ಮೇಘನಾ ಗುಲ್ಜಾರ್‌ ನಿರ್ದೇಶನದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೇಕ್‌ ಷಾ ಬಯೋಪಿಕ್‌ ಹಿಂದಿ ಸಿನಿಮಾ ‘ಸ್ಯಾಮ್ ಬಹದ್ದೂರ್’ ಟೀಸರ್‌ ಬಿಡುಗಡೆಯಾಗಿದೆ. ವಿಕ್ಕಿ ಕೌಶಾಲ್‌ ಶೀರ್ಷಿಕೆ ಪಾತ್ರ ನಿರ್ವಹಿಸಿದ್ದು ಫಾತಿಮಾ ಸನಾ ಶೇಖ್‌ ಮತ್ತು ಸಾನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಡಿಸೆಂಬರ್‌ 1ರಂದು ಸಿನಿಮಾ ತೆರೆಕಾಣಲಿದೆ.

ವಿಕ್ಕಿ ಕೌಶಲ್, ಫಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸ್ಯಾಮ್ ಬಹದ್ದೂರ್ʼ (Sam Bahadur) ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ದೇಶದ ಅಪ್ರತಿಮ ಸೇನಾ ನಾಯಕ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ ಷಾ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದು, ಭವಾನಿ ಅಯ್ಯರ್ ಮತ್ತು ಶಂತನು ಶ್ರೀವಾಸ್ತವ್ ಚಿತ್ರಕಥೆ ಬರೆದಿದ್ದಾರೆ. ಟೀಸರ್‌ನಲ್ಲಿ ದೇಶದ ಅಪ್ರತಿಮ ಸೇನಾ ನಾಯಕ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೇಕ್‌ ಷಾ ಅವರ ದೇಶಭಕ್ತಿ, ಅವರು ರಾಷ್ಟ್ರಕ್ಕಾಗಿ ಸಲ್ಲಿಸಿದ ಸೇವೆ, ಶಿಸ್ತು ಮತ್ತು ತ್ಯಾಗವನ್ನು ತೋರಿಸಲಾಗಿದೆ. 1971ರ ಭಾರತ – ಪಾಕಿಸ್ತಾನ ಯುದ್ಧದ ಸಮಯದಲ್ಲಿ ಫೀಲ್ಡ್ ಮಾರ್ಷಲ್ ಮತ್ತು ಭಾರತೀಯ ಸೇನೆಯ ಸೇನಾ ಮುಖ್ಯಸ್ಥರ ಶ್ರೇಣಿಯನ್ನು ಸಾಧಿಸಿದ ಮೊದಲ ಭಾರತೀಯ ಸೇನಾ ಅಧಿಕಾರಿ ಸ್ಯಾಮ್ ಮಾಣೇಕ್‌ ಷಾ ಅವರ ಜೀವನ ಈ ಚಲನಚಿತ್ರಕ್ಕೆ ಸ್ಫೂರ್ತಿಯಾಗಿದೆ.

ಚಿತ್ರವನ್ನು ಮೇಘನಾ ಗುಲ್ಜಾರ್ ಮತ್ತು ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ಜೈ ಐ ಪಟೇಲ್ ಛಾಯಾಗ್ರಾಹಣ, ಮಹರ್ಷ್ ಶಾ ಸಹಾಯಕ ನಿರ್ಮಾಣ, ನಿತಿನ್ ಬೈದ್ ಸಂಕಲನ ಚಿತ್ರಕ್ಕಿದೆ. ಶಂಕರ್ ಎಹ್ಸಾನ್ ಲಾಯ್ ಸಂಗೀತ ಸಂಯೋಜಿಸಿದ್ದು, ಗುಲ್ಜಾರ್ ಸಾಹಿತ್ಯ ಬರೆದಿದ್ದಾರೆ. ನೀರಜ್ ಕಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವು ಡಿಸೆಂಬರ್ 1, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಸ್ಯಾಮ್ ಬಹದ್ದೂರ್’ ಚಿತ್ರತಂಡ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಡಿಸೆಂಬರ್ 2021ರಲ್ಲಿ ವಿಕ್ಕಿ ಕೌಶಾಲ್‌, ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಸೇರಿದಂತೆ ಉಳಿದ ಪಾತ್ರವರ್ಗವನ್ನು ಘೋಷಿಸಲಾಗಿತ್ತು.

LEAVE A REPLY

Connect with

Please enter your comment!
Please enter your name here