ಆಂಧ್ರಪ್ರದೇಶ ಸರ್ಕಾರ ಕೈಗೊಂಡಿರುವ ಕೆಲವು ನಿರ್ಧಾರಗಳಿಂದ ತೆಲುಗು ಸಿನಿಮಾರಂಗದ ಪ್ರಮುಖರು ಅಸಮಾಧಾನಗೊಂಡಿದ್ದಾರೆ. ಸರ್ಕಾರ ಟಿಕೆಟ್‌ ದರವನ್ನು ಕಡಿತಗೊಳಿಸಿದೆ. ಹಿರಿಯ ನಟ ಚಿರಂಜೀವಿ ಈ ನಿರ್ಧಾರದ ಬಗ್ಗೆ ಮರುಚಿಂತನೆ ನಡೆಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಕೆಲವು ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಸರ್ಕಾರದಿಂದಲೇ ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡುವ ಯೋಜನೆ ರೂಪಿಸಿದ್ದಲ್ಲದೇ ಸಿನಿಮಾ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಥಿಯೇಟರ್‌ಗಳಿಗೆ ಪ್ರತ್ಯೇಕ ದರ ನಿಗಧಿ ಪಡಿಸಿರುವುದಲ್ಲದೆ, ಟಿಕೆಟ್ ದರವನ್ನು ಕಡಿತಗೊಳಿಸಲಾಗಿದೆ. ಈ ನಿರ್ಣಯಗಳ ಕುರಿತು ವಿಧಾನಸಭೆಯಲ್ಲಿ ಅನುಮೋದನೆಯೂ ಆಗಿದ್ದು, ಈ ಬೆಳವಣಿಗೆ ತೆಲುಗು ಚಿತ್ರರಂಗದ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಹಿರಿಯ ನಟ ಚಿರಂಜೀವಿ ಅವರು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಿಗೆ ಟ್ವಿಟರ್ ಮೂಲಕ ಪತ್ರ ಬರೆದಿದ್ದು, ಟಿಕೆಟ್ ದರದ ಕುರಿತು ಮರುಚಿಂತನೆ ನಡೆಸಲು ಮನವಿ ಮಾಡಿದ್ದಾರೆ. “ಆನ್‌ಲೈನ್‌ ಸಿನಿಮಾ ಟಿಕೆಟ್ ಪಾಲಿಸಿಯನ್ನು ನಾವು ಸ್ವಾಗತಿಸುತ್ತೇವೆ. ಇದು ಪಾರದರ್ಶಕತೆಗೆ ಅನುವು ಮಾಡಿಕೊಡುತ್ತದೆ. ಆದರೆ ಟಿಕೆಟ್ ದರ ಕಡಿತಗೊಳಿಸಿರುವುದು ಸರಿಯಲ್ಲ. ಸಿನಿಮಾರಂಗವನ್ನೇ ನಂಬಿ ಬದುಕುವವರಿಗೆ ಇದು ದುಬಾರಿಯಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಈ ನಿರ್ಧಾರದ ಬಗ್ಗೆ ಮರುಚಿಂತನೆ ನಡೆಸಬೇಕು” ಎಂದು ಚಿರಂಜೀವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಂಧ್ರಪ್ರದೇಶ ಸರ್ಕಾರದ ಈ ನಡೆಯಲ್ಲಿ ರಾಜಕೀಯ ಮೇಲಾಟವಿದೆ ಎಂದೂ ಹೇಳಲಾಗುತ್ತಿದೆ. ಈ ಹಿಂದೆ ‘ವಕೀಲ್ ಸಾಬ್‌’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಟ ಪವನ್ ಕಲ್ಯಾಣ್‌ ಅವರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ತೊಡೆ ತಟ್ಟಿದ್ದರು. ಅದರ ಪರಿಣಾಮ ಈಗ ದೊಡ್ಡ ಸಿನಿಮಾಗಳ ಹೀರೋಗಳ ಮೇಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತದೆ. ಟಿಕೆಟ್ ದರ ಕಡಿತಗೊಳಿಸುವುದರಿಂದ ಸ್ಟಾರ್ ಹೀರೋಗಳ ದುಬಾರಿ ಸಿನಿಮಾಗಳಿಗೇ ನಷ್ಟವಾಗುವುದು. ಈಗ ತೆರೆಗೆ ಸಿದ್ಧವಾಗಿರುವ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’, ಪವನ್ ಕಲ್ಯಾಣ್‌ರ ‘ಭೀಮ್ಲಾ ನಾಯಕ್‌’, ಪ್ರಭಾಸ್‌ರ ‘ರಾಧೆ’, ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’…. ಹೀಗೆ ದೊಡ್ಡ ಸಿನಿಮಾಗಳಿಗೆ ಸರ್ಕಾರದ ನಿರ್ಧಾರ ದುಬಾರಿಯಾಗಲಿದೆ.

Previous articleರಜನೀಕಾಂತ್ ‘ಅಣ್ಣಾತ್ತೆ’ ಓಟಿಟಿಗೆ; ನೆಟ್‌ಫ್ಲಿಕ್ಸ್‌, Sun NXTಯಲ್ಲಿ ಸಿನಿಮಾ
Next articleಫಿಲಿಪ್ ಜಾನ್‌ ನಿರ್ದೇಶನದಲ್ಲಿ ಸಮಂತಾ; ‘ಅರೇಂಜ್‌ಮೆಂಟ್ಸ್‌ ಆಫ್ ಲವ್‌’ ಇಂಗ್ಲಿಷ್ ಸಿನಿಮಾ

LEAVE A REPLY

Connect with

Please enter your comment!
Please enter your name here