ಲೇಖಕ ಅಗ್ನಿ ಶ್ರೀಧರ್ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ಅಭಿಷೇಕ್ ಬಸಂತ್ ನಿರ್ದೇಶಿಸಲಿರುವ ‘ಕ್ರೀಂ’ ಸಿನಿಮಾ ಘೋಷಣೆಯಾಗಿದೆ. ಈ ನಾಯಕಿ ಪ್ರಧಾನ ಚಿತ್ರದಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಖ್ಯಾತಿಯ ಸಂಯುಕ್ತ ಹೆಗಡೆ ಅಭಿನಯಿಸುತ್ತಿದ್ದಾರೆ.
ಅಗ್ನಿ ಶ್ರೀಧರ್ ಅವರ ಕೃತಿಗಳನ್ನು ಆಧರಿಸಿ ಕೆಲವು ಸಿನಿಮಾಗಳು ತಯಾರಾಗಿವೆ. ವರ್ಷಗಳ ನಂತರ ಅವರು ಮತ್ತೆ ಸಿನಿಮಾಗೆ ಮರಳಿದ್ದಾರೆ. ಈ ಬಾರಿ ಅವರು ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದು ಅಭಿಷೇಕ್ ಬಸಂತ್ ಸಿನಿಮಾ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ‘ಕ್ರೀಂ’ ಎಂದು ಶೀರ್ಷಿಕೆ ನಿಗದಿಯಾಗಿದೆ. ಸಿನಿಮಾ ಬಗ್ಗೆ ಮಾತನಾಡಿದ ಅಗ್ನಿ ಶ್ರೀಧರ್, “ಪರಿಚಯಸ್ಥರೊಬ್ಬರ ಮೂಲಕ ದೇವೇಂದ್ರ ಅವರು ನನ್ನನ್ನು ಭೇಟಿಯಾಗಿ ಸಿನಿಮಾವೊಂದಕ್ಕೆ ಕತೆ ಬೇಕೆಂದರು. ಬೇರೆ ಚಿತ್ರವೊಂದಕ್ಕೆ ಕತೆ ಬರೆಯುತ್ತಿದ್ದೀನಿ ಅಂದೆ. ದೇವೇಂದ್ರ ಅವರ ಒತ್ತಾಯದ ಮೇರೆಗೆ ಒಪ್ಪಿಕೊಳ್ಳಲೇಬೇಕಾಯಿತು. ನನ್ನ ಹಿಂದಿನ ಕಥೆಗಳಿಗಿಂತ ಇದು ಭಿನ್ನವಾಗಿರಲಿದೆ. ವಾಸ್ತಾವಾಂಶಗಳು ಕಥೆಯಲ್ಲಿ ಹೆಚ್ಚಿರುತ್ತದೆ. ನಿರ್ದೇಶಕ ಅಭಿಷೇಕ್‌ನನ್ನು ಚಿಕ್ಕಂದಿನಿಂದಲೂ ಬಲ್ಲೆ. ಈ ಚಿತ್ರದ ಮೂಲಕ ಆತ ನಿರ್ದೇಶಕನಾಗುತ್ತಿದ್ದಾನೆ” ಎಂದರು.
ಇದು ಮಹಿಳಾ ಪ್ರಧಾನ ಸಿನಿಮಾ. ಚಿತ್ರದ ನಾಯಕಿ ಪಾತ್ರಕ್ಕೆ ಸಂಯುಕ್ತ ಹೆಗಡೆ ಅವರೇ ಸರಿ ಎಂದು ಅಗ್ನಿ ಶ್ರೀಧರ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರಲ್ಲಿ ಮುಗ್ಧತೆ ಮತ್ತು ಧೈರ್ಯ ಎರಡೂ ಗುಣಗಳಿವೆ ಎನ್ನುವುದು ಅವರ ಸಮಜಾಯಿಷಿ. ಏಪ್ರಿಲ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಆಗಸ್ಟ್ -ಸೆಪ್ಟೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. “‘ಕ್ರೀಂ’ ಎಂದರೆ ಸಂಸ್ಕೃತದಲ್ಲಿ ಬರುವ ದೇವಿಯ ಕುರಿತಾದ ಮಂತ್ರ. ಈ ಸದ್ಯಕ್ಕೆ ಚಿತ್ರದ ಬಗ್ಗೆ ಇಷ್ಟು ಮಾಹಿತಿ ನೀಡಬಹುದು” ಎಂದರು ಅಗ್ನಿ ಶ್ರೀಧರ್. ಚಿತ್ರ ನಿರ್ದೇಶಿಸುತ್ತಿರುವ ಅಭಿಷೇಕ್ ಬಸಂತ್ ಮಾತನಾಡಿ, “ಚಿಕ್ಕಂದಿನಿಂದಲೂ ನನಗೆ ಸಿನಿಮಾ ಬಗ್ಗೆ ಆಸಕ್ತಿ. ಎಂಬಿಎ ಮತ್ತು ಎಂಎಸ್ ಓದಿಕೊಂಡರೂ ನನ್ನಾಸೆಯಂತೆ ಚಿತ್ರರಂಗದತ್ತ ಬಂದಿದ್ದೀನಿ. ‘ಹೆಡ್ ಬುಷ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಅಗ್ನಿ ಶೀಧರ್ ಸರ್ ಜೊತೆಗಿನ ಒಡನಾಟದಿಂದ ಹೆಚ್ಚಿನ ಅನುಭವ ಪಡಿದಿದ್ದೇನೆ” ಎಂದರು.
ಬಹುದಿನಗಳ ನಂತರ ದೊಡ್ಡ ಪಾತ್ರದಲ್ಲಿ ನಟಿಸುತ್ತಿರುವ ಖುಷಿ ಸಂಯುಕ್ತ ಅವರದ್ದು. “ಈ ಚಿತ್ರದಲ್ಲಿ ನಾನು ಫಿಮೇಲ್ ಹೀರೋ ಅನ್ನಬಹುದು. ನಾನು ಈವರೆಗೆ ಮಾಡಿರದ ಪಾತ್ರ ಎಂದಷ್ಟೇ ಹೇಳಬಹುದು. ಕತೆ, ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡುವಂತಿಲ್ಲ” ಎಂದ ಸಂಯುಕ್ತ ಪಾತ್ರಕ್ಕೆ ಆಯ್ಕೆ ಮಾಡಿದ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ಹೇಳಿದರು. “ನನ್ನ ನಿರ್ಮಾಣದ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರು ಕಥೆ ಕೊಟ್ಟಿರುವುದಕ್ಕೆ ಹೆಚ್ಚು ಖುಷಿಯಾಗಿದೆ. ಅವರಿಗೆ ವಿಶೇಷ ಧನ್ಯವಾದ. ಪ್ರೇಕ್ಷಕರಿಗೆ ಕೊಟ್ಟ ದುಡ್ಡಿಗೆ ಮೋಸ ಆಗದಂತಹ ಚಿತ್ರವಿದು. ತೆಲುಗಿನಲ್ಲಿ ಕೆಲವು ಚಿತ್ರ ನಿರ್ಮಾಣ ಮಾಡಿ ಮತ್ತೆ ಈಗ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದೀನಿ” ಎಂದರು ನಿರ್ಮಾಪಕ ದೇವೇಂದ್ರ.
ನಟ ಅರುಣ್ ಸಾಗರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. “ಚಿತ್ರಕ್ಕೆ ಸಂಬಂಧಿಸಿದಂತೆ ಅಗ್ನಿ ಶ್ರೀಧರ್ ಅವರನ್ನು ಭೇಟಿ ಮಾಡಿ ಸಾಕಷ್ಟು ಮಾತನಾಡಿದೆ. ಅವರು ಆಳದ ಹಾಗೂ ಆಳುವ ಮನುಷ್ಯ. ಅವರ ಎಲ್ಲಾ ಕಥೆಗಳು ಚೆನ್ನಾಗಿದೆ. ಈ ಸಿನಿಮಾ ಕೂಡ ಉತ್ತಮವಾಗಿ ಮೂಡುಬರುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದರು ಅರುಣ್ ಸಾಗರ್. ಚಿತ್ರದ ಛಾಯಾಗ್ರಾಹಕರಾಗಿ ಸುನೋಜ್ ವೇಲಾಯುಧನ್ ಕಾರ್ಯನಿರ್ವಹಿಸಲಿದ್ದಾರೆ.