ನಟಿ ಸಮಂತಾ ‘ಅರೇಂಜ್‌ಮೆಂಟ್ಸ್ ಆಫ್ ಲವ್’ ಇಂಗ್ಲಿಷ್ ಸಿನಿಮಾದಲ್ಲಿ ತಮಿಳು ಮೂಲದ ಬೈಸೆಕ್ಸ್ಯುಯಲ್ ಮಹಿಳೆಯ ಪಾತ್ರದಲ್ಲಿ ನಟಿಸಲಿದ್ದಾರೆ. ‘ಡೌನ್‌ಟನ್ ಅಬ್ಬೇ’, ‘ದಿ ಗುಡ್ ಕರ್ಮಾ ಹಾಸ್ಪಿಟಲ್’ ಸಿನಿಮಾಗಳ ನಿರ್ದೇಶಕ ಫಿಲಿಪ್ ಜಾನ್ ನಿರ್ದೇಶನದ ನೂತನ ಚಿತ್ರವಿದು.
ಬಹುಭಾಷಾ ನಟಿ ಸಮಂತಾ ‘ಅರೇಂಜ್‌ಮೆಂಟ್ಸ್ ಆಫ್ ಲವ್’ ಇಂಗ್ಲಿಷ್ ಸಿನಿಮಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇದು ಅವರ ಚೊಚ್ಚಲ ಇಂಗ್ಲಿಷ್ ಚಿತ್ರವಾಗಿದ್ದು, ವೃತ್ತಿ ಬದುಕಿನ ಮಹತ್ವದ ಪ್ರಯೋಗವಾಗಲಿದೆ. BAFTA ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಫಿಲಿಪ್ ಜಾನ್ ನಿರ್ದೇಶನದ ಈ ಸಿನಿಮಾದಲ್ಲಿ ಸಮಂತಾ ತಮಿಳು ಮೂಲದ ಬೈಸೆಕ್ಸ್ಯುಯಲ್ ಮಹಿಳೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಸಮಂತಾ ನಟಿಸಿದ್ದ ‘ಓಹ್! ಬೇಬಿ’ ತೆಲುಗು ಸಿನಿಮಾ ನಿರ್ಮಿಸಿದ್ದ ಗುರು ಫಿಲ್ಮ್ಸ್ ಈ ಇಂಗ್ಲಿಷ್ ಸಿನಿಮಾ ನಿರ್ಮಿಸಲಿದೆ. ಲೇಖಕ ತಿಮೆರಿ ಎನ್.ಮುರಾರಿ ಅವರ 2004ರ ಬೆಸ್ಟ್ ಸೆಲ್ಲರ್ ಕೃತಿ ಆಧರಿಸಿ ‘ಅರೇಂಜ್‌ಮೆಂಟ್ಸ್ ಆಫ್ ಲವ್’ ಸಿದ್ಧವಾಗಲಿದೆ.
ಚಿತ್ರದಲ್ಲಿ ಸಮಂತಾಗೆ ಸ್ವಂತ ಡಿಟೆಕ್ಟೀವ್ ಕಂಪನಿ ನಡೆಸುವ ತಮಿಳು ಮೂಲದ ಬೈಸೆಕ್ಸ್ಯುಯಲ್ ಮಹಿಳೆಯ ಪಾತ್ರ. ಸಾಂಪ್ರದಾಯಕ ಕುಟುಂಬದ ಆಕೆ ತನ್ನದ್ದೊಂದು ಅಸ್ತಿತ್ವ ಕಂಡುಕೊಳ್ಳುವ ಆಕಾಂಕ್ಷಿ. ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ತನ್ನ ತಂದೆಯನ್ನು ಹುಡುಕುತ್ತಾ ಭಾರತಕ್ಕೆ ಬರುತ್ತಾರೆ. ಈ ಹುಡುಕಾಟದಲ್ಲಿ ಆತನಿಗೆ ನೆರವಾಗುವ ಪಾತ್ರ ಸಮಂತಾರದ್ದು. “ಫಿಲಿಪ್ ಜಾನ್ ಅವರ ಚಿತ್ರಗಳ ಅಭಿಮಾನಿ ನಾನು. ಈಗ ಅವರ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ನನ್ನ ಪಾಲಿಗೆ ಇದೊಂದು ಅಪೂರ್ವ ಜರ್ನೀಯಾಗಲಿದೆ. ಇದು ಸವಾಲಿನ ಪಾತ್ರವಾಗಿದ್ದು, ನಟನೆಗೆ ಸಾಕಷ್ಟು ಸ್ಕೋಪ್ ಇದೆ” ಎಂದಿದ್ದಾರೆ ಸಮಂತಾ. ತಿಂಗಳುಗಳ ಹಿಂದೆ ಸ್ಟ್ರೀಮ್ ಆದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿನ ಉತ್ತಮ ಪಾತ್ರಪೋಷಣೆಗೆ ಸಮಂತಾ ಅಪಾರ ಮನ್ನಣೆ ಗಳಿಸಿದ್ದರು. ನಟ ನಾಗಚೈತನ್ಯ ಅವರಿಂದ ಬೇರ್ಪಟ್ಟ ನಂತರ ವಿಶೇಷ, ಸವಾಲಿನ ಪಾತ್ರಗಳ ಹುಡುಕಾಟದಲ್ಲಿದ್ದಾರವರು. ಇದರ ಮೊದಲ ಪ್ರಯತ್ನವಾಗಿ ಇಂಗ್ಲಿಷ್ ಸಿನಿಮಾದ ಅವಕಾಶ ಅವರದಾಗಿದೆ.