ತಾನೇ ಎಲ್ಲಾ, ತನ್ನಿಂದಾನೇ ಎಲ್ಲಾ ಎನ್ನುವ ವ್ಯಕ್ತಿಗೆ “ತಾನು ಏನು ಅಲ್ಲಾ” ಎಂಬುದು ಅರಿವಾಗುತ್ತದೆ. ಹುಟ್ಟು ಹಾಗೂ ಸಾವಿನ ಮದ್ಯೆ ನಾವೆಲ್ಲ ಬರೀ ಪಾತ್ರಧಾರಿಗಳು ಎನ್ನುವ ತಾತ್ಪರ್ಯ- ZEE5 ನಲ್ಲಿ ಸ್ಟ್ರೀಮ್ ಆಗುತ್ತಿದೆ ಸಮುದ್ರಖನಿ ತಮಿಳು ಸಿನಿಮಾ ʼವಿನೋಧಯ ಸಿತಂʼ
ಆತನ ಹೆಸರು ಪರಶುರಾಮ್. ಸುಮಾರು 55 ವಯಸ್ಸಿನ ವ್ಯಕ್ತಿ. ತುಂಬಾ ಶಿಸ್ತಿನ ವ್ಯಕ್ತಿತ್ವ. ಈತನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಎಲ್ಲರನ್ನೂ ತನ್ನ ಹತೋಟಿಯಲ್ಲೆ ಇಟ್ಟಿರುತ್ತಾನೆ. ಇವನು ಕೆಲಸ ಮಾಡುವ ಜಾಗದಲ್ಲೂ ಸಹ. ತಾನಿಲ್ಲದಿದ್ದರೆ ಈ ಕಂಪನಿ ಇಲ್ಲ, ಹಾಗೂ ತನ್ನ ಕುಟುಂಬ ಸಹ ಇಲ್ಲ ಎನ್ನುವ ಭ್ರಮೆಯಲ್ಲಿರುತ್ತಾನೆ. ಹೀಗಿರುವಾಗ ಒಮ್ಮೆ ಇವನು ಪ್ರಯಾಣ ಮಾಡುತ್ತಿರುವ ಕಾರಿಗೆ ಆಕ್ಸಿಡೆಂಟ್ ಆಗಿ ಇವನು ಸಾವಿನ ಅಂಚಿಗೆ ಹೋಗುತ್ತಾನೆ. ತಾನು ಸಾಯುತ್ತಿರುವುದು ತನಗೆ ಗೊತ್ತಾಗಿ ತನ್ನ ಜವಾಬ್ದಾರಿಗಳು ನೆನಪಾಗುತ್ತವೆ. ಏನು ಮಾಡಬೇಕೆಂದು ತೋಚದಾಗ ಇವನ ಮುಂದೆ ಒಬ್ಬ ವ್ಯಕ್ತಿ ಬಂದು ನಿಂತು, “ನಾನೇ ಸೃಷ್ಟಿಕರ್ತ. ನಿನ್ನ ಸಮಯ ಮುಗೀತು, ಬಾ ಹೋಗೋಣ” ಎನ್ನಲು ಇವನು ತನಗಿರುವ ಜವಾಬ್ದಾರಿಗಳನ್ನು ತಿಳಿಸಿ ಅವನ ಬಳಿ ಇನ್ನೂ ಸ್ವಲ್ಪ ಸಮಯ ಕೇಳಲು, ಅವನು ಇವನಿಗೆ 90 ದಿನಗಳ ಕಾಲ ಸಮಯ ನಿಗದಿ ಮಾಡಿ ನಿನ್ನ ಜವಾಬ್ದಾರಿಗಳನ್ನೂ ಮುಗಿಸಿ ವಾಪಾಸ್ ಆಗಬೇಕು ಎಂದು ಹೇಳಿ ಅವನಿಗೆ ಸಮಯ ನೀಡುತ್ತಾನೆ .
ನಂತರ ನಡೆಯುವುದನ್ನು ನೀವು ಚಿತ್ರದಲ್ಲೇ ನೋಡಿದರೆ ಒಳಿತು. ಚಿತ್ರದಲ್ಲಿ ಬದುಕಿನ ನಿಜವಾದ ಚಿತ್ರಣಗಳನ್ನು ತುಂಬಾ ಅದ್ಭುತವಾಗಿ ತೋರಿಸಲಾಗಿದೆ, ತಾನೆ ಎಲ್ಲಾ, ತನ್ನಿಂದಾನೆ ಎಲ್ಲಾ ಎನ್ನುವ ವ್ಯಕ್ತಿಗೆ “ತಾನು ಏನು ಅಲ್ಲಾ” ಎಂಬುದು ಅರಿವಾಗುತ್ತದೆ. ಹುಟ್ಟು ಹಾಗೂ ಸಾವಿನ ಮದ್ಯೆ ನಾವೆಲ್ಲ ಬರಿ ಪಾತ್ರಧಾರಿಗಳು ಅಷ್ಟೇ ಎಂಬುದನ್ನು ತುಂಬಾ ಪರಿಣಾಮಕಾರಿಯಾಗಿ ಹೇಳಲಾಗಿದೆ. ಚಿತ್ರದ ಕೊನೆಯ ಸಂದೇಶ ಸಹ ಅದ್ಭುತವಾಗಿದೆ. ಇನ್ನು ಟೆಕ್ನಿಕಲ್ ವಿಚಾರಕ್ಕೆ ಬಂದರೆ ಕ್ಯಾಮೆರಾ ಕೆಲಸ ಹಾಗೂ ಸಂಗೀತ ಎಲ್ಲವೂ ಚೆನ್ನಾಗಿದೆ. ಹಾಡುಗಳು ಮತ್ತು ಫೈಟ್ ಇಲ್ಲ. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಹರಿತವಾದ ಸಂಭಾಷಣೆ. ಕಂಟೆಂಟ್ ಸಿನಿಮಾ ಹೇಗಿರಬೇಕು ಎನ್ನುವುದಕ್ಕೆ ಒಂದೊಳ್ಳೆಯ ಉದಾಹರಣೆಯಿದು.
ನಿರ್ದೇಶನ : ಸಮುದ್ರಖನಿ | ಸಂಗೀತ : ಸಿ.ಸತ್ಯ | ಸಂಕಲನ : ಎ.ಎಲ್.ರಮೇಶ್ | ತಾರಾಬಳಗ : ಸಮುದ್ರಖನಿ, ತಂಬಿ ರಾಮಯ್ಯ, ಮುನಿಶ್‌ಕಾಂತ್