ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಸಿನಿಮಾ ಹಬ್ಬದಂತಿದ್ದರೂ, ಆತನ ಸ್ವ್ಯಾಗ್ ಖುಷಿ ಕೊಟ್ಟರೂ, ಆತನ ಮುಖದಲ್ಲಿ ಸದಾ ಒಂದೇ ಭಾವ ಕಾಣುವುದರಿಂದ ಗೊಂದಲವಾಗುತ್ತದೆ. ಚಿತ್ರದ ಮಧ್ಯದಲ್ಲಿ ಪಠಾಣ್ ರೂಪದಲ್ಲಿ ಶಾರುಖ್ ತೆರೆಯ ಮೇಲೆ ಬಂದಾಗ ಸಲ್ಮಾನ್ ಖಾನ್‌ರ ಈ ಮಿತಿ ಮತ್ತಷ್ಟು ಎದ್ದು ಕಾಣುತ್ತದೆ. ಕತ್ರಿನಾ ಕೈಫ್‌ಗೆ ಸಾಕಷ್ಟು ಸ್ಕ್ರೀನ್‌ಸ್ಪೇಸ್ ದೊರೆತಿರುವುದು ಮತ್ತು ಆಕೆಗೆ ಪ್ರತ್ಯೇಕ ಫೈಟಿಂಗ್ ದೃಶ್ಯಗಳಿರುವುದು ‘ಟೈಗರ್ 3’ ಉತ್ತಮ ಅಂಶ. ಆತಿಶ್ ರೆಹಮಾನ್ ಆಗಿ ಇಮ್ರಾನ್ ಹಶ್ಮಿ ಪಾತ್ರ ಕ್ಯಾರಿಕೇಚರಿಷ್ ವಿಲನ್‌ನಂತೆ ಇಲ್ಲದೆ ಹಲವು ಆಯಾಮಗಳೊಂದಿಗೆ ಚೆನ್ನಾಗಿ ಮೂಡಿಬಂದಿದೆ.
ಹಾಲಿವುಡ್ ಸಿನಿಮಾಗಳಲ್ಲಿ ಕಂಡುಬರುವ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಎರಡು ಮುಖ್ಯ ಗುಣಲಕ್ಷಣಗಳಿರುತ್ತವೆ. ಒಂದು, ಎಲ್ಲಾ ಕೇಡು (ಅನ್ಯಗ್ರಹವಾಸಿಗಳ ದಾಳಿಯಿಂದ ಹಿಡಿದು ವೈರಸ್ ತನಕ) ಅಮೆರಿಕಾದಲ್ಲೇ ಸಂಭವಿಸುತ್ತವೆ ಮತ್ತು ಪ್ರಪಂಚದ ಯಾವುದೇ ಕಡೆ ಏನೇ ಅನಾಹುತ ಸಂಭವಿಸಲಿ ಅಮೆರಿಕದ ಯಾವುದೋ ಪ್ರಜೆ ಅಥವಾ ಸರ್ಕಾರದಿಂದ ಮಾತ್ರವೇ ಅದನ್ನು ನಿವಾರಿಸಲು ಸಾಧ್ಯವಾಗುತ್ತದೆ. ಇತರ ದೇಶಗಳ ವಿಷಯಗಳಲ್ಲಿ ವಿನಾಕಾರಣ ಮೂಗು ತೂರಿಸಿ ರಕ್ಷಕನಾಗಲು ಯತ್ನಿಸುವುದನ್ನು ಯುಎಸ್ ನಿಜ ಜೀವನದಲ್ಲೂ ಮಾಡುತ್ತದೆಯಾದ್ದರಿಂದ ಈ ಎರಡನೇ ವಿಷಯ ವಾಸ್ತವಕ್ಕೆ ಹತ್ತಿರ ಎನ್ನಬಹುದೇನೋ. ಆ ನಿಟ್ಟಿನಲ್ಲಿ ನೋಡಿದಾಗ ‘ಟೈಗರ್ 3’ ಹಾಲಿವುಡ್ ರೇಂಜಿನ ಸಿನಿಮಾ ಎನ್ನುವುದಕ್ಕೆ ಅಡ್ಡಿಯಿಲ್ಲ. ಏಕೆಂದರೆ ವೈಆರ್‌ಎಫ್ ಸ್ಪೈ ಯುನಿವರ್ಸ್‌ನ ಐದನೇ ಚಿತ್ರವಾಗಿ ತೆರೆಕಂಡಿರುವ ‘ಟೈಗರ್ 3’ರಲ್ಲಿ, ಇಂಡಿಯನ್ ಸ್ಪೈ ಏಜೆಂಟ್ ಅವಿನಾಶ್ ಸಿಂಗ್ ಅಲಿಯಾಸ್ ಟೈಗರ್ ಪಾಕಿಸ್ತಾನವನ್ನು ರಕ್ಷಿಸುತ್ತಾನೆ.
‘ಏಕ್ ಥಾ ಟೈಗರ್’ ಮತ್ತು ‘ಟೈಗರ್ ಜಿಂದಾ ಹೈ’ ನೋಡಿದವರಿಗೆ ಭಾರತೀಯ ರಾ ಏಜೆಂಟ್ ಅವಿನಾಶ್ (ಸಲ್ಮಾನ್ ಖಾನ್) ಮತ್ತು ಪಾಕಿಸ್ತಾನದ ಐಎಸ್‌ಐ ಏಜೆಂಟ್ ಝೋಯಾ (ಕತ್ರೀನಾ ಕೈಫ್) ಪ್ರೀತಿಸಿ, ಮದುವೆಯಾಗಿ ಮಗನೊಂದಿಗೆ ದೂರದೇಶದಲ್ಲೆಲ್ಲೋ ಸಂಸಾರ ನಡೆಸುತ್ತಿರುವುದು ಗೊತ್ತೇ ಇರುತ್ತದೆ. ‘ಟೈಗರ್ 3’ರ ಕತೆ ಝೋಯಾಳ ಬಾಲ್ಯ ಜೀವನದ ಫ್ಲಾಶ್‌ಬ್ಯಾಕ್‌ನೊಂದಿಗೆ ಆರಂಭವಾಗುತ್ತದೆ ಮತ್ತು ಆ ಸಂದರ್ಭದಲ್ಲಿ ಸಿನಿಮಾದ ಮುಖ್ಯ ಪಾತ್ರ ಅತೀಶ್ ರೆಹಮಾನ್ (ಇಮ್ರಾಮ್ ಹಷ್ಮಿ) ಪರಿಚಯವಾಗುತ್ತದೆ. ರಾ ಆದೇಶದಂತೆ ಭಾರತೀಯ ಏಜೆಂಟ್ ಗೋಪಿಯನ್ನು ಅಫ್ಘಾನಿಸ್ತಾನದಿಂದ ರಕ್ಷಿಸಿ ಹೊರತರುವ ಟೈಗರ್‌ಗೆ ಒಂದು ಆಘಾತಕಾರಿ ಅಂಶ ತಿಳಿಯುತ್ತದೆ. ಇದು ಗಂಡ ಮತ್ತೆ ಹೆಂಡತಿಯನ್ನು ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಿ, ಹೋರಾಡುವಂತೆ ಮಾಡುತ್ತದೆ. ಕಥೆಯ ಆ ಎಳೆ ಕುತೂಹಲಕಾರಿಯಾಗಿದ್ದರೂ, ಬೇಗನೇ ಮುಗಿದು ಹೋಗುತ್ತದೆ. ನಂತರದಲ್ಲಿ, ಟೈಗರ್, ಝೋಯಾ ಮತ್ತು ಕೆಲವು ರಾ ಮತ್ತು ಐಎಸ್ಐ ಏಜೆಂಟ್‌ಗಳು ಒಂದಾಗಿ ನಿಂತು ಹೇಗೆ ಪ್ರಜಾಪ್ರಭುತ್ವದ ಶತೃವೊಬ್ಬನ ವಿರುದ್ಧ
ಹೋರಾಡುತ್ತಾರೆಂಬುದು ಒಟ್ಟು ಕತೆ.
ಭಾರತೀಯ ಸ್ಪೈ ಸಿನಿಮಾಗಳ ಮತ್ತು ವಾರ್ ಸಿನಿಮಾಗಳ ಕತೆಗಳಲ್ಲಿ ಪಾಕಿಸ್ತಾನ ಒಂದು ಅವಿಭಾಜ್ಯ ಅಂಗ. ಮೊದಲಿಗೆ ಹೋಲಿಸಿದರೆ, ಇತ್ತೀಚಿನ ಸಿನಿಮಾಗಳು, ದೇಶಭಕ್ತಿಯ ಹೆಸರಲ್ಲಿ ಯುದ್ಧವನ್ನು ರೋಮ್ಯಾಂಟಿಸೈಸ್ ಮಾಡುತ್ತಾ ಪಕ್ಕದ ದೇಶವನ್ನು ತೀರಾ ದ್ವೇಷದಿಂದ ನೋಡುವುದನ್ನು ಕಡಿಮೆ ಮಾಡುತ್ತಿವೆ ಮತ್ತು ಬದಲಿಗೆ ಶಾಂತಿ ಸಹಬಾಳ್ವೆಯ ಪಾಠ ಹೇಳಲು ಯತ್ನಿಸುತ್ತಿವೆ ಎಂಬುದು ನಿಜ. ಆದರೂ ತಮ್ಮ ಕತೆಗಳಿಂದ ಪಾಕಿಸ್ತಾನವನ್ನು ಪೂರ್ತಿಯಾಗಿ ಹೊರಗಿಡಲು ಅವುಗಳಿಗೆ ಸಾಧ್ಯವಾಗಿಯೇ ಇಲ್ಲ, ಪಾಕಿಸ್ತಾನದ ಯಾರೋ ಸೈನಾಧಿಕಾರಿಯೂ, ಐಎಸ್‌ಐ ಏಜೆಂಟೋ ವಿಲನ್ ಆಗಿರಲೇಬೇಕು. ‘ಟೈಗರ್ 3’ ಚಿತ್ರದಲ್ಲಿ ಪಾಕಿಸ್ತಾನದ ಮಾಜಿ ಐಎಸ್ಐ ಏಜೆಂಟ್ ವಿಲನ್. ಆದರೆ, ಈ ಬಾರಿ ಅಪಾಯದಲ್ಲಿರುವುದು ಪಾಕಿಸ್ತಾನದ ಪ್ರಜಾಪ್ರಭುತ್ವ. ಹೀಗಿದ್ದೂ, ರಾ ಸೂಚನೆಯೇನೂ ಇಲ್ಲದೆಯೂ, ಯಾವುದೇ ಮಿಷನ್ ಕೊಡದೇ ಇದ್ದರೂ, ಟೈಗರ್ ತನ್ನ ‘ಮಾವನ ಮನೆ’ಯನ್ನು ಉಳಿಸಲು, ಪಾಕ್ ಪ್ರಧಾನಿಯನ್ನು ಕಾಪಾಡಲು ವೈಯಕ್ತಿಕವಾಗಿ ಹೋರಾಡುತ್ತಾನೆ.
ಕತೆಯ ಮುಖ್ಯ ತೊಂದರೆ ಇರುವುದೇ ಇಲ್ಲೇ. ಇಂಡೋ – ಪಾಕ್ ಶಾಂತಿ ಮಾತುಕತೆಯನ್ನು ಕೆಡಿಸುವ ಯತ್ನ ನಡೆಯುತ್ತಿರುವುದರಿಂದ ಅದನ್ನು ತಡೆಯಲು ಯತ್ನಿಸಿ, ಶಾಂತಿ ಕಾಪಾಡಲು ಯತ್ನಿಸುವುದು ಸರಿಯೇ ಆದರೂ, ಅಂತಹ ಹೋರಾಟದ ಅಂತರ್ಯದಲ್ಲಿರುವುದು ಸೇವಿಯರ್ ಕಾಂಪ್ಲೆಕ್ಸ್. ಅಂದರೆ, ಪಾಕಿಸ್ತಾನವನ್ನು ಉಳಿಸಲು ಒಬ್ಬ ಭಾರತೀಯ ಏಜೆಂಟೇ ಬರಬೇಕು ಎಂಬುದು. ಹೀಗಾಗಿ, ನೆರೆದೇಶದ ಧಾಳಿಯಿಂದ ನಮ್ಮ ದೇಶವನ್ನು ಕಾಪಾಡುವ ಮಾಮೂಲು ಕತೆಯಿಂದ ‘ಟೈಗರ್ 3’ ಹೊರಗುಳಿದಿದ್ದರೂ, ಪಕ್ಕದ ದೇಶಕ್ಕೆ ನೆರವಾಗುವ ಮೂಲಕ ಸೌಹಾರ್ದತೆಯ ಪಾಠ ಹೇಳುತ್ತಿದೆ ಎನಿಸಿದರೂ, ಭಾರತೀಯನೊಬ್ಬ ಪಾಕಿಸ್ತಾನವನ್ನು, ಪಾಕಿಸ್ತಾನದಿಂದಲೇ ರಕ್ಷಿಸುವ ಕತೆ ಶ್ರೇಷ್ಠತೆಯ ಭಾವದಿಂದ ತುಂಬಿದಂತೆ ಎನಿಸುತ್ತದೆ. ಹೀಗಾಗಿ, ಸಿನಿಮಾದ ಮೊದಲರ್ಧ ಪೂರ್ತಿಯಾಗಿ ವೈಯಕ್ತಿಕ ಕಾರಣದ ಹೋರಾಟವಾಗಿ, ಒಂದಷ್ಟು ಫ್ಲ್ಯಾಷ್‌ಬ್ಯಾಕ್, ಪಾತ್ರ ಪರಿಚಯಗಳಿಗೆ ಮೀಸಲಾಗಿದ್ದರೆ, ಎರಡನೆಯ ಭಾಗ ಪೂರ್ತಿ ಸ್ಪೈ ಆ್ಯಕ್ಷನ್ ಚಿತ್ರವಾಗುತ್ತದೆ. ಆದರೂ, ಅಷ್ಟೇನೂ ಸ್ಪೈ ಅಂಶಗಳಿಲ್ಲದ ಮೊದಲರ್ಧವೇ ಕತೆಯ ವಿಷಯದಲ್ಲಿ ಹೆಚ್ಚು ಖುಷಿ ಕೊಡುತ್ತದೆ.
ಬಹುತೇಕ ಸ್ಪೈ ಸಿನಿಮಾಗಳಂತೆ ಇದರ ಕತೆಯೂ ಕೂಡ, ಪ್ರಪಂಚದ ಹಲವು ಚಂದದ ಪ್ರದೇಶಗಳಲ್ಲಿ ಪ್ರಯಾಣಿಸುತ್ತದೆ. ಟರ್ಕಿ, ಆಸ್ಟ್ರಿಯಾ, ರಷ್ಯಾ, ಅಫ್ಘಾನಿಸ್ತಾನ್, ಪಾಕಿಸ್ತಾನ್ ಸೇರಿದಂತೆ ಹಲವು ಎಕ್ಸೋಟಿಕ್ ಲೋಕೇಷನ್‌ಗಳನ್ನು ತೋರಿಸುತ್ತದೆ. ಅನಯ್ ಗೋಸ್ವಾಮಿಯ ಸಿನಿಮಟೋಗ್ರಫಿ ಅದ್ಭುತವಾಗಿದೆ ಮತ್ತು ಕತೆ ಮತ್ತು ತೆರೆಯ ಮೇಲೆ ನಡೆಯುತ್ತಿರುವ ಆ್ಯಕ್ಷನ್‌ಗಳಿಂಗಿತ ಹೆಚ್ಚಾಗಿ ಆ ಪ್ರದೇಶಗಳ ಸೌಂದರ್ಯ ಕಣ್ಣು ತುಂಬುತ್ತದೆ. ಇದೇ ಕಾರಣಕ್ಕೆ ‘ಟೈಗರ್ 3’ ದೊಡ್ಡ ಪರದೆಯ ಮೇಲೆಯೇ ನೋಡಬೇಕಾದ ಸಿನಿಮಾ ಎನಿಸಿಕೊಳ್ಳುತ್ತದೆ. ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಸಿನಿಮಾ ಹಬ್ಬದಂತಿದ್ದರೂ, ಆತನ ಸ್ವ್ಯಾಗ್ ಖುಷಿ ಕೊಟ್ಟರೂ, ಆತನ ಮುಖದಲ್ಲಿ ಸದಾ ಒಂದೇ ಭಾವ ಕಾಣುವುದರಿಂದ ಗೊಂದಲವಾಗುತ್ತದೆ. ಟೈಗರ್ ಇತರ ಹಳೆಯ ಸಿನಿಮಾಗಳಿಗೆ ಹೋಲಿಸಿದರೆ, ಇದರಲ್ಲಿ, ತಂದೆ ಮತ್ತು ಗಂಡನಾಗಿಯೂ ಭಾವಾಭಿವ್ಯಕ್ತಿಗೆ ಸಾಕಷ್ಟು ಅವಕಾಶವಿದ್ದರೂ, ಸಲ್ಮಾನ್ ಮುಖಭಾವ ಬದಲಾಗುವುದೇ ಇಲ್ಲ. ಅದನ್ನು ಏಜೆಂಟ್ ಒಬ್ಬನ, ತನ್ನ ನೈಜಭಾವವನ್ನು ಅಡಗಿಸಿಕೊಳ್ಳುವ ಶಕ್ತಿ ಎಂದುಕೊಳ್ಳಬೇಕೋ ಆಥವಾ ಈ ಸ್ಟಾರ್ ನಟನ ಅಭಿನಯದ ಮಿತಿ ಎಂದುಕೊಳ್ಳಬೇಕೋ ಅರ್ಥವಾಗುವುದಿಲ್ಲ.
ಚಿತ್ರದ ಮಧ್ಯದಲ್ಲಿ ಸಾಲ ತೀರಿಸಲು ಪಠಾಣ್ ರೂಪದಲ್ಲಿ ಶಾರುಖ್ ತೆರೆಯ ಮೇಲೆ ಬಂದಾಗ ಸಲ್ಮಾನ್ ಖಾನ್‌ರ ಈ ಮಿತಿ ಮತ್ತಷ್ಟು ಎದ್ದು ಕಾಣುತ್ತದೆ. ‘ಟೈಗರ್ 3’ಯ ಒಂದು ಉತ್ತಮ ಅಂಶವೆಂದರೆ, ಕತ್ರಿನಾ ಕೈಫ್‌ಗೆ ಸಾಕಷ್ಟು ಸ್ಕ್ರೀನ್‌ಸ್ಪೇಸ್ ದೊರೆತಿರುವುದು ಮತ್ತು ಆಕೆಗೆ ಪ್ರತ್ಯೇಕ ಫೈಟಿಂಗ್ ದೃಶ್ಯಗಳಿರುವುದು. ಏನೇನೋ ಅನಾಹುತಕಾರಿ ಆ್ಯಕ್ಷನ್ ಸೀಕ್ವಿನ್ಸ್‌ಗಳಿದ್ದರೂ, ದೇಶದ ಎರಡು ಅತೀ ದೊಡ್ಡ ಸ್ಟಾರ್‌ಗಳನ್ನು ಸೇರಿಸಿ ಅದ್ಧೂರಿಯಾಗಿ ಚಿತ್ರಿಸಿದ್ದರೂ, ಸಿನಿಮಾ ಮುಗಿದ ಮೇಲೆ ನೆನಪಿನಲ್ಲುಳಿಯುವುದು ಕತ್ರೀನಾ ಮತ್ತು ಚೈನೀಸ್ ಏಜೆಂಟ್ (ಮಿಶೆಲ್ ಲೀ) ನಡುವಿನ ಒಳಾಂಗಣದಲ್ಲಿ ನಡೆಯುವ ಫೈಟ್ ಸೀನ್. ತುಂಬಾ ಅಚ್ಚುಕಟ್ಟಾಗಿ, ಕ್ರಿಸ್ಪ್ ಆಗಿ ಮತ್ತು ಅಷ್ಟೇ ವೇಗವಾಗಿ ನಡೆದುಹೋಗುವ ಈ ಆ್ಯಕ್ಷನ್ ಸೀಕ್ವೆನ್ಸ್ ಇಡೀ ಚಿತ್ರದ ಹೈಲೈಟ್. ಆ್ಯಕ್ಷನ್ ದೃಶ್ಯಗಳಲ್ಲಿ ಕತ್ರೀನಾ ಅಭಿನಯ ಹೀರೋ ಸಲ್ಮಾನ್‌ನನ್ನು ಮರೆಸುವಂತಿದೆ. ಸಲ್ಮಾನ್‌ಗೆ ಸಹಾಯ ಬೇಕಾದಾಗ ಪಠಾಣ್ ಬದಲು ಹೆಂಡತಿ ಝೋಯಾಳೇ ಬಂದಿದ್ದರೆ ಚೆನ್ನಾಗಿತ್ತು ಎನಿಸುವಷ್ಟು ಕತ್ರೀನಾ ಮಿಂಚುತ್ತಾರೆ.
ಇನ್ನು ಆತಿಶ್ ರೆಹಮಾನ್ ಪಾತ್ರದಲ್ಲಿ ಇಮ್ರಾನ್ ಹಶ್ಮಿಯನ್ನು ನೋಡಲು ಖುಷಿಯಾಗುತ್ತದೆ. ಒಂದೇ ರೀತಿಯ ಪಾತ್ರಗಳಿಗೆ ಬ್ರ್ಯಾಂಡ್ ಆಗಿದ್ದ ಇಮ್ರಾನ್ ಪ್ರತಿಭೆಗೆ ಇದೊಂದು ಉತ್ತಮ ಅವಕಾಶ. ಆತನ ಪಾತ್ರವೂ ಕ್ಯಾರಿಕೇಚರಿಷ್ ವಿಲನ್‌ನಂತೆ ಇಲ್ಲದೆ ಹಲವು ಆಯಾಮಗಳೊಂದಿಗೆ ಚೆನ್ನಾಗಿ ಮೂಡಿಬಂದಿದೆ. ಚಿತ್ರವಿಚಿತ್ರ ವೇಷ, ಭಾಷೆ, ಮ್ಯಾನರಿಸಂಗಳಿಲ್ಲದೆ, ಅಬ್ಬರದ ಡೈಲಾಗ್‌ಗಳ ಮೊರೆ ಹೋಗದೆ, ಹಶ್ಮಿ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಉಳಿದಂತೆ ರಾ ಚೀಫ್ ಪಾತ್ರದಲ್ಲಿ ರೇವತಿಗೆ ಹೆಚ್ಚೇನೂ ಅವಕಾಶ ಸಿಕ್ಕಿಲ್ಲ. ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಭಾಗವಾದ ಉಳಿದೆರಡು ಏಜಂಟ್‌ಗಳ ಕ್ಯಾಮಿಯೋ ಮತ್ತಷ್ಟು ಸಿನಿಮಾ ಪ್ರೇಮಿಗಳನ್ನು ಸೆಳೆಯುವಲ್ಲಿ ನೆರವಾಗಲಿದೆ.
ನಿರ್ದೇಶಕ ಮನೀಶ್ ಶರ್ಮ ದೇಶಭಕ್ತಿಯು, ಜಿಂಗೋಯಿಸಂ ಹಂತಕ್ಕೆ ಹೋಗದಂತೆ ಚಿತ್ರದ ಉದ್ದಕ್ಕೂ ಯತ್ನಿಸಿದ್ದರೂ, ಚಿತ್ರದ ಕೊನೆಯಲ್ಲಿ ಪಾಕಿಸ್ತಾನದ ಮಕ್ಕಳಿಂದ ಭಾರತೀಯ ರಾಷ್ಟ್ರಗೀತೆ ನುಡಿಸಿ, ಚಿತ್ರಮಂದಿರಲ್ಲಿರುವವರನ್ನೂ ನಿಲ್ಲುವಂತೆ ಪರೋಕ್ಷ ಒತ್ತಡ ಹೇರಿರುವುದು ಏಕೋ ಅರ್ಥವಾಗುವುದಿಲ್ಲ. ದೇಶ
ಅಪಾಯದಲ್ಲಿದ್ದಾಗ ಮತ್ತು ಅದರಿಂದ ಹೊರಬಂದಾಗ ಪ್ರೇಕ್ಷಕರಲ್ಲಿ ಮೂಡುವ ದೇಶಭಕ್ತಿಯ ಭಾವ ಸಹಜವಾಗಿರುತ್ತದೆ. ಕತೆಯಿಂದ ಪ್ರೇರಿತವಾಗಿರುತ್ತದೆ. ‘ಟೈಗರ್ 3’ನಲ್ಲಿ ಅಂತಹ ಸನ್ನಿವೇಶಗಳಿಲ್ಲದೆ ಇರುವಾಗ ಈ ರೀತಿಯ ದೃಶ್ಯ ಒಂದು ಹತಾಶ ಯತ್ನವೆನಿಸಿಬಿಡುತ್ತದೆ.