಿ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಜೊತೆಗೆ ಮಾನವೀಯ ಸಂಬಂಧಗಳ ಕುರಿತಾಗಿ ಚರ್ಚಿಸಬಹುದಾದ ಸೀರೀಸ್ ನೋಡಲಿಚ್ಚಿಸುವವರಿಗೆ ಇದು ಉತ್ತಮ ಆಯ್ಕೆ. ಈ ಸರಣಿ DisneyPlus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ. ಅಂದಹಾಗೆ ಇದು ಅಜಯ್ ದೇವಗನ್‌ರಿಗೆ ಚೊಚ್ಚಲ ಓಟಿಟಿ ಪ್ರಾಜೆಕ್ಟ್. BBCಯ ಜನಪ್ರಿಯ ಸರಣಿ ‘Luther’ ರೀಮೇಕ್.