ಮೊನ್ನೆಯಷ್ಟೇ ಆರಂಭವಾದ Netflix ಶೋ ‘Social Currency’ ವಿವಾದಕ್ಕೀಡಾಗಿದೆ. ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಗಾಯಕಿ, ಚಿತ್ರನಿರ್ಮಾಪಕಿ ಸಾಕ್ಷಿ ಚೋಪ್ರಾ ಶೋನ ಆಯೋಜಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈ ಕುರಿತ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.
Netflix ಶೋ ‘Social Currency’ ಮೊನ್ನೆಯಷ್ಟೇ ಆರಂಭವಾಗಿತ್ತು. ಎಂಟು ಮಂದಿ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ಸ್ ಶೋನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಈ ಸ್ಪರ್ಧಿಗಳಲ್ಲೊಬ್ಬರಾಗಿದ್ದ ಸಾಕ್ಷಿ ಚೋಪ್ರಾ ಶೋ ಆಯೋಜಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈ ಶೋಗೆ ಸಹಿ ಹಾಕುವ ಮುನ್ನ ನಾನು ಕೆಲವು ಷರತ್ತುಗಳನ್ನು ಹಾಕಿದ್ದೆ. ಅದರಂತೆ ನಡೆದುಕೊಳ್ಳದೆ ಅವರು ಮೋಸ ಮಾಡಿದ್ದಾರೆ ಎನ್ನುವುದು ಅವರ ಮತ್ತೊಂದು ಆರೋಪ. ಖ್ಯಾತ ಕಿರುತೆರೆ ಮತ್ತು ಸಿನಿಮಾ ನಿರ್ಮಾಪಕ ರಮಾನಂದ್ ಸಾಗರ್ ಅವರ ಮರಿಮೊಮ್ಮಗಳು ಸಾಕ್ಷಿ ಚೋಪ್ರಾ. ಹಾಗಾಗಿ ಸಹಜವಾಗಿಯೇ ಅವರ ಆರೋಪಗಳು ಎಲ್ಲರ ಗಮನಸೆಳೆದಿವೆ.
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರು ಶೋ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಶೋ ಆಯೋಜಕರು ಲೈಂಗಿಕ ವಿಷಯ, ಚಟುವಟಿಕೆಗಳಿಗೆ ಪ್ರೇರೇಪಿಸುತ್ತಾರೆ. ಗೋವಾದ ಕ್ಲಬ್‌ನಲ್ಲಿ ಅಪರಿಚಿತರೊಂದಿಗೆ ಡ್ಯಾನ್ಸ್ ಮಾಡುವಂತೆ ನನ್ನನ್ನು ಒತ್ತಾಯಿಸಿದ್ದರು. ಶೋನ ಮತ್ತೊಬ್ಬ ಸ್ಪರ್ಧಿ ಮೃದುಲ್ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಬೋಲ್ಡ್ ಆಗಿ ಡ್ರೆಸ್ ಹಾಕೋದು ನನ್ನ ಚಾಯ್ಸ್. ಹಾಗೆಂದು ಇಂಥದ್ದಕ್ಕೆಲ್ಲಾ ನಾನು ಒಪ್ಪುತ್ತೇನೆ ಎಂದು ಅವರು ಭಾವಿಸಿದ್ದಾರೆ. TRPಗಾಗಿ ಇಂತಹ ಗಿಮಿಕ್‌ಗಳನ್ನು ನಡೆಸುತ್ತಾರೆ’ ಎಂದಿರುವ ಸಾಕ್ಷಿ ಶೋಗೆ ಹೋಗುವ ಮುನ್ನ ಕೆಲವು ಷರತ್ತುಗಳನ್ನು ಹಾಕಿದ್ದರಂತೆ. ಆದರೆ ಶೋ ಶುರುವಾಗುತ್ತಿದ್ದಂತೆ ಷರತ್ತುಗಳಂತೆ ಅವರು ನಡೆದುಕೊಳ್ಳುತ್ತಿಲ್ಲ ಎಂದು ಸಾಕ್ಷಿ ಆರೋಪಿಸಿದ್ದಾರೆ.
https://www.instagram.com/p/Ct1uHa4M6_5/
‘ಅಮ್ಮನನ್ನು ಬಿಟ್ಟಿರಲು ನನಗೆ ಸಾಧ್ಯವೇ ಇಲ್ಲ. ದಿನಕ್ಕೊಮ್ಮೆ ಅವರಿಗೆ ಫೋನ್ ಮಾಡುತ್ತೇನೆ ಎನ್ನುವ ನನ್ನ ಷರತ್ತಿಗೆ ಅವರು ಒಪ್ಪಿದ್ದರು. ಆದರೂ ಆ ರೀತಿ ನಡೆದುಕೊಳ್ಳದೆ ಮೋಸ ಮಾಡಿದ್ದಾರೆ’ ಎಂದು ಸಾಕ್ಷಿ ಚೋಪ್ರಾ ದೂರಿದ್ದಾರೆ. ತಮಗೆ ಶೋನಲ್ಲಿ ಉಸಿರುಕಟ್ಟುವ ವಾತಾವರಣವಿದೆ ಎಂದು ಅನಿಸುತ್ತಿದ್ದಂತೆ ಸಾಕ್ಷಿ ಪೋಷಕರನ್ನು ಸಂಪರ್ಕಿಸಲು ಯತ್ನಿಸಿದ್ದರಂತೆ. ಆಗ ಶೋ ಆಯೋಜಕರು ಸಾಕ್ಷಿಯ ಮೊಬೈಲ್ ಫೋನ್ ಅನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆಕೆ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್‌ಗೆ ಸಾಕಷ್ಟು ಪರ – ವಿರೋಧದ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ.