ಸಾರಿಕಾ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಹಿಳಾ ಕ್ರಿಕೆಟ್ ಕುರಿತ ‘ಸಹಾರಾ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕ್ರಿಕೆಟ್ ಜೊತೆ ಇಲ್ಲಿ ಫ್ಯಾಮಿಲಿ ಡ್ರಾಮಾ ಮತ್ತು ಲವ್ ಸ್ಟೋರಿಯೂ ಇದೆ ಎನ್ನುವುದು ಟ್ರೇಲರ್‌ನಲ್ಲಿ ತಿಳಿದುಬರುತ್ತದೆ. ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಸ್ವತಂತ್ರ ನಿರ್ದೇಶನದ ಮೊದಲ ಚಿತ್ರವಿದು.
ಮಹಿಳಾ ಕ್ರಿಕೆಟ್ ಕುರಿತ ಕಥಾಹಂದರ ಹೊಂದಿರುವ ‘ಸಹಾರಾ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದು ಬಯೋಪಿಕ್ ಅಲ್ಲ, ಆದರೆ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುವ ಯುವತಿಯ ಸುತ್ತ ಹೆಣೆದ ಕತೆ. ಕ್ರಿಕೆಟ್ ಜೊತೆ ಇಲ್ಲಿ ಫ್ಯಾಮಿಲಿ ಡ್ರಾಮಾ ಮತ್ತು ಲವ್ ಸ್ಟೋರಿಯೂ ಇದೆ ಎನ್ನುವುದು ಟ್ರೇಲರ್‌ನಲ್ಲಿ ತಿಳಿದುಬರುತ್ತದೆ. ಮಹಿಳಾ ಪ್ರಧಾನ ಕತೆಯ ಮುಖ್ಯ ಪಾತ್ರದಲ್ಲಿ ಸಾರಿಕಾ ರಾವ್ ನಟಿಸಿದ್ದಾರೆ. ಅವರ ತಂದೆಯ ಪಾತ್ರದಲ್ಲಿ ಕಿರುತೆರೆಯ ಖ್ಯಾತ ಕಲಾವಿದ ಮಂಜುನಾಥ ಹೆಗಡೆ ನಟಿಸಿದ್ದು, ನಟಿ ಸುಧಾರಾಣಿ ಕ್ರಿಕೆಟ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. RCB ತಂಡದ ಮಾಜಿ ಆಟಗಾರ ಗೌತಮ್ ಕೆ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ‘ಕ್ರಿಕೆಟ್ ಕತೆಯನ್ನು ಒಳಗೊಂಡಿರುವ ಚಿತ್ರವಿದು. ಟ್ರೇಲರ್ ರಿಯಲಿಸ್ಟಿಕ್ ಆಗಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಮುಖ್ಯ ಪಾತ್ರದಲ್ಲಿ ನಟಿಸಿರುವ ನಟಿ ಸಾರಿಕಾ ರಾವ್ ಮಾತನಾಡಿ, ‘ಇದು ಸ್ಫೂರ್ತಿದಾಯಕ ಕಥೆ. ನಾನು ಜವಾಬ್ದಾರಿಯಿಂದ ನನ್ನ ಪಾತ್ರ ನಿರ್ವಹಿಸಿದ್ದೇನೆ ಎಂದುಕೊಳ್ಳುತ್ತೇನೆ. ಮಹಿಳಾ ಪ್ರಧಾನ ಸಿನಿಮಾವನ್ನು ನಿರ್ದೇಶಕರಾದ ಮಜೇಶ್ ಅವರು ಕನ್ನಡ ಇಂಡಸ್ಟ್ರಿಗೆ ಕೊಡುತ್ತಿದ್ದಾರೆ. ನಟ ಸುದೀಪ್ ಸರ್, ನಿರ್ದೇಶಕ ಸಿಂಪಲ್ ಸುನಿ ಸರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಮೇಡಂ ಹೊಸತಂಡವಾದ ನಮಗೆ ಪರೋಕ್ಷವಾಗಿ ನೆರವಾಗಿದ್ದಾರೆ’ ಎನ್ನುತ್ತಾರೆ. ಈ ಪಾತ್ರಕ್ಕಾಗಿ ಸಾರಿಕಾ ಅವರು ರಣಜಿ ಕ್ರಿಕೆಟ್ ಆಟಗಾರ ಕೆ ಬಿ ಪವನ್ ಬಳಿ ಕ್ರಿಕೆಟ್ ತರಬೇತಿ ಪಡೆದು ನಂತರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕಳೆದ ಎಂಟು ವರ್ಷಗಳಿಂದ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರವನ್ನು ಹೊರತರುತ್ತಿದ್ದಾರೆ. ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. PRK ಆಡಿಯೋದಡಿ ಹಾಡುಗಳು ಬಿಡುಗಡೆಯಾಗುತ್ತಿದ್ದು, KRG ಸಂಸ್ಥೆ ಸಿನಿಮಾ ವಿತರಣೆ ಜವಾಬ್ದಾರಿ ಹೊತ್ತಿದೆ. ಕ್ರಿಕೆಟ್ ಆಧರಿಸಿದ ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದಾರೆ. ಮಂಡ್ಯದ ಹುಡುಗಿಯ ಕ್ರಿಕೆಟ್ ಕನಸಿನ ಕಥೆಯನ್ನು ನಿರೂಪಿಸಿದ್ದಾರೆ. ಆಂಥೋನಿ ರುತ್ ವಿನ್ಸೆಂಟ್ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ, ಥ್ರಿಲ್ಲರ್ ಮಂಜು ಸಾಹಸ ಚಿತ್ರಕ್ಕಿದೆ.