ತೆಲುಗು ನಟ ಪ್ರಭಾಸ್ ಈಗ ಪ್ಯಾನ್‌ ಇಂಡಿಯಾ ಸ್ಟಾರ್. ಅವರಿಗಾಗಿ ದೊಡ್ಡ ಬಜೆಟ್‌ನ ಬಹುಭಾಷಾ ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರುತ್ತಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಕಾಲ ಪ್ರಭಾಸ್ ಬ್ಯುಸಿ.

ಟಾಲಿವುಡ್ ನಟ ಪ್ರಭಾಸ್ ‘ಬಾಹುಬಲಿ’ ಚಿತ್ರಕ್ಕಾಗಿ ಸುಮಾರು ಐದು ವರ್ಷಗಳನ್ನು ವ್ಯಯಿಸಿದ್ದಾರೆ. ಈ ಚಿತ್ರ ಅವರನ್ನು ಪ್ಯಾನ್-ಇಂಡಿಯಾ ಸ್ಟಾರ್ ಆಗಿಸಿತು. ಆದರೆ, ಆ ನಂತರದ ಅವರ ‘ಸಾಹೋ’ ಚಿತ್ರ ಅಷ್ಟು ಯಶಸ್ಸು ಕಾಣಲಿಲ್ಲ. ಆದರೇನಂತೆ ಹಲವಾರು ಚಲನಚಿತ್ರ ನಿರ್ಮಾಪಕರು ಪ್ರಭಾಸ್ ಜೊತೆ ದೊಡ್ಡ ಸಿನಿಮಾಗಳನ್ನು ಮಾಡಲು ಆಸಕ್ತಿ ತೋರುತ್ತಿದ್ದಾರೆ. ನಟ ಪ್ರಭಾಸ್ ಅನೇಕ ಪ್ಯಾನ್-ಇಂಡಿಯನ್ ಸಿನಿಮಾ ಯೋಜನೆಗಳಿಗೆ ಸಹಿ ಹಾಕಿದ್ದಾರೆ. ಪ್ರಭಾಸ್ ಅವರ ಮುಂದಿನ ಚಿತ್ರ ‘ರಾಧೆ ಶ್ಯಾಮ್’ ಎಲ್ಲಾ ಭಾರತೀಯ ಭಾಷೆಗಳಲ್ಲಿ ಜನವರಿ 14ರಂದು ಬಿಡುಗಡೆಯಾಗಲಿದೆ. ‘ಸಲಾರ್’ ಮತ್ತು ‘ಆದಿಪುರುಷ್’ ಇದೇ ರೀತಿ ವಿವಿಧ ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಹಾಗಾಗಿ ಪ್ರಭಾಸ್ 2022 ಅನ್ನು ಎದುರು ನೋಡುತ್ತಿದ್ದಾರೆ. ಆದರೆ, ಸದ್ಯಕ್ಕೆ ಅವರು ಶೂಟಿಂಗ್ ಮೋಡ್‌ನಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಾಗ್ ಅಶ್ವಿನ್ ಅವರು ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಅವರ ತಾರಾಗಣದ ಚಿತ್ರ ಮಾಡುತ್ತಿದ್ದಾರೆ. ಅದಕ್ಕೆ ತಾತ್ಕಾಲಿಕವಾಗಿ ‘ಪ್ರಾಜೆಕ್ಟ್ K’ ಎಂದು ಹೆಸರಿಡಲಾಗಿದೆ. ಈ ಚಿತ್ರ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಪ್ರಭಾಸ್ ಈಗ ತಮ್ಮ ಚಿತ್ರಗಳ ವಿಷಯದಲ್ಲಿ ಇನ್ನೊಂದು ಅಚ್ಚರಿ ಮೂಸಿದ್ದಾರೆ. ಅವರು ತಮ್ಮ 25ನೇ ಚಿತ್ರವನ್ನು ‘ಅರ್ಜುನ್ ರೆಡ್ಡಿ’ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಮಾಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ಈ ಚಿತ್ರಕಥೆಯನ್ನು ಹಲವಾರು ಟಾಲಿವುಡ್ ನಟರು ತಿರಸ್ಕರಿಸಿದ್ದರಂತೆ. ಆದರೆ ಪ್ರಭಾಸ್ ಮಾತ್ರ ಮೊದಲ ಬಾರಿ ಕಥೆ ಕೇಳಿದಾಗಲೇ ಚಿತ್ರಕ್ಕೆ ಸಹಿ ಹಾಕಿದರಂತೆ. ಇದಲ್ಲದೆ ಒಂದು ಹೈ ವೋಲ್ಟೇಜ್ ಆಕ್ಷನ್ ಎಂಟರ್‌ಟೇನರ್‌ಗಾಗಿ ಅವರು ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆಗೂ ಮಾತುಕತೆ ನಡೆಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸಲಿದೆ. ಇದರ ಜೊತೆಗೆ, ನಿರ್ಮಾಪಕ ದಿಲ್ ರಾಜು, ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ ಅನ್ನು ಶೀಘ್ರದಲ್ಲೇ ಪುನರಾವರ್ತಿಸಲು ಉತ್ಸುಕರಾಗಿದ್ದಾರೆ. ಪ್ರಭಾಸ್ ಅವರು ‘ಸಲಾರ್’ ಮತ್ತು ‘ಆದಿಪುರುಷ’ದ ಚಿತ್ರೀಕರಣವನ್ನು ಮುಗಿಸುವ ವೇಳೆಗೆ ಈ ಎರಡೂ ಯೋಜನೆಗಳನ್ನು ಘೋಷಿಸುವ ಯೋಚನೆಯಲ್ಲಿದ್ದಾರೆ. 2021ರ ಅಂತ್ಯದ ಮೊದಲು ಪ್ರಭಾಸ್ ಅವರ ಎರಡು ಹೊಸ ಚಿತ್ರಗಳು ಅನೌನ್ಸ್ ಆದರೆ ಅಚ್ಚರಿ ಏನಿಲ್ಲ. ಹಾಗಾಗಿ, ಮುಂದಿನ 3-4 ವರ್ಷಗಳವರೆಗೆ ಪ್ರಭಾಸ್ ಬುಕ್ ಆಗಿದ್ದಾರೆ ಎಂಬುದನ್ನು ಈ ಸಂಗತಿಗಳು ಹೇಳುತ್ತವೆ.

LEAVE A REPLY

Connect with

Please enter your comment!
Please enter your name here