ಈ ಆಂಥಾಲಜಿಯ ಒಂದೊಂದು ಚಿತ್ರಕ್ಕೂ ಒಂದೊಂದು ನಿರೂಪಣಾ ತಂತ್ರ. ಆ ಕಾರಣಕ್ಕೂ ಚಿತ್ರ ಮುಖ್ಯವಾಗುತ್ತದೆ. ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಆಗಬೇಕು. ಇನ್ನೂ ಹೆಚ್ಚು ಜನ ಈ ಚಿತ್ರ ನೋಡಬೇಕು. ಸ್ವಾತಂತ್ರದ ಹೋರಾಟಕ್ಕೆ ಅದೆಷ್ಟು ಆಯಾಮಗಳು… ಅದು ವೈಯಕ್ತಿಕವೂ ಹೌದು, ಸಾರ್ವಜನಿಕವೂ ಹೌದು. ‘ಫ್ರೀಡಂ ಫೈಟ್‌’ ಮಲಯಾಳಂ ಸಿನಿಮಾ SonyLIVನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ಮಾನವ ಚೈತನ್ಯವನ್ನು ಬಂಧಿಸುವ ಸಂಪ್ರದಾಯವಾದ ಮತ್ತು ಅದನ್ನು ಮುರಿವ ಬಂಡುಕೋರತನಗಳ ನಡುವಣ ಘರ್ಷಣೆಯಿಂದಲೇ ಲೋಕದ ಚರಿತ್ರೆ ರೂಪುಗೊಂಡಿದೆ’ ಎಂದು ರಹಮತ್ ತರೀಕೆರೆಯವರು ತಮ್ಮ ಒಂದು ಲೇಖನದಲ್ಲಿ ಬರೆಯುತ್ತಾರೆ. ಈ ಸಂಪ್ರದಾಯವಾದ ಬೇರೆಬೇರೆ ರೂಪಗಳಲ್ಲಿರಬಹುದು. ಒಮ್ಮೊಮ್ಮೆ ಪಿತೃಪ್ರಧಾನ ಮನೋಭಾವ, ಒಮ್ಮೊಮ್ಮೆ ಹಣ, ಅಧಿಕಾರ, ಒಮ್ಮೊಮ್ಮೆ ಜಾತಿ ಈ ಸ್ಥಾನದಲ್ಲಿರುತ್ತದೆ. ಫ್ರೀಡಂಫೈಟ್ ಇವುಗಳನ್ನು ಕುರಿತು ಮಾತನಾಡುತ್ತದೆ. ಇಲ್ಲಿನ ಒಂದು ಕಥೆಯ ವಿಶೇಷ ಎಂದರೆ ಅದು ವಯಸ್ಸಾದ ತಂದೆ ತಾಯಿಯರ ಮೇಲೆ ಮಕ್ಕಳು ಸ್ಥಾಪಿಸಲು ಯತ್ನಿಸುವ ಅಧಿಕಾರ ಸಂಬಂಧವನ್ನು ಕುರಿತು ಸಹ ಮಾತನಾಡುತ್ತದೆ.

ಕೋವಿಡ್ ನಂತರ ಓಟಿಟಿ ಸುಗ್ಗಿ ಅನುಭವಿಸಿದರೆ, ಅದರಲ್ಲಿ ಮುನ್ನೆಲೆಗೆ ಬಂದ ಒಂದು ನಿರೂಪಣಾ ಪ್ರಕಾರವೇ ಕಥೆಗಳ ಗುಚ್ಛ ಅಥವಾ ಆಂಥಾಲಜಿ ಕಥೆಗಳು. ಒಂದು ವಿಚಾರ ಅಥವಾ ವಸ್ತುವನ್ನು ಇಟ್ಟುಕೊಂಡು ಹಲವು ಕಥೆಗಳನ್ನು ಅದರ ಸುತ್ತಲೂ ಹೆಣೆಯುವ ಅನೇಕ ಕಥೆಗಳು ಓಟಿಟಿ ವೇದಿಕೆಯನ್ನು ಏರಿದವು. ‘ಪುದಮ್ ಪುದು ಕಾಲೈ’, ‘ನವರಸ’, ‘ಪಾವ ಕಥೈಗಳ್’, ‘ಆಣುಂ ಪೆಣ್ಣು’, ಕನ್ನಡದ ‘ಕಥಾಸಂಗಮ’, ‘ಹ್ಯಾಪ್ಪಿ ನ್ಯೂ ಇಯರ್’, ತೆಲುಗಿನ ‘ಪಿಟ್ಟಕಥಲು’ ಇತ್ಯಾದಿ. ಅವುಗಳಲ್ಲಿ ಕೆಲವು ಹಿಟ್, ಇನ್ನು ಕೆಲವು ಮಿಸ್. ಹಿಟ್ ಆದ ಸರಣಿಯಲ್ಲಿ ಸಹ ಎಲ್ಲಾ ಕಥೆಗಳೂ ಉತ್ತಮ ಎಂದು ಹೇಳುವಂತಿಲ್ಲ. ಆದರೆ ಮೊನ್ನೆ ನೋಡಿದ ‘ಫ್ರೀಡಂಫೈಟ್’ ಇಡಿಯಾಗಿ ಹಿಟ್ ಮಾತ್ರವಲ್ಲ, ಬಿಡಿಬಿಡಿಯಾಗಿಯೂ ಆ ಕಥೆಗಳು ನಮ್ಮನ್ನು ತೀವ್ರವಾಗಿ ಕಲಕುತ್ತವೆ, ಪ್ರಶ್ನೆ ಕೇಳುತ್ತವೆ, ನಗಿಸುತ್ತವೆ, ನಿಟ್ಟುಸಿರಿಡುವಂತೆ ಮಾಡುತ್ತವೆ.

ಕಡೆಯ ಕಥೆ ಮಾತ್ರ ನಮ್ಮನ್ನು ಇನ್ನಿಲ್ಲದಂತೆ ಘಾಸಿಗೊಳಿಸಿ ನಿದ್ರಿಸದಂತೆ ಮಾಡುತ್ತದೆ. ಬಹುಶಃ ಇದು ಥಿಯೇಟರ್ ಜಗತ್ತಿನಲ್ಲಿ ಸಾಧ್ಯವಾಗದ ಚಿತ್ರ. ಓಟಿಟಿ ಒದಗಿಸಿಕೊಡುವ ಸ್ಥಳಾವಕಾಶವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡ ಚಿತ್ರ. ‘ದ ಗ್ರೇಟ್ ಇಂಡಿಯನ್ ಕಿಚನ್’ ನಿರ್ದೇಶಿಸಿದ ಜಿಯೋ ಬೇಬಿ ಇದನ್ನು ನಮ್ಮ ಮುಂದಿಡುತ್ತಾರೆ. ಬೇರೆಬೇರೆ ನಿರ್ದೇಶಕರು ಈ ಕಥೆಗಳನ್ನು ನಿರ್ದೇಶಿಸಿದ್ದು, ಒಂದು ಕಥೆಯನ್ನು ಸ್ವತಃ ಜಿಯೋ ಬೇಬಿ ನಿರ್ದೇಶಿಸಿದ್ದಾರೆ. ಇಲ್ಲಿ ಒಟ್ಟು 5 ಕಥೆಗಳಿವೆ. ‘Geethu Unchained’, ‘Unorganised’, ‘Ration’, ‘Old Age Home’ ಮತ್ತು ‘Pra.Thu.Mu’. ಒಂದೊಂದು ಚಿತ್ರವೂ ಒಂದೊಂದು ವಿಷಯವನ್ನು ಕೈಗೆತ್ತಿಕೊಂಡು ಚರ್ಚಿಸುತ್ತದೆ. ಮೇಲೆ ರಹಮತ್ ತರೀಕೆರೆಯವರು ಹೇಳಿರುವಂತೆ ಇವೆಲ್ಲವೂ ಸಂಪ್ರದಾಯವನ್ನು ಮುರಿವ ಬಂಡುಕೋರತನದ ನೆಲೆಗಳಿಂದಲೇ ಹುಟ್ಟಿವೆ, ಹಾಗಾಗಿಯೇ ಇದು ಲೋಕದ ಚರಿತ್ರೆಯೂ ಆಗುತ್ತದೆ.

ಮೊದಲ ಕಥೆ ‘Geethu Unchained’. ಗೀತು ಹದಿವಯಸ್ಸಿಗೆ ಸಹಜವಾದ ಹಲವಾರು ಗೊಂದಲ, ಅಭದ್ರತೆ, ಅನಿಶ್ಚಿತತೆಗಳಲ್ಲಿ ತೊಳಲಾಡುವ ಹುಡುಗಿ. ಮನೆಯಲ್ಲಿ ಅವಳು ಹಾಕುವ ಬಟ್ಟೆಯನ್ನು ಅವಳ ಅಮ್ಮ ನಿರ್ಧರಿಸಿದರೆ, ಆಫೀಸಿನಲ್ಲಿ ಅವಳ ಒಬ್ಬ ಕೊಲೀಗ್ ಸರಿಯಾಗಿ ಬರದ ಅವಳ ಇಂಗ್ಲಿಶ್ ಅನ್ನೇ ಕಾರಣವಾಗಿಟ್ಟುಕೊಂಡು ಅವಳನ್ನು ಹಂಗಿಸುತ್ತಾ ಇರುತ್ತಾಳೆ. ಗೀತುಗೆ ಎಷ್ಟು ಹಿಂಜರಿಕೆ ಎಂದರೆ ಬಸ್ಸಿನಲ್ಲಿ ಪ್ರಯಾಣ ಮಾಡುವ ಸಹಯಾತ್ರಿಕಳು, ಲಿಫ್ಟ್‌ನಲ್ಲಿ ಜೊತೆಯಾಗುವ ಅಜ್ಜ, ಹೋಟೆಲಿನಲ್ಲಿ ಭೇಟಿಯಾಗುವ ಪುಟ್ಟ ಹುಡುಗಿ ಎಲ್ಲರಿಗೂ ಸಹ ಇವಳು ತನ್ನೊಳಗೆ ತಾನೆ ಸಮಜಾಯಿಶಿ ಕೊಡುತ್ತಲೇ ಇರುತ್ತಾಳೆ.

ಹೀಗಾದರೆ ಹೇಗೆ, ಹಾಗೆ ಹೇಳಿದರೆ ಏನಾಗಬಹುದು ಎಂದು ಗುಣಾಕಾರ ಲೆಕ್ಕಾಚಾರ ಅವಳ ತಲೆಯಲ್ಲಿ ನಡೆದೇ ಇರುತ್ತದೆ. ಅವಳಿಗೆ ಎಂಗೇಜ್‌ಮೆಂಟ್‌ ಆಗಿರುತ್ತದೆ. ಆದರೆ ಆ ಹುಡುಗ ಇವಳ ಹೆಜ್ಜೆಹೆಜ್ಜೆಯನ್ನೂ ಕಂಟ್ರೋಲ್ ಮಾಡತೊಡಗಿದಾಗ ಅದನ್ನು ಮುರಿದುಕೊಂಡಿರುತ್ತಾಳೆ. ಅದರ ಅಪರಾಧವನ್ನೂ ಅವಳ ಮನೆಯವರು, ಆಫೀಸಿನವರು ಇವಳ ತಲೆಯ ಮೇಲೇ ಹೊರಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಅದೇ ಆಫೀಸಿನಲ್ಲಿ ಕೆಲಸ ಮಾಡುವ ಸಹೋದ್ಯೋಗಿ ಹೆದರುತ್ತಲೇ ಇವಳಿಗೆ ಪ್ರೊಪೋಸ್ ಮಾಡುತ್ತಾನೆ. ಅವಳು ಒಪ್ಪಿಕೊಳ್ಳುವ ಮೊದಲಿನ ಅವನ ಸಂಕೋಚ, ಹಿಂಜರಿಕೆಗಳನ್ನು ಮತ್ತು ಒಪ್ಪಿಕೊಂಡ ನಂತರ ಅವರ ಸಂಬಂಧದಲ್ಲಿ ಬದಲಾಗುವ ಅಧಿಕಾರದ ಸಮೀಕರಣವನ್ನು ನಿರ್ದೇಶಕರು ಅತ್ಯಂತ ಸ್ಪಷ್ಟವಾಗಿ ಕಟ್ಟಿಕೊಡುತ್ತಾರೆ. ಅವನೀಗ ಅವಳನ್ನು ‘ಗೆದ್ದವನು’! ಅವಳನ್ನು ಕಂಟ್ರೋಲ್ ಮಾಡಲು ಪ್ರಾರಂಭಿಸುತ್ತಾನೆ. ಆಗ ಗೀತು ಕೊಡುವ ಪ್ರತಿಕ್ರಿಯೆ ಗಂಭೀರವಾಗಿ ನೋಡುತ್ತಿರುವ ನಮ್ಮಲ್ಲಿ ನಗೆ ಉಕ್ಕಿಸುತ್ತದೆ. ಗೀತು ತನ್ನ ಸಂಕಲೆಗಳನ್ನು ಕಳಚಿಕೊಳ್ಳುವುದು ಹಾಗೆ!

‘Unorganised’ – ಒಂದು ಕಾರ್ಯಾಗಾರದಲ್ಲಿ ಸಿಕ್ಕ ಗಾರ್ಮೆಂಟಿನಲ್ಲಿ ಕೆಲಸ ಮಾಡುವ ಸ್ನೇಹಿತೆ ಒಬ್ಬರು ಹೇಳಿದ್ದ ಮಾತು ನನಗಿನ್ನೂ ನೆನಪಿದೆ. ಅವರಿಗಿರುವ ಟಾರ್ಗೆಟ್ ಒತ್ತಡ ಎಷ್ಟಿರುತ್ತದೆ ಎಂದರೆ ಮೂತ್ರ ವಿಸರ್ಜನೆಗೆ ಹೋಗುವುದಕ್ಕೂ ಅಡ್ಡಿ ಇರುತ್ತದಂತೆ. ಅದಕ್ಕಾಗಿ ನಾವು ಹೆಚ್ಚು ನೀರೇ ಕುಡಿಯುವುದಿಲ್ಲ, ಅದರಿಂದ ಏನೇನೋ ಸಮಸ್ಯೆಗಳು ಎಂದು ಅವರು ಹೇಳಿದ್ದರು. ತುಂಬಾ ಮೊದಲು ನಾನು ಕೆಲಸ ಮಾಡುತ್ತಿದ್ದ ಕಡೆ ನಮ್ಮ ಆಫೀಸ್ ಬೇಸ್‌ಮೆಂಟಿನಲ್ಲಿದ್ದರೆ, ಟಾಯ್ಲೆಟ್ ಮೂರನೆಯ ಮಹಡಿಯ ಯಾವುದೋ ಮೂಲೆಯಲ್ಲಿತ್ತು. ಪ್ರತಿಸಲ ಮೂರು ಮಹಡಿ ಹತ್ತುವ ಸಂಕಟಕ್ಕೆ ನೀರು ಕುಡಿಯಲೇ ಹೆದರಿಕೆ ಆಗುತ್ತಿತ್ತು. ಇದೆಲ್ಲಾ ನೆನಪಾದದ್ದು ಮೊನ್ನೆ ಈ ಚಿತ್ರ ನೋಡುವಾಗ.

ಇದು ಸಣ್ಣಸಣ್ಣ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವ ಹೆಂಗಸರ ಕಥೆ. ಅಷ್ಟು ಅಂಗಡಿಗಳು, ಆದರೆ ಒಂದೂ ಟಾಯ್ಲೆಟ್ ಇಲ್ಲ. ಟಾಯ್ಲೆಟ್ಟಿಗೆಂದು ಮೀಸಲಾದ ಜಾಗವನ್ನು ಗೋಡೋನ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಆ ಏರಿಯಾದಲ್ಲಿ ಇರುವ ಒಂದು ಹೋಟೆಲ್‌ನಲ್ಲಿರುವ ಟಾಯ್ಲೆಟ್ಟಿಗೆ ಇವರು ಹೋಗಬೇಕು. ಆದರೆ ಸುಮ್ಮನೆ ಟಾಯ್ಲೆಟ್ ಬಳಸಲು ಅವರು ಬಿಡುವರೆ? ಕನಿಷ್ಠ ಒಂದು ಕಾಫಿ ಆದರೂ ತೆಗೆದುಕೊಳ್ಳಬೇಕು, ಒಂದು ಕಾಫಿ ಬೆಲೆ 5 ರೂ. ದಿನಕ್ಕೆಷ್ಟು ಸಲ ಹಣ ತೆರಲು ಸಾಧ್ಯ? ಅವರ ಸಂಬಳಗಳಾದರೂ ಎಷ್ಟಿರುತ್ತದೆ? ಅವರ ಈ ಸಮಸ್ಯೆ ಅಲ್ಲಿರುವ ಗಂಡಸರಿಗೆ ಒಂದು ಜೋಕ್. ‘ನಾಳೆಯಿಂದ ಒಂದು ಬಾಟಲ್ ತೆಗೆದುಕೊಂಡು ಬಾ’ ಎಂದು ಚುಡಾಯಿಸುತ್ತಾರೆ ಸಹ. ಅವರ ಸಮಸ್ಯೆ ತೆಗೆದುಕೊಂಡು ಅವರು ಕಮ್ಯುನಿಸ್ಟ್ ಕಛೇರಿಗೂ ಹೋಗುತ್ತಾರೆ. ಅವರು ಕೇಳುವುದು ಮೊದಲು ಮೆಂಬರ್ ಆಗಿ ಎಂದು.

ಅಲ್ಲಿ ಹೋದರು ಎನ್ನುವ ಕಾರಣಕ್ಕೆ ಇವರ ಕೆಲಸ ಹೋಗುವ ಸಂದರ್ಭ ಬರುತ್ತದೆ. ಅವರ ನಡುವೆಯೇ ಇರುವ ನಡುವಯಸ್ಸಿನ ಹೆಣ್ಣೊಬ್ಬಳಿಗೆ ಅಲ್ಪಸ್ವಲ್ಪ ಕಾನೂನಿನ ಅರಿವಿರುತ್ತದೆ. ಅವಳು ಇವರ ಜೊತೆಗೆ ನಿಲ್ಲುತ್ತಾಳೆ. ಅವಳು ತನ್ನ ಬಟ್ಟೆಗೆ ಹೊಲೆದುಕೊಂಡಿರುವ ಜೇಬು ಇವರೆಲ್ಲರಿಗೂ ಅಚ್ಚರಿ, ಅರೆ ಇದರಿಂದ ತಮಗೆಷ್ಟು ಅನುಕೂಲ ಎನ್ನುವ ಜ್ಞಾನೋದಯ, ಇದು ಬಟ್ಟೆಗಳಿಗೆ ಜೇಬು ಇಟ್ಟುಕೊಳ್ಳುವ ರಾಜಕೀಯವೂ ಹೌದು! ಸ್ವಲ್ಪ ಡಾಕ್ಯುಮೆಂಟರಿ ಧಾಟಿಯಲ್ಲಿರುವ ಈ ಚಿತ್ರ, ಟ್ರಾನ್ಸ್ ಜೆಂಡರ್‌ನವರ ಟಾಯ್ಲೆಟ್ ಸಮಸ್ಯೆಯನ್ನು ಕುರಿತು ಸಹ ಮಾತನಾಡುತ್ತದೆ. ಗಂಭೀರ ವಿಷಯವನ್ನು ಹೇಳುತ್ತಲೇ ಇಲ್ಲಿ ಚಿಮ್ಮುವ ಹಾಸ್ಯ ಅತ್ಯಂತ ಸಹಜವಾಗಿ ಬರುತ್ತದೆ.

‘Ration’ – ವರ್ಗ ಅಸಮಾನತೆ, ಮತ್ತು ಅಸಮಾನ ವರ್ಗಗಳಲ್ಲಿರುವವರು ಜೊತೆಜೊತೆಯಾಗಿ ಬದುಕುವಾಗ ಅದು ಹುಟ್ಟಿಸುವ ಸಮಸ್ಯೆಗಳನ್ನು ಕುರಿತು ಈ ಚಿತ್ರ ಮಾತನಾಡುತ್ತದೆ. ಒಂದು ಸಣ್ಣ ಪೊರಪಾಟು ತಂದಿಡುವ ಸಮಸ್ಯೆ, ಅದನ್ನು ಪರಿಹರಿಸಲು, ತಮ್ಮ ‘ಮರ್ಯಾದೆ’ ಕಾಪಾಡಿಕೊಳ್ಳಲು ಈ ಕೆಳಮಧ್ಯಮ ವರ್ಗದ ಕುಟುಂಬ ಪಡುವ ಪಡಿಪಾಟಲು… ಏನೇನೂ ಪಾಡುಪಟ್ಟು ಇವರು ಆ ಪೊರಪಾಟಿನ ಸಮಸ್ಯೆಯನ್ನು ಪರಿಹರಿಸಿಕೊಂಡರೂ ಕಡೆಗೆ ಅದರ ಫಲಿತಾಂಶದ ನಿರರ್ಥಕತೆ ಮೊಪಾಸನ ‘ನೆಕ್ಲೇಸ್’ ಕಥೆಯನ್ನು ನೆನಪಿಸುತ್ತದೆ.

ನಾಲ್ಕನೆಯ ಕಥೆ ‘Old Age Home’. ಅದರಲ್ಲಿನ ಭಾವನೆಗಳ ಕಾರಣಕ್ಕೆ ಮತ್ತು ಜೋಜು ಜಾರ್ಜ್ ಅದ್ಭುತ ಪರಿಪಕ್ವ ನಟನೆಯ ಕಾರಣಕ್ಕೆ ನನಗೆ ಅತ್ಯಂತ ಇಷ್ಟವಾದ ಚಿತ್ರ. ಇನ್ನೇನು ಆಗ ಡಿಮಿನ್ಶಿಯಾ ಕಾಲಿಡುತ್ತಿರುವ ಇಳಿವಯಸ್ಸಿನಾತನ ಪಾತ್ರದಲ್ಲಿ ಆತನ ನಟನೆ ಅನನ್ಯ. ಇಲ್ಲಿ ಹಿರಿಯರು ಮಕ್ಕಳ ಬೇಜವಾಬ್ದಾರಿ ಮತ್ತು ನಿರಾದರಣೆಗೆ ಪಾತ್ರವಾದ ಎರಡು ಕುಟುಂಬಗಳಿವೆ. ಒಂದರಲ್ಲಿ ತಂದೆ ತೀರಿ ಹೋಗಿದ್ದಾನೆ. ತಾಯಿ – ಆಕೆಯ ಹೆಸರು ಧನು. ಮಗ ಮತ್ತು ಅವನ ಹೆಂಡತಿಗೆ ಅಮ್ಮನ ಜೊತೆ ಬದುಕಲು ಇಷ್ಟವಿಲ್ಲ. ಹೇಗಾದರೂ ಅವಳನ್ನು ಮನೆಯಿಂದ ಆಚೆ ಹಾಕಿ, ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿರಬೇಕು. ಅದಕ್ಕೆ ಮಗ ಆಯ್ದುಕೊಳ್ಳುವ ದಾರಿ ಹೀಗಿದೆ, ‘ಅಮ್ಮ ನೋಡು ಅದೇ ಮರಕ್ಕೆ ಕಟ್ಟಿ ಅಪ್ಪ ನನ್ನ ಹೊಡೆಯುತ್ತಿದ್ದಾಗ ನೀನು ಬಂದು ನನ್ನ ಬಿಡಿಸಿದೆಯಾ? ಈಗ ನಿನ್ನನ್ನು ಕಂಡರೆ ನನಗೆ ಪ್ರೀತಿ ಇಲ್ಲ. ನೀನು ಎಲ್ಲಾದರೂ ಹೋಗಿಬಿಡು, ನಾನೂ ನನ್ನ ಕುಟುಂಬ ನೆಮ್ಮದಿಯಾಗಿರಬೇಕು!’

ಇನ್ನೊಂದು ಕುಟುಂಬ. ಅಲ್ಲಿ ಗಂಡ ನಿವೃತ್ತನಾಗಿದ್ದಾನೆ. ಆತನಿಗೆ ಡಿಮೆನ್ಶಿಯಾ ಶುರುವಾಗುತ್ತಿದೆ. ಅವನ ಹೆಂಡತಿ ವಯಸ್ಸಾಗಿದ್ದರೂ ಧೈರ್ಯದ, ಚಟುವಟಿಕೆಯ ಜೀವ. ತಮ್ಮ ತೋಟದಲ್ಲಿ ಬೆಳೆಯುವ ಹಲಸು, ಬಾಳೆಗಳ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುತ್ತಾಳೆ. ಸ್ಥಳೀಯ ಬೆಳೆಗಾರರ ಸಮಸ್ಯೆಗಳನ್ನು ಸಾಮುದಾಯಿಕವಾಗಿ ಎದುರಿಸುವುದನ್ನು ಕುರಿತು ಚರ್ಚಿಸುತ್ತಿರುತ್ತಾಳೆ. ಗಂಡನಿಗೆ ಡಿಮೆನ್ಶಿಯಾ ಎಂದು ತಿಳಿದ ಕೂಡಲೇ ಮಗನಿಗೆ, ಮಗಳಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾಳೆ. ಮಗ ಅಲ್ಲಿಂದಲೇ ಹೇಳುತ್ತಾನೆ, ‘ಅಪ್ಪನನ್ನು ಹುಷಾರಾಗಿ ನೋಡಿಕೋ, ಬೇಕಾದರೆ ಯಾರನ್ನಾದರೂ ಕೆಲಸಕ್ಕೆ ಇಟ್ಟುಕೋ..’ – ಅಷ್ಟೇ, ಅವನ ಜವಾಬ್ದಾರಿ ಮುಗಿಯಿತು.

ಮಗಳು ಅದನ್ನೂ ಮಾಡುವುದಿಲ್ಲ. ಹಾಗೆ ಅಪ್ಪನನ್ನು ನೋಡಿಕೊಳ್ಳಲು ತನ್ನ ಮನೆಯಿಂದ ಹೊರಹಾಕಲ್ಪಟ್ಟ ಧನು ಬರುತ್ತಾಳೆ. ಅವಳಿಗೆ ಇದು ಮನೆಯಾಗುತ್ತದೆ. ಅವಳು ಆತನನ್ನು ನೋಡಿಕೊಳ್ಳುವುದರ ಜೊತೆಗೆ ಅವನ ಬದುಕಲ್ಲಿ ಶಿಸ್ತು, ಚಟುವಟಿಕೆ ತುಂಬಲು ಕೈಲಾದಷ್ಟೂ ಪ್ರಯತ್ನಿಸುತ್ತಾಳೆ. ಅವನಿಗೆ ಸಣ್ಣಸಣ್ಣ ಆಸೆಗಳು. ದೇವಸ್ಥಾನದ ಪ್ರಸಾದ ಪಾಯಸ ತಿನ್ನಬೇಕು, ಕೇಕ್ ತಿನ್ನಬೇಕು… ಹೀಗೆ. ಆದರೆ ಅಪ್ಪನಿಗೆ ಡಯಾಬಿಟಿಸ್, ಸಿಹಿ ಕೊಡಲೇಬೇಡ ಎನ್ನುವ ಕಟ್ಟಾಜ್ಞೆ ಮಕ್ಕಳದು. ಅಮ್ಮ ಸಹ ಮಕ್ಕಳ ಮಾತನ್ನು ಕೇಳುತ್ತಿರುತ್ತಾಳೆ. ಆದರೆ ಅವರಿಗರ್ಥವಾಗದ್ದು ಏನೆಂದರೆ ಅವರೆಲ್ಲರೂ ಅಪ್ಪ ಬದುಕಲು ಬೇಕಾದ ಆಸೆ, ಆಸಕ್ತಿ, ಕಾರಣಗಳನ್ನು ಕೊಂದು, ಅವನ ಬದುಕನ್ನು ಲಂಬಿಸುತ್ತಿದ್ದಾರೆ ಎನ್ನುವ ಕಹಿಸತ್ಯ. ಅದು ಕೆಲಸದ ಧನುವಿಗೆ ಅರ್ಥವಾಗಿರುತ್ತದೆ.

ಒಂದು ಸಲ ಅಪ್ಪನಿಗೆ ಬಾರ್‌ಗೆ ಹೋಗಿ ಎಣ್ಣೆ ಹೊಡೆಯುವ ಆಸೆ ಬರುತ್ತದೆ. ಮನೆಯ ಡ್ರೈವರ್‌ನನ್ನು ಹೇಗೋ ಹೊರಡಿಸುತ್ತಾನೆ. ಅವನನ್ನು ನೋಡಿಕೊಳ್ಳುವ ನರ್ಸ್ ಆಗಿ ಧನು ಸಹ ಜೊತೆಗೆ ಹೋಗುತ್ತಾಳೆ. ಅಲ್ಲಿ ಎಣ್ಣೆ ಹೊಡೆದು ಅಪ್ಪ ಖುಶ್. ಆದರೆ ಸಮಸ್ಯೆ ಶುರುವಾಗುವುದು ಆಮೇಲೆ. ಮಗ ಅಮ್ಮನಿಗೆ ವೀಡಿಯೋ ಕಾಲ್ ಮಾಡಿ ನಮ್ಮ ಮರ್ಯಾದೆ ಹೋಯಿತು ಎಂದು ಕೂಗಾಡುತ್ತಾನೆ. ‘ಅಪ್ಪನನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚಿನ ಕೆಲಸ ನಿನಗೇನಿದೆ?’ ಎಂದು ಜಬರಿಸುತ್ತಾನೆ. ಅಮ್ಮ ಆಗ ಸಿಡಿಯುತ್ತಾಳೆ, ‘ನನ್ನ ಗಂಡನನ್ನು ಹೇಗೆ ನೋಡಿಕೊಳ್ಳುವುದು ಎಂದು ನನಗೆ ಗೊತ್ತು’ ಎಂದು ಕರೆ ಕತ್ತರಿಸುತ್ತಾಳೆ.

ಒಂದು ಸಲ ಆಕೆಯೇ ಗಂಡನನ್ನು ‘ನಮ್ಮ ಮನೆಯನ್ನು ಒಂದು ಓಲ್ಡ್ ಏಜ್ ಹೋಂ’ ಮಾಡೋಣವೇ ಎಂದು ಕೇಳಿರುತ್ತಾಳೆ. ಆದರೆ ಈಗಾಗಲೇ ಅದು ಒಂದು ಓಲ್ಡ್ ಏಜ್ ಹೋಮ್ ಆಗಿದೆ ಎನ್ನುವುದು ಅವಳಿಗೆ ಆಗ ಅರಿವಾಗುತ್ತದೆ. ಡಿಮೆನ್ಶಿಯಾ ವಿಷಯವನ್ನೇ ವಸ್ತುವನ್ನಾಗಿಸಿಕೊಂಡ ‘ಫಾದರ್’ ಎನ್ನುವ ನಾಟಕ ಪ್ರದರ್ಶನವನ್ನು ನೋಡಿದ್ದೆ. ನಾಸಿರುದ್ದೀನ್ ಶಾ ಅದರಲ್ಲಿ ಡಿಮೆನ್ಶಿಯಾ ಇರುವ ವ್ಯಕ್ತಿಯಾಗಿ ಅದ್ಭುತ ಅಭಿನಯ ನೀಡಿದ್ದರು. ಅದಕ್ಕೆ ಸರಿಸಮನಾದ ಅಭಿನಯ ಈ ಚಿತ್ರದಲ್ಲಿ ಜೋಜು ಜಾರ್ಜ್ ಅವರದ್ದು. ವಯಸ್ಸಾದ ಮೇಲೆ ಬದಲಾಗುವ ಅಧಿಕಾರದ ಸಮೀಕರಣ, ಮಕ್ಕಳ ಅಧಿಕಾರದ ಆಟೋಟೋಪದ ಎದುರಲ್ಲಿ ತಮ್ಮ ಘನತೆ ಉಳಿಸಿಕೊಳ್ಳಲು ಹಿರಿಯರು ಹೋರಾಡುವ ಕಥೆ ‘ಓಲ್ಡ್ ಏಜ್ ಹೋಂ’ದು.

ಈ ಕಥಾಗುಚ್ಛದ ಕಡೆಯ ಮತ್ತು ಅತ್ಯಂತ ಪರಿಣಾಮಕಾರಿ ಚಿತ್ರ ‘Pra.Thu.Mu.’. ನಿರ್ದೇಶಕ ಈ ಚಿತ್ರವನ್ನು ಕಪ್ಪು ಬಿಳುಪಿನಲ್ಲಿ ತೆಗೆದಿದ್ದಾರೆ. ಅದಕ್ಕೊಂದು ಕಾರಣವೂ ಇದೆ. ಮಲದ ಗುಂಡಿಗಳು ಅಥವಾ ಸೆಪ್ಟಿಕ್ ಟ್ಯಾಂಕುಗಳನ್ನು ಶುದ್ಧ ಮಾಡಲು ಮೋಟಾರುಗಳು ಬಂದಿವೆ. ಆದರೆ ಒಮ್ಮೊಮ್ಮೆ ಅದರ ಪೈಪ್ ಬ್ಲಾಕ್ ಆದಾಗ ಕಾರ್ಮಿಕರು ಗುಂಡಿಯೊಳಗೆ ಇಳಿದು ಅದನ್ನು ಸ್ವಚ್ಚ ಮಾಡಬೇಕಾದ ಕೆಟ್ಟ ಪರಿಸ್ಥಿತಿ ಇದೆ. ಮೂರು ಮಂದಿ ಕಾರ್ಮಿಕರು ಒಬ್ಬ ಮಂತ್ರಿಯ ಮನೆಯ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು ಹೋಗಿರುತ್ತಾರೆ. ಮಂತ್ರಿಯ ಮನೆಯ ಬಿಳಿಬಿಳಿ ಗೋಡೆಗಳ ತುಂಬ ರಾಜಕೀಯ ನಾಯಕರ ಚಿತ್ರ. ಆ ಮಂತ್ರಿ ಮಹಡಿಯ ಮೇಲಿನ ಕಿಟಕಿಯಿಂದ ಇವರನ್ನು ಮಾತನಾಡಿಸುತ್ತಾನೆ. ಇವರಿಗೆ ಅದೇ ಖುಷಿ, ಮಂತ್ರಿಗಳು ಮಾತನಾಡಿಸಿದರು ಎಂದು.

ಆ ಕೆಲಸಗಾರರು ಕೇಳುವುದು ಒಂದೇ ಬೇಡಿಕೆ ನಾವು ಅದನ್ನು ಶುದ್ಧ ಮಾಡುವಾಗ ದಯವಿಟ್ಟು ಟಾಯ್ಲೆಟ್ ಉಪಯೋಗಿಸಬೇಡಿ ಎಂದು. ಆದರೆ ಆ ಮಂತ್ರಿ ಅದನ್ನೇ ಮಾಡುತ್ತಾನೆ. ಪ್ರಶ್ನಿಸಲು ಹೋಗುವ ಒಬ್ಬ ಕೆಲಸಗಾರನ ಮೇಲೆ ಪಾಶವೀಯ ರೀತಿಯಲ್ಲಿ ಹಲ್ಲೆ ಮಾಡುವುದಲ್ಲದೆ, ಅವನನ್ನು ಅತ್ಯಂತ ಹೀನವಾಗಿ ಅವಮಾನಿಸಿ, ಕಡೆಗೆ ಅವನ ಮೇಲೇ ಕಂಪ್ಲೆಂಟ್ ಕೊಟ್ಟಿರುತ್ತಾರೆ. ಅವರ ಕಷ್ಟ ಹೇಳಿಕೊಳ್ಳಬೇಕೆಂದು ಮಾಧ್ಯಮಗಳನ್ನು ಕರೆದರೆ ಬರುವವರು ಇಬ್ಬರೋ-ಮೂವರೋ. ನಡೆದುದೆಲ್ಲವನ್ನೂ ಅವರು ವಿವರಿಸಿದರೆ ಮಾಧ್ಯಮದವರ ಪ್ರತಿಕ್ರಿಯೆ ಇಷ್ಟೇ, ‘ಸರಿ ಈಗ ನೀವೇನು ಮಾಡಬೇಕೆಂದಿರುವಿರಿ?’ ನಮ್ಮ ಮಾನವೀಯತೆ ಇಲ್ಲಿಗೆ ಬಂದು ಮುಟ್ಟಿದೆ. ಈ ಚಿತ್ರ ನೋಡುವಾಗ ಬಿ.ಎಂ.ಗಿರಿರಾಜರ ‘ಅಮರಾವತಿ’ ನೆನಪಾಗುತ್ತದೆ. ಇಡೀ ಚಿತ್ರದಲ್ಲಿ ಆ ಕೆಲಸಗಾರನ ಮೈಮೇಲಿನ ಮಲ ನಮ್ಮ ಕಣ್ಣುಗಳಿಗೆ ಮೆತ್ತಿಕೊಳ್ಳುತ್ತದೆ. ನಿರ್ದೇಶಕರು ಅದನ್ನು ಕಪ್ಪುಬಿಳುಪಾಗಿಸಿದ್ದರೂ ಅದರ ಪರಿಣಾಮ ಅತ್ಯಂತ ತೀವ್ರವಾಗಿಯೇ ಇದೆ.

ಈ ಕಥೆಗಳನ್ನು ಚಿತ್ರಭಾಷೆಗೆ ಒಗ್ಗಿಸಿಕೊಳ್ಳುವಲ್ಲಿ ಇಲ್ಲಿನ ನಿರ್ದೇಶಕರು ತಮ್ಮದೇ ಆದ ದಿಟ್ಟ ಮತ್ತು ವಿಭಿನ್ನ ನಿರೂಪಣೆಯನ್ನು ರೂಢಿಸಿಕೊಂಡಿದ್ದಾರೆ. ನಾವು ದಿನನಿತ್ಯ ಎದುರಾಗುವ ಕಾರಣಗಳಿಂದ ಬಹುಶಃ ಅವುಗಳನ್ನು ಕುರಿತು ನಮ್ಮ ಸೂಕ್ಷ್ಮತೆಯನ್ನು ಕಳೆದುಕೊಂಡ ಸನ್ನಿವೇಶಗಳೂ ಸಹ ಇಲ್ಲಿ ಗಟ್ಟಿಯಾಗಿ ನಿಂತು ನಮಗೆ ಅವುಗಳನ್ನು ಹೊಸದಾಗಿ ನೋಡುವ ನೋಟವನ್ನು ಕೊಡುತ್ತವೆ. ಒಂದೊಂದು ಚಿತ್ರಕ್ಕೂ ಒಂದೊಂದು ನಿರೂಪಣಾ ತಂತ್ರ. ಆ ಕಾರಣಕ್ಕೂ ಚಿತ್ರ ಮುಖ್ಯವಾಗುತ್ತದೆ. ಮೊನ್ನೆಮೊನ್ನೆ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಆಗಬೇಕು. ಇನ್ನೂಹೆಚ್ಚು ಜನ ಈ ಚಿತ್ರ ನೋಡಬೇಕು.
ಸ್ವಾತಂತ್ರದ ಹೋರಾಟಕ್ಕೆ ಅದೆಷ್ಟು ಆಯಾಮಗಳು… ಅದು ವೈಯಕ್ತಿಕವೂ ಹೌದು, ಸಾರ್ವಜನಿಕವೂ ಹೌದು.

LEAVE A REPLY

Connect with

Please enter your comment!
Please enter your name here